ವಿಜಯಪುರ ಜಿಲ್ಲೆಯ ಜೆಎಂಜೆ ಸಾಮಾಜಿಕ ಸೇವಾ ಕೇಂದ್ರ ದೇವರಹಿಪ್ಪರಗಿ ಘಟಕದ ವತಿಯಿಂದ ವೈವಿಧ್ಯದಲ್ಲಿ ಏಕತೆ ಎಂಬ ವಿಷಯದ ಮೇಲೆ ಅಂತರ್ ಧಾರ್ಮಿಕ ಸಮ್ಮೇಳನವನ್ನು ಆಯೋಜಿಸಲಾಗಿತ್ತು.
ಮಾನವಕುಲವನ್ನು ಒಗ್ಗೂಡಿಸುವ ಹಾಗೂ ಸಾಮಾನ್ಯ ಮೌಲ್ಯಗಳನ್ನು ಆಳವಾಗಿ ಚರ್ಚಿಸುವ ಉದ್ದೇಶದಿಂದ ವಿವಿಧ ಧರ್ಮಗಳ ಧಾರ್ಮಿಕ ನಾಯಕರು, ಸಾಮಾಜಿಕ ಕಾರ್ಯಕರ್ತರು, ಶಿಕ್ಷಕರು, ಯುವಕರು ಹಾಗೂ ಸ್ಥಳೀಯ ಸಮುದಾಯದ ಪ್ರತಿನಿಧಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ವಿಭಿನ್ನ ಧರ್ಮಗಳ ನಡುವೆ ಬಾಂಧವ್ಯ, ಅರಿವು ಮತ್ತು ಸಂವಾದವನ್ನು ಉತ್ತೇಜಿಸುವುದು. ಸಮುದಾಯದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಪರಸ್ಪರ ಗೌರವವನ್ನು ಬೆಳೆಸುವುದು, ಎಲ್ಲ ಪ್ರಮುಖ ಧಾರ್ಮಿಕ ಪರಂಪರೆಗಳಲ್ಲಿರುವ ಸಾಮಾನ್ಯ ನೈತಿಕ ಮೌಲ್ಯಗಳನ್ನು ಹೈಲೈಟ್ ಮಾಡುವುದು, ಯುವ ಹೆಜ್ಜೆ ಗುರುವರಿಗೆ ಏಕತೆಯ ರಾಯಭಾರಿಗಳಾಗಲು ಪ್ರೇರೇಪಣೆ ನೀಡುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿತ್ತು. ಇಂದಿನ ವಿಭಜನೆಯ ಜಗತ್ತಿನಲ್ಲಿ ಅಂತರ್ ಧಾರ್ಮಿಕ ಸಂವಾದದ ಅಗತ್ಯತೆಯನ್ನು ಮುಖಂಡರು ಒತ್ತಿ ಹೇಳಿದರು.
ಮುಸ್ಲಿಂ ಪ್ರತಿನಿಧಿ ಬೇಗಮ್ ಬಿಜಾಪುರ್, ಸ್ವಾಮೀಜಿ ಸತೀಶ ಮತ್ತು ಪ್ರಾಂತಾಧಿಕಾರಿ ತ್ರೆಸಿಯಮ್ಮ ತಮ್ಮ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು. ಶಾಂತಿ ಗೀತೆಗಳು, ಭಾರತದ ಸಂವಿಧಾನದ ಪ್ರಸ್ತಾವಿಕೆಯ ಪಠಣ, ವೈವಿಧ್ಯದಲ್ಲಿ ಏಕತೆಯ ಮಹತ್ವದ ಕುರಿತು ಚಿಂತನೆಗಳ ಮೂಲಕ ಕಾರ್ಯಕ್ರಮಕ್ಕೆ ಮತ್ತಷ್ಟು ಉಲ್ಲಾಸ ಮತ್ತು ಭರವಸೆಯನ್ನು ನೀಡಲಾಯಿತು.
ಇದನ್ನೂ ಓದಿ: ವಿಜಯಪುರ | ಸೂಕ್ತ ಪರಿಹಾರ ನೀಡುವುದಾಗಿ ಅಧಿಕಾರಿಗಳ ಭರವಸೆ: ಧರಣಿ ಹಿಂಪಡೆದ ನಿರಾಶ್ರಿತರು
ಭಗವದ್ಗೀತೆ, ಪವಿತ್ರ ಬೈಬಲ್, ಪವಿತ್ರ ಕುರಾನ್ ಧಾರ್ಮಿಕ ಸಂದೇಶಗಳನ್ನು ಪಠಿಸಿ ಶಾಂತಿ, ಏಕತೆ ಮತ್ತು ಪರಸ್ಪರ ಗೌರವ ಸೇರಿದಂತೆ ಮಾನವೀಯ ಮೌಲ್ಯಗಳನ್ನು ಒತ್ತಿ ಹೇಳಲಾಯಿತು.
ಕಾರ್ಯಕ್ರಮದಲ್ಲಿ ಸ್ಥಳೀಯ ಶಾಲಾ ಮಕ್ಕಳು, ಯುವಕರು, ದೇವದಾಸಿ ಮಹಿಳೆಯರು, ಹೊಲಿಗೆ ತರಬೇತಿ ವಿದ್ಯಾರ್ಥಿಗಳು ಹಾಗೂ HIV ಸಹಾಯ ಗುಂಪಿನ ಸದಸ್ಯರು ಸಕ್ರಿಯವಾಗಿ ಭಾಗವಹಿಸಿದ್ದರು.





