ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ಕಳೆದ 842 ದಿನಗಳಿಂದ ಹೋರಾಟ ನಡೆಸುತ್ತಿದ್ದ ರೈತರು ಮುಖ್ಯಮಂತ್ರಿ ಮನೆಗೆ ಕರೆ ನೀಡಿದ್ದ ಜಾಥಾವನ್ನು ಪೊಲೀಸರು ತಡೆದಿದ್ದಾರೆ.
ದೇವನಹಳ್ಳಿ ಹಳೇ ಬಸ್ ನಿಲ್ದಾಣದ ಬಳಿ ಜಮಾವಣೆಗೊಂಡ ಸಾವಿರಾರು ರೈತರನ್ನು ಪೊಲೀಸರು ತಡೆದು ಪ್ರತಿಭಟನಾ ನಿರತ ರೈತರನ್ನು ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮೂಲಕ ತಡೆದರು.
ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ರೈತರು ತಮ್ಮ ಭೂಮಿಯನ್ನು ಕೆಐಎಡಿಬಿಗೆ ನೀಡದೆ ನಡೆಸುತ್ತಿರುವ ಪ್ರತಿಭಟನೆ 842ನೇ ದಿನಕ್ಕೆ ಕಾಲಿಟ್ಟಿದ್ದು, ಪ್ರತಿಭಟನಾ ಕಾವು ಇದೀಗ ಸಾವಿರಾರು ರೈತರನ್ನು ಕೆರಳಿಸಿದ್ದಲ್ಲದೆ, ಸಂಘಸಂಸ್ಥೆಗಳು ಮತ್ತು ವಿವಿಧ ಸಂಘಟನೆಗಳು ರೈತರಿಗೆ ಬೆಂಬಲ ಸೂಚಿಸಿದ್ದವು.
ರೈತರು ಜಾಥಾಗೆ ಮುಂದಾದ ವೇಳೆ ಪೊಲೀಸರು ಹಾಗೂ ರೈತರ ನಡುವೆ ಮಾತಿನ ಚಕಮಕಿ ನಡೆಯಿತು. ದೇವನಹಳ್ಳಿ ನಗರದಿಂದ ಹೊರಟಿದ್ದ ಜಾಥಾಗೆ ರೈತರು ಪೊಲೀಸರ ನಡುವೆ ತಳ್ಳಾಟ ನೂಕಾಟ ನಡೆದಾಗ ಬ್ಯಾರಿಕೇಡ್ಗಳನ್ನು ನುಗ್ಗಿ ಹೊರ ಬರಲು ರೈತರು ಯತ್ನಿಸಿದ್ದಾರೆ.
ಪ್ರತಿಭಟನಾಕಾರರನ್ನ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾದ ಪೊಲೀಸರು, ರಸ್ತೆಯಲ್ಲೇ ಧರಣಿ ಕುಳಿತರು. ಈ ವೇಳೆ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಬಿ.ಆರ್.ಪಾಟೀಲ್, ರೈತರನ್ನು ಮನವೊಲಿಸಲು ಪ್ರಯತ್ನಿಸಿದರು. ನಂತರ ರೈತರನ್ನು ವಶಕ್ಕೆ ಪಡೆದ ಪೊಲೀಸರು, ಬಿಎಂಟಿಸಿ ಬಸ್ಗಳ ಮೂಲಕ ಠಾಣೆಗೆ ಕರೆದೊಯ್ದರು.
ವಶಕ್ಕೆ ಪಡೆಯುವ ವೇಳೆ ದೌರ್ಜನ್ಯ ಎಸಗುವ ಮೂಲಕ ಪೊಲೀಸರು ಎಳೆದೊಯ್ಯುತ್ತಿದ್ದಾರೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು. ವಶಕ್ಕೆ ಪಡೆದು ಬಸ್ಸಿನಲ್ಲಿ ಕೂರಿಸಿರುವ ರೈತರನ್ನ ಬಿಡುಗಡೆ ಮಾಡುವಂತೆ ಒತ್ತಾಯಿಸಿದರು.
ಈ ವೇಳೆ ಸಿಐಟಿಯು ಸಂಘಟನೆಯ ಪದಾಧಿಕಾರಿಗಳು ಸೇರಿದಂತೆ ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆಂಜನೇಯರೆಡ್ಡಿ, ಚುಕ್ಕಿ ನಂಜುಂಡಸ್ವಾಮಿ ಸೇರಿದಂತೆ ಹಲವು ಮುಖಂಡರು ಬೆಂಬಲ ಸೂಚಿಸಿದರು.
ಇದೇ ಸಂದರ್ಭದಲ್ಲಿ ಪ್ರಾಂತ್ಯ ರೈತ ಸಂಘದ ಯಶವಂತ್, ಚಂದ್ರತೇಜ, ಭೂಮಿ ಮತ್ತು ವಸತಿ ವಂಚಿತರ ಸಮಿತಿಯ ಸಿರಿಮನೆ ನಾಗರಾಜ್, ಕುಮಾರ್ ಸಮತಳ, ಅಖಿಲ ಭಾರತ ರೈತ ಕೃಷಿ ಕಾರ್ಮಿಕ ಸಂಘಟನೆಯ ಶಿವಪ್ರಕಾಶ್, ರೈತ ಸಂಘದ ರಾಜ್ಯ ಉಪಾಧ್ಯಕ್ಷ ವೆಂಕಟರಾಯಣಪ್ಪ, ವಕೀಲ ಸಿದ್ಧಾರ್ಥ, ಅತ್ತಿಬೆಲೆ ನರಸಪ್ಪ, ಕಾರಹಳ್ಳಿ ಶ್ರೀನಿವಾಸ್, ಮಾರೇಗೌಡ ಸೇರಿದಂತೆ ಕೆಐಎಡಿಬಿ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿಯ ಪದಾಧಿಕಾರಿಗಳು, ರೈತರು ಇದ್ದರು.
ಜುಲೈ 29ಕ್ಕೆ ಸಿಎಂ ಜೊತೆಗೆ ಮಾತುಕತೆ
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ್ದ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಬಿ. ಆರ್. ಪಾಟೀಲ್, ಭೂಸ್ವಾಧೀನ ವಿರೋಧಿ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಲ್ಲದೇ, ಈ ಬಗ್ಗೆ ಜುಲೈ29ಕ್ಕೆ ಸಿಎಂ ಜೊತೆಗೆ ಮಾತುಕತೆ ನಡೆಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
ಇದನ್ನು ಓದಿದ್ದೀರಾ? 2 ವರ್ಷದಿಂದ ನಡೆಯುತ್ತಿದೆ ಚನ್ನರಾಯಪಟ್ಟಣ ರೈತ ಹೋರಾಟ
“ನಾನು ಸರ್ಕಾರದ ಪ್ರತಿನಿಧಿಯಾಗಿ ಬಂದಿಲ್ಲ, ಹೋರಾಟಗಾರನಾಗಿ ಬಂದಿದ್ದೇನೆ” ಎಂದು ಹೇಳಿದ ಪಾಟೀಲರು, ಸಿಎಂ ಜೊತೆಗೆ ಸಭೆ ಏರ್ಪಡಿಸುತ್ತೇನೆ. ಈ ಬಗ್ಗೆ ಹೋರಾಟ ನಿರತ ಮುಖಂಡರಿಗೆ ಶೀಘ್ರದಲ್ಲೇ ಮಾಹಿತಿ ನೀಡುತ್ತೇನೆ ಎಂದರು.
ಬೇಡಿಕೆ ಈಡೇರುವವರೆಗೂ ರೈತರ ಹೋರಾಟ ನಿಲ್ಲಲ್ಲ: ಸಿರಿಮನೆ ನಾಗರಾಜ್
ಈ ಬಗ್ಗೆ ಈ ದಿನ.ಕಾಮ್ಗೆ ಮಾಹಿತಿ ನೀಡಿರುವ ಭೂಮಿ ಮತ್ತು ವಸತಿ ವಂಚಿತರ ಸಮಿತಿಯ ಹೋರಾಟಗಾರ ಸಿರಿಮನೆ ನಾಗರಾಜ್, “ಜುಲೈ 29 ಅಥವಾ 30 ಆದರೂ ಪರವಾಗಿಲ್ಲ ಎಂದು ಬಿ. ಆರ್. ಪಾಟೀಲ್ ಅವರಿಗೆ ತಿಳಿಸಿದ್ದೇವೆ. ನಮ್ಮ ಸಮಸ್ಯೆಗೆ ಪರಿಹಾರ ಸಿಗುವವರೆಗೂ ನಾವು ಹಿಂದಿರುಗುವುದಿಲ್ಲ” ಎಂದು ತಿಳಿಸಿದ್ದಾರೆ.
“ಈಗಾಗಲೇ ಬೇರೆ ಬೇರೆ ಯೋಜನೆಯ ನೆಪ ಹೇಳಿ ಚನ್ನರಾಯಪಟ್ಟಣ ಹೋಬಳಿಯ ಸಾವಿರಾರು ಎಕರೆ ಭೂಮಿಯನ್ನು ಕೆಐಎಡಿಬಿ ವಶಪಡಿಸಿಕೊಂಡಿದೆ. 80%ಕ್ಕೂ ಅಧಿಕ ರೈತರು ಭೂಮಿಯನ್ನು ಕೊಡಲು ನಿರಾಕರಿಸಿದ್ದಾರೆ. ಇನ್ನು ಅಳಿದುಳಿದ ಭೂಮಿಗಾಗಿ ನಮ್ಮ ಹೋರಾಟ ಮುಂದುವರಿಯಲಿದೆ. ಕೆಐಎಡಿಬಿ ತನ್ನ ಕ್ರಮವನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿ ರಾಜ್ಯವ್ಯಾಪಿ ʼಭೂ ಸ್ವಾಧೀನ ವಿರೋಧಿ ಹೋರಾಟ ಸಮಿತಿʼ ರಚಿಸಿಕೊಂಡು ಹೋರಾಟ ನಡೆಸುತ್ತೇವೆ. ಬೇಡಿಕೆ ಈಡೇರುವವರೆಗೂ ರೈತರ ಹೋರಾಟ ನಿಲ್ಲಲ್ಲ” ಎಂದು ಸಿರಿಮನೆ ನಾಗರಾಜ್ ಮಾಹಿತಿ ನೀಡಿದ್ದಾರೆ.






