ದಾವಣಗೆರೆ ರೈಲು ನಿಲ್ದಾಣದ ಪಕ್ಕದಲ್ಲಿರುವ ಜಿಲ್ಲಾ ಉಪವಿಭಾಗಾಧಿಕಾರಿಗಳ ಕಚೇರಿಯು ಸ್ವಚ್ಛತೆ ಮತ್ತು ಸುರಕ್ಷತೆ ಇಲ್ಲದೆ ಕಸದ ಮೈದಾನ ಮತ್ತು ಕುಡುಕರ ಅಡ್ಡೆಯಾಗಿ ಬದಲಾಗಿದ್ದು, ಸರ್ಕಾರಿ ಕಚೇರಿಗಳು ಎಷ್ಟು ಸುರಕ್ಷಿತ ಎನ್ನುವ ಪ್ರಶ್ನೆ ಮೂಡಿದೆ.
ಪ್ರಸ್ತುತ ಹಳೆಯ ಕಟ್ಟಡದಲ್ಲಿಯೇ ಕಾರ್ಯ ನಿರ್ವಹಿಸುತ್ತಿರುವ ಉಪವಿಭಾಗಾಧಿಕಾರಿ ಮತ್ತು ಉಪ ವಿಭಾಗೀಯ ದಂಡಾಧಿಕಾರಿಗಳ ಕಚೇರಿ ಪ್ರೌಢಶಾಲಾ ಮೈದಾನದ ಎದುರಿನ ರಸ್ತೆಗೆ ಹೊಂದಿಕೊಂಡಂತಿದ್ದು, ಮೂರು ದಿಕ್ಕುಗಳಿಂದ ರೈಲು ನಿಲ್ದಾಣದಿಂದ ಸುತ್ತುವರಿದಿದೆ. ಇಂತಹ ಕಚೇರಿಗೆ ನಾಲ್ಕು ದಿಕ್ಕಿನಿಂದಲೂ ರಕ್ಷಣೆ ಇಲ್ಲದಾಗಿದ್ದು, ಸಂಜೆಯ ಆಫೀಸ್ ವೇಳೆ ನಂತರ ಸೂಕ್ತ ಬಂದೋಬಸ್ತ್, ಕಾವಲು ಇಲ್ಲದೆ ಕುಡುಕರ ತಾಣವಾಗಿ ಬದಲಾಗಿದೆಯೇ ಎನ್ನುವಂತಾಗಿದೆ.
ನಗರದ ಮಧ್ಯಭಾಗವಾದ ಜನಜಂಗುಳಿಯಿಂದ ಕೂಡಿರುವಂತಹ ಸ್ಥಳದಲ್ಲಿಯೂ ಕೂಡ ಸೂಕ್ತ ರಕ್ಷಣೆ ಇಲ್ಲದಿರುವುದು ಹಾಗೂ ಕಚೇರಿ ಆವರಣ ಕೂಡ ಕಸ ಕಡ್ಡಿಗಳಿಂದ ತುಂಬಿ ವಾರಾಂತ್ಯದಲ್ಲಿ ಸ್ವಚ್ಛಗೊಳಿಸದೆ ಹೋಗಿರುವುದು ಕಚೇರಿಯ ದುಃಸ್ಥಿತಿಗೆ ಮತ್ತು ಆಡಳಿತ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ.

ಶನಿವಾರ ಬೆಳಿಗ್ಗೆ ಸಂಘಟನೆಯೊಂದರ ಪ್ರತಿಭಟನೆಯ ವೇಳೆ ಈ ದಿನ.ಕಾಮ್ ಮಾಧ್ಯಮ ಪ್ರತಿನಿಧಿಗಳು, ಸಂಘಟನೆಗಳ ಮುಖಂಡರು ಕಚೇರಿ ಆವರಣಕ್ಕೆ ಭೇಟಿ ನೀಡಿದಾಗ ಈ ದೃಶ್ಯಗಳು ಕಂಡುಬಂದಿದ್ದು, ಕಚೇರಿಯ ಮೇಲ್ಛಾವಣಿ ಹೊದಿಕೆಯನ್ನು ಸ್ವಚ್ಛಗೊಳಿಸುವ ವೇಳೆ ಕೆಳಗೆ ಹಾಕಿರುವ ಒಣ ಎಲೆ, ಕಸಕಡ್ಡಿ, ಪಕ್ಷಿ ಜನ್ಯ ತ್ಯಾಜ್ಯವನ್ನು ವಿಲೇವಾರಿ ಮಾಡದೇ ಕಚೇರಿ ಬಾಗಿಲಲ್ಲೇ ಬಿಟ್ಟು ಹೋಗಿರುವುದು ಕಂಡುಬಂದಿತು. ಅಲ್ಲದೆ ರೈಲು ನಿಲ್ದಾಣದ ಪೂರ್ವ ಭಾಗದ ಕಾಂಪೌಂಡಿಗೆ ಹೊಂದಿಕೊಂಡಿರುವ, ಅರಳಿ ಮರದ ಪಕ್ಕ ಸಾರ್ವಜನಿಕರಿಗೆ ಕಾಣದಂತೆ ಮರೆಯಲ್ಲಿರುವ ಕುಳಿತುಕೊಳ್ಳುವ ಚಾವಡಿ ಮೇಲೆ ದುಷ್ಕರ್ಮಿಗಳು ಮದ್ಯಪಾನ ಮಾಡಿ ಅಲ್ಲಿಯೇ ಮದ್ಯದ ಬಾಟಲಿ, ನೀರಿನ ಬಾಟಲಿ, ಶೇಂಗಾ ಬೀಜಗಳನ್ನು ಬಿಟ್ಟು ಹೋಗಿರುವ ದೃಶ್ಯವೂ ಕಂಡುಬಂದಿದೆ.
ಈ ಆವರಣದಲ್ಲಿಯೇ ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕರ ಕಚೇರಿ ಹಾಗೂ ದಂಡಾಧಿಕಾರಿಗಳ ನ್ಯಾಯಾಲಯವೂ ಇದ್ದು, ಈ ಕಟ್ಟಡಗಳ ಹಿಂಬಾಗದ ಅಕ್ಕಪಕ್ಕದಲ್ಲಿಯೂ ತ್ಯಾಜ್ಯ ತುಂಬಿಕೊಂಡಿದ್ದು, ಸ್ವಚ್ಛತೆ ಮರೀಚಿಕೆಯಾಗಿದೆ. ಅಲ್ಲಲ್ಲಿ ಮೂತ್ರ ವಿಸರ್ಜನೆಯ ತಾಣವಾಗಿಯೂ ಬದಲಾಗಿದೆ. ತಡೆಗೋಡೆ ಪಕ್ಕದಲ್ಲಿ ಕಚೇರಿ ಆವರಣದಲ್ಲಿ ತಿಂಡಿ ತಿನಿಸುಗಳ ಪಾಕೆಟ್, ಇತರ ತ್ಯಾಜ್ಯಗಳು ಬಿದ್ದಿರುವುದು ಸಾಮಾನ್ಯ ದೃಶ್ಯಗಳಾಗಿವೆ.

ಈ ಬಗ್ಗೆ ಕಾರ್ಮಿಕ ಸಂಘಟನೆಯ ಮುಖಂಡ ಮಂಜುನಾಥ್ ಪ್ರತಿಕ್ರಿಯಿಸಿದ್ದು, “ಸರ್ಕಾರಿ ಆವರಣಗಳು ಸ್ವಚ್ಛತೆಯಿಂದ ಜನಸ್ನೇಹಿಯಾಗಿರಬೇಕು. ಆದರೆ ಈ ಕಚೇರಿಗೆ ಸುರಕ್ಷತೆ ಇಲ್ಲವಾಗಿದೆ. ರಾತ್ರಿ ವೇಳೆ ಕುಡುಕರಿಗೆ ಸ್ನೇಹಿಯಾಗಿದೆ. ರಾತ್ರಿ, ಸಂಜೆ ವೇಳೆ ಇಲ್ಲಿ ತಡೆಗೋಡೆ ದಾಟಿ ಯಾರಾದರೂ ಬರಬಹುದಾದ ಅಸುರಕ್ಷಿತೆ ಇಲ್ಲಿದೆ. ದುಷ್ಕರ್ಮಿಗಳು, ಕುಡುಕರು, ಪ್ರಯಾಣಿಕರು ಯಾರು ಬೇಕಾದರೂ ಅಕ್ರಮವಾಗಿ ಪ್ರವೇಶಿಸಬಹುದಾಗಿದೆ. ಈ ಘಟನೆ ನೋಡಿದರೆ ಇಂತಹ ಘಟನೆಗಳು ಯಾರಿಗೂ ಕಾಣದಂತೆ ಏಷ್ಟೋ ಬಾರಿ ನಡೆದಿರಬಹುದು ಎನ್ನುವ ಅನುಮಾನ ಮೂಡುತ್ತದೆ. ಕೂಡಲೇ ಇದರ ಬಗ್ಗೆ ಕ್ರಮ ವಹಿಸಬೇಕು. ಆವರಣದಲ್ಲಿ ಸುರಕ್ಷತೆ ಕೈಗೊಳ್ಳಬೇಕು” ಎಂದು ಒತ್ತಾಯಿಸಿದರು.
ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಈ ದಿನ.ಕಾಮ್ ಉಪವಿಭಾಗಾಧಿಕಾರಿ ಸಂತೋಷ ಪಾಟೀಲ್ ಅವರನ್ನು ಸಂಪರ್ಕಿಸಿದಾಗ, “ಕಚೇರಿಯ ಮೇಲ್ಚಾವಣಿ ಕಸ ವಿಲೇವಾರಿಗೆ ನಾವೇ ಸೂಚನೆ ನೀಡಿದ್ದು, ಅದನ್ನು ಸ್ವಚ್ಛಗೊಳಿಸುತ್ತಿದ್ದಾರೆ. ಕಚೇರಿ ಆವರಣವನ್ನೂ ಕೂಡ ಸ್ವಚ್ಛಗೊಳಿಸುವಂತೆ ತಿಳಿಸಿದ್ದು, ಅದನ್ನು ಭಾನುವಾರದೊಳಗೆ ಸ್ವಚ್ಛಗೊಳಿಸಲಾಗುತ್ತದೆ” ಎಂದು ಉತ್ತರಿಸಿದರು.

“ಆವರಣದೊಳಗೆ ಮದ್ಯಪಾನ, ತಿಂಡಿಯ ಪೊಟ್ಟಣ ಸೇರಿದಂತೆ ಇತರ ದುಷ್ಕೃತ್ಯಗಳು ಈ ಮುಂಚೆಯೂ ನಮ್ಮ ಗಮನಕ್ಕೆ ಬಂದಿದ್ದು, ಅಲ್ಲಿ ಸಾಮಾನ್ಯವಾಗಿ ಕೆಲವು ರೈಲ್ವೆ ಪ್ರಯಾಣಿಕರು ಈ ಕೃತ್ಯವನ್ನು ನಡೆಸುತ್ತಿದ್ದಾರೆ. ಇದು ಇತ್ತೀಚಿನ ದಿನಗಳಲ್ಲಿ ಆಗಾಗ್ಗೆ ನಡೆಯುತ್ತಿದೆ. ಇದರ ವಿರುದ್ಧ ಎರಡು ಮೂರು ಬಾರಿ ರೈಲ್ವೆ ಪೊಲೀಸ್ ಸಿಬ್ಬಂದಿಗಳಿಗೆ ದೂರನ್ನು ನೀಡಿದ್ದೇವೆ. ಇದರ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಕಚೇರಿಯಿಂದ ಪತ್ರ ಬರೆಯಲಾಗಿದೆ. ರೈಲ್ವೆ ಆವರಣದಿಂದ ಕಚೇರಿಗೆ ಸುರಕ್ಷತೆ ಇಲ್ಲದಂತಾಗಿದ್ದು, ಈ ಹಿಂದೆ ರೈಲ್ವೆ ಆವರಣದಿಂದ ಬಾಲಕನೊಬ್ಬ ಕಚೇರಿಯ ಆವರಣದ ಕಾರೊಂದಕ್ಕೆ ಕಲ್ಲು ಹೊಡೆದ ಪ್ರಸಂಗವೂ ನಡೆದಿತ್ತು” ಎಂದು ಹೇಳಿದರು.
“ಕಚೇರಿಯ ಸಮಯ ಮುಗಿದ ನಂತರ ಆವರಣಕ್ಕೆ ರಾತ್ರಿ ವೇಳೆ ಅಲ್ಲಿ ಓಡಾಡುವ ಪ್ರಯಾಣಿಕರು ಫುಡ್ ಪ್ಯಾಕೆಟ್‌ಗಳನ್ನು ಎಸೆಯುವುದು, ತಡೆಗೋಡೆಯನ್ನು ಹಾರಿ ಬಂದು ಮದ್ಯಪಾನದಂತ ಚಟುವಟಿಕೆಗಳನ್ನು ನಡೆಸುವುದು ಈ ಹಿಂದೆಯೂ ನಡೆದಿದ್ದು, ಇದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮತ್ತು ರಾತ್ರಿ ಪೊಲೀಸ್ ಗಸ್ತು ನಡೆಸುವಂತೆ ರೈಲ್ವೆ ಪೊಲೀಸ್ ಇಲಾಖೆಗೆ ದೂರು ನೀಡಿ ಮನವಿ ಮಾಡಲಾಗಿದೆ. ಈ ಅನೈತಿಕ ಚಟುವಟಿಕೆಗಳ ವಿರುದ್ಧ ರೈಲ್ವೆ ಪೊಲೀಸರೇ ಕ್ರಮ ಕೈಗೊಳ್ಳಬೇಕು. ಮುಂದಿನ ದಿನಗಳಲ್ಲಿ ಈ ಬಗ್ಗೆ ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳಲು ಮನವಿ ಮಾಡಿ, ಕ್ರಮ ತೆಗೆದುಕೊಳ್ಳಲಾಗುವುದು” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಸಿಂಧನೂರು | ಸರಕಾರಿ ಯೋಜನೆಗಳ ಯಶಸ್ಸಿನ ಪಾತ್ರ ಅಂಗನವಾಡಿ ಕಾರ್ಯಕರ್ತೆಯರು; ಡಿಎಚ್ ಕಂಬಳಿ
“ಇತ್ತೀಚಿನ ದಿನಗಳಲ್ಲಿ ದಾವಣಗೆರೆ ನಗರದಲ್ಲಿ ಹಲವು ಅಕ್ರಮ ಚಟುವಟಿಕೆಗಳ ಬಗ್ಗೆ ವರದಿಯಾಗುತ್ತಿದ್ದು ಡ್ರಗ್ಸ್, ಗಾಂಜಾ ಅಫೀಮು ಸೇರಿದಂತೆ ಮಾದಕ ವಸ್ತುಗಳು ವ್ಯಾಪಕವಾಗಿ ಹರಡಿವೆ. ಅಲ್ಲದೆ ಇತ್ತೀಚಿನ ದಿನಗಳಲ್ಲಿ ಗಾಂಜಾ ಮಾರುವ, ಡ್ರಗ್ಸ್ ಸಾಗಿಸುವ ದುಷ್ಕರ್ಮಿಗಳೂ ಕೂಡ ಪೊಲೀಸರಿಗೆ ಸಿಕ್ಕಿಬಿದ್ದಿದ್ದು, ಪ್ರಕರಣಗಳು ದಾಖಲಾಗಿವೆ. ಸ್ಥಳೀಯರೂ ಕೂಡ ಇದರಲ್ಲಿ ಸಿಕ್ಕಿಬಿದ್ದಿದ್ದಾರೆ. ಈ ಹಿನ್ನೆಲೆಯಲ್ಲಿ ಆವರಣದಲ್ಲಿ ಇತರೆ ದುಷ್ಕೃತ್ಯಗಳು ನಡೆಯುವ ಮುನ್ನ ಇಲಾಖೆಗಳು ಎಚ್ಚೆತ್ತುಕೊಳ್ಳಬೇಕಿದೆ” ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನಗರದ ಕೇಂದ್ರ ಭಾಗದಲ್ಲಿ ಪ್ರತಿಷ್ಠಿತ ಕಚೇರಿಯ ಆವರಣವೇ ಈ ರೀತಿಯ ಅನೈರ್ಮಲ್ಯ, ಕುಡುಕರಿಗೆ ಮದ್ಯಪಾನದ ತಾಣವಾಗಿ ಬದಲಾಗಿರುವುದು ಸರ್ಕಾರಿ ಕಚೇರಿಗಳು ಎಷ್ಟು ಸುರಕ್ಷಿತ ಎನ್ನುವ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ.

ವಿನಾಯಕ್ ಚಿಕ್ಕಂದವಾಡಿ
ದಾವಣಗೆರೆ, ಚಿತ್ರದುರ್ಗ ಜಿಲ್ಲಾ ಸಂಯೋಜಕರು




