ದೇವನಹಳ್ಳಿಯ ಯುವ ವಕೀಲ ಸಂದೀಪ್ ಮೇಲೆ ರಿಯಲ್ ಎಸ್ಟೇಟ್ ಉದ್ಯಮಿ ವೇಣುಗೋಪಾಲ್ ಹಲ್ಲೆ ನಡೆಸಿದ್ದ ಪ್ರಕರಣವನ್ನು ಪಾರದರ್ಶಕವಾಗಿ ತನಿಖೆ ನಡೆಸಬೇಕು ಎಂದು ಯುವ ವಕೀಲ, ಪರಿಷತ್ ಅಧ್ಯಕ್ಷ ಅನಿಲ್ ರೆಡ್ಡಿ ಆಗ್ರಹಿಸಿದರು.
ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಆರೋಪಿಗಳು ಪ್ರಭಾವಿ ವ್ಯಕ್ತಿಗಳಾಗಿದ್ದು, ಪ್ರಕರಣದ ವಿಚಾರಣೆಗೆ ಧಕ್ಕೆ ಆಗುವ ಸಾಧ್ಯತೆ ಹೆಚ್ಚಿದೆ. ಕ್ಷಿಪ್ರಗತಿಯಲ್ಲಿ ಪೊಲೀಸರು ತನಿಖೆ ನಡೆಸಬೇಕು. ಆರೋಪಿಯ ಪತ್ನಿಯೂ ಕಾಂಗ್ರೆಸ್ ಪಕ್ಷದ ಪುರಸಭೆ ಸದಸ್ಯೆ ಆಗಿದ್ದಾರೆ. ಆರೋಪಿ ಬಿಜೆಪಿ ಶಾಸಕ ಸ್ಥಾನದಲ್ಲಿ ಪರಾಜಿತ ಅಭ್ಯರ್ಥಿ, ರಿಯಲ್ ಎಸ್ಟೇಟ್ ಉದ್ಯಮದಲ್ಲಿದ್ದು ತಮ್ಮ ಪ್ರಭಾವವನ್ನು ಬಳಸಿ ನೊಂದ ವಕೀಲ ಸಂದೀಪ್ ಮೇಲೆ ಷ್ಯಡಂತ್ರ ರೂಪಿಸಬಹುದಾಗಿದೆ” ಎಂದು ದೂರಿದರು.
“ಈಗಾಗಲೇ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿಯೇ ಅವರ ಮೇಲೆ ನೇರವಾಗಿ ಪ್ರಾಣ ಬೆದರಿಕೆ ಹಾಕಿದ್ದಾರೆ. ಸಂತ್ರಸ್ತ ವಕೀಲರ ಕುಟುಂಬಕ್ಕೆ ಜೀವ ಭಯವಿದ್ದು, ಪೊಲೀಸರು ರಕ್ಷಿಸಬೇಕು. ಇಲ್ಲದಿದ್ದಲ್ಲಿ ಎಸ್ಐಟಿ ತನಿಖೆಗೆ ಆಗ್ರಹಿತಿ ರಾಜ್ಯದಾದ್ಯಂತ ಪ್ರತಿಭಟನೆ ಮಾಡುತ್ತೇವೆ. ಆರೋಪಿ ವಿರುದ್ಧ ಸಾಕಷ್ಟು ದೂರುಗಳು ಬರುತ್ತಿದೆ. ನೊಂದ ಕುಟುಂಬಗಳಿಗೆ ಕಾನೂನು ನೆರವು ನೀಡಲು ನಾವು ಬದ್ಧ. ವಕೀಲರ ಗುಂಪು ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗುತ್ತೇವೆ” ಎಂದರು.
ಇದನ್ನೂ ಓದಿ: ದೇವನಹಳ್ಳಿ ಚಲೋ | ಅನ್ನದಾತರ ಹೋರಾಟದ ಚಿತ್ರಗಳು…
ಯುವ ವಕೀಲ ಸಂದೀಪ್ ಮಾತನಾಡಿ, “ಕಕ್ಷಿದಾರರಿಗೆ ಕಾನೂನು ಅರಿವು ಮತ್ತು ನೆರವು ನೀಡುವುದು, ವಕೀಲರ ಕರ್ತವ್ಯವಾಗಿದೆ. ಸಂವಿಧಾನ ರಕ್ಷಣೆಗಾಗಿ ನಿಂತ ನಮ್ಮ ಮೇಲೆ ಈ ರೀತಿ ಹಲ್ಲೆ ತೀವ್ರ ಖಂಡನೀಯ. ಪೊಲೀಸ್ ಇಲಾಖೆಯ ಮೇಲೆ ನಂಬಿಕೆ ಇದೆ. ಒಂದು ವೇಳೆ ಅನ್ಯಾಯವಾದರೆ, ಯಾವುದೇ ಕಾರಣಕ್ಕೂ ಸುಮ್ಮನೆ ಇರುವುದಿಲ್ಲ. ನ್ಯಾಯಾಲಯದಲ್ಲಿ ಉಗ್ರ ಹೋರಾಟ ಮಾಡುತ್ತೇವೆ” ಎಂದರು.
ಈ ವೇಳೆ ಯುವ ವಕೀಲ ಪರಿಷತ್ ಕರ್ನಾಟಕದ ಪದಾಧಿಕಾರಿ ಅನಿಲ್ ಎಸ್ ರೆಡ್ಡಿ, ವಿಜಯ್ ಕುಮಾರ್ ಎಸ್, ಬಾಲಾಜಿ ಪ್ರಸಾದ್ ವಿ, ಯೋಗೇಶ್ ಎಂ ಆರ್ ಸೇರಿದಂತೆ ಇತರರು ಇದ್ದರು.





