ಕೋಲಾರ: ಸರ್ಕಾರದ ಅಭಿವೃದ್ಧಿ ಕೆಲಸಗಳು ಉಳಿಯುತ್ತವೆ. ಟೀಕೆಗಳು ಸಾಯುತ್ತವೆ. ಆದ್ದರಿಂದ ಯಾವುದೇ ಟೀಕೆಗೆ ಎದೆ ಗುಂದದೆ ಸರ್ಕಾರದ ಗ್ಯಾರಂಟಿ ಕಾರ್ಯಕ್ರಮಗಳು ಜನರನ್ನು ತಲುಪುತ್ತಿವೆ ಎಂದು ನಗರಾಭಿವೃದ್ಧಿ ಹಾಗೂ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ. ಎಸ್. ಸುರೇಶ್ ಅವರು ಹೇಳಿದರು.
ಇಂದು ಜಿಲ್ಲಾಡಳಿತ ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಆಹಾರ ಇಂಧನ ಸಾರಿಗೆ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ಜಿಲ್ಲಾ ಎಲ್ಲಾ ತಾಲ್ಲೂಕು ಗ್ಯಾರಂಟಿ ಪ್ರಾಧಿಕಾರ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಇವರ ಸಂಯುಕ್ತಾಶ್ರಯದಲ್ಲಿ ಕರ್ನಾಟಕ ಸರ್ಕಾರದ ಪಂಚ ಗ್ಯಾರಂಟಿ ಯೋಜನೆ ಕುರಿತು ಜಿಲ್ಲಾಡಳಿತ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಚುನಾವಣಾ ಸಂದರ್ಭದಲ್ಲಿ ರಾಜ್ಯದ ಜನರಿಗೆ ಭರವಸೆ ನೀಡಿದಂತೆ ‘ಪಂಚ ಗ್ಯಾರಂಟಿ’ ಯೋಜನೆಗಳನ್ನು ಜಾರಿಗೊಳಿಸಿ ರಾಜ್ಯದ ಎಲ್ಲಾ ಜನರಿಗೆ ಒಂದಲ್ಲ ಒಂದು ಸೌಲಭ್ಯಗಳು ಜನರಿಗೆ ತಲುಪುವಂತೆ ಮಾಡುವಲ್ಲಿ ಸರ್ಕಾರ ಶ್ರಮಿಸುತ್ತಿದೆ. ರಾಜ್ಯದಲ್ಲಿ 56 ಸಾವಿರ ಕೋಟಿ ರೂ.ವನ್ನು ವಾರ್ಷಿಕವಾಗಿ ಗ್ಯಾರಂಟಿ ಯೋಜನೆಗೆ ಬಳಸಲಾಗುತ್ತಿದೆ ಎಂದು ಹೇಳಿದರು.
ಶಕ್ತಿ ಯೋಜನೆಯಡಿ ರಾಜ್ಯದಲ್ಲಿ 600 ಕೋಟಿ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಿದ್ದಾರೆ. ಪ್ರತಿನಿತ್ಯ ಜಿಲ್ಲೆಯಲ್ಲಿ 16 ಸಾವಿರ ಮಂದಿ ಬಸ್‌ನಲ್ಲಿ ಸಂಚರಿಸುತ್ತಿದ್ದಾರೆ ಎಂದು ಸಚಿವರು ತಿಳಿಸಿದರು.
ಸರ್ಕಾರ ಜಾರಿಗೊಳಿಸಿರುವ ಪಂಚ ಗ್ಯಾರಂಟಿ ಯೋಜನೆಗಳು ಇಡೀ ದೇಶದಲ್ಲಿಯೇ ಮಾದರಿಯಾಗಿದ್ದು ಗ್ಯಾರಂಟಿ ಯೋಜನೆ ರೂಪಿಸಿರುವುದು ಕರ್ನಾಟಕದ ಹೆಮ್ಮೆ, ನಮ್ಮದು ನುಡಿದಂತೆ ನಡೆಯುತ್ತಿರುವ ಸರ್ಕಾರ ಎಂದು ಸಚಿವರು ಹೇಳಿದರು.
ಸರ್ಕಾರಿ ಬಸ್‌ನಲ್ಲಿ ಮಹಿಳೆಯರು ರಾಜ್ಯಾದ್ಯಂತ ಓಡಾಡಬಹುದಾಗಿದೆ. 200 ಯೂನಿಟ್ ವರೆಗೆ ಉಚಿತ ವಿದ್ಯುತ್ ಗೃಹ ಭಾಗ್ಯ ಯೋಜನೆಯಡಿ 2 ಸಾವಿರ ರೂ. ಕಲ್ಪಿಸಲಾಗುತ್ತದೆ ಎಂದು ಸಚಿವರು ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನೇತೃತ್ವದ ಸರ್ಕಾರ ಯಾವುದೇ ಧರ್ಮ ಜಾತಿ ನೋಡಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿಲ್ಲ ಸರ್ಕಾರದ ಗ್ಯಾರಂಟಿ ಯೋಜನೆಗಳು ಎಲ್ಲಾ ಜನರಿಗೂ ತಲುಪುತ್ತಿದ್ದು ನುಡಿದಂತೆ ನಡೆಯುತ್ತಿರುವ ಸರ್ಕಾರವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಹೆಚ್.ಎಂ. ರೇವಣ್ಣ ಮಾತನಾಡಿ ಕೊಟ್ಟ ಮಾತಿನಂತೆ ಸರ್ಕಾರ ನಡೆದುಕೊಂಡಿದೆ. ಗ್ಯಾರಂಟಿ ಕಾರ್ಯಕ್ರಮಗಳು ಬಡ ಜನರ ಖಾತೆಗೆ ಹಣ ನೇರವಾಗಿ ತಲುಪುತ್ತಿದೆ. ಯಾವುದೇ ಯೋಜನೆ ಜಾರಿಗೊಳಿಸಲು ಜನ ಬೆಂಬಲ ಇರಬೇಕು. ಬಡವರ ಶೋಷಿತರ ಆರ್ಥಿಕ ಸಬಲೀಕರಣಕ್ಕೆ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದೆ ಎಂದರು.
ಕಳೆದ ಎರಡೂವರೆ ವರ್ಷದಲ್ಲಿ ಗ್ಯಾರಂಟಿ ಯೋಜನೆಗಾಗಿ ಒಂದೂವರೆ ಲಕ್ಷ ಕೋಟಿ ರೂ. ನೀಡಲಾಗಿದೆ ಪ್ರಜಾಪ್ರಭುತ್ವ ಗೆಲುವಿಗೆ ಎಲ್ಲರೂ ಕೈಜೋಡಿಸಬೇಕು. ಗ್ಯಾರಂಟಿ ಯೋಜನೆಗಳು ಸಾಧಾರಣ ಯೋಜನೆಯಲ್ಲ ಎಂದು ಅವರು ಒತ್ತಿ ಹೇಳಿದರು.
ಐದು ಗ್ಯಾರಂಟಿಗಳಾದ ಅನ್ನಭಾಗ್ಯ ಶಕ್ತಿ ಗೃಹಜ್ಯೋತಿ ಗೃಹಲಕ್ಷಿ ಯುವನಿಧಿ ಜನರನ್ನು ಸಬಲೀಕರಣಗೊಳಿಸಿದೆ. ಫಲಾನುಭವಿಗಳು ಮೃತರಾದ ಬಳಿಕವೂ ಅವರಿಗೆ ಸೌಲಭ್ಯ ಸಿಗುವುದರ ಬಗ್ಗೆ ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಅವನ್ನು ಪರಿಶೀಲಿಸಲು ತಿಳಿಸಿದರು.
ಉಪನ್ಯಾಸಕ ವಾಸು ಅವರು ಮಾತನಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಸಾಮಾಜಿಕ ನ್ಯಾಯಾದ ಪರಿಕಲ್ಪನೆಯಲ್ಲಿ ನಡೆಯುತ್ತಿದ್ದು ಎಲ್ಲಾ ಜನರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿದೆ. ಈ ಯೋಜನೆಗಳು ರಾಜ್ಯವನ್ನು ಅಭಿವೃದ್ಧಿ ಪ್ರಥದತ್ತ ಕರೆದೊಯ್ಯಲು ಸಹಾಕರಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರಾಜ್ಯ ಗ್ಯಾರಂಟಿ ಯೋಜನೆ ಪ್ರಾಧಿಕಾರದ ಉಪಾಧ್ಯಕರಾದ ಡಾ. ಸೂರಜ್ ಹೆಗಡೆ ಮಾತನಾಡಿ ಪಕ್ಷತೀತ ಜಾತ್ಯಾತೀತವಾಗಿ ಸರ್ವರಿಗೂ ಈ ಗ್ಯಾರಂಟಿ ಯೋಜನೆಗಳನ್ನು ನೀಡಲಾಗುತ್ತಿದೆ. ಇದರಿಂದ ಮುಖ್ಯವಾಗಿ ಮಹಿಳೆಯರು ಸ್ವಾಬಿಮಾನವಾಗಿ ಘನತೆಯಿಂದ ತಮ್ಮ ಜೀವನವನ್ನು ಕಟ್ಟಿಕೊಳ್ಳುತ್ತಿದ್ದಾರೆ. ಈ ಯೋಜನೆ ತಲುಪುವ ಯಾವ ಮಧ್ಯವರ್ತಿಗಳು ಇರುವುದಿಲ್ಲ. ಆದ್ದರಿಂದ ಇವು ರಾಜ್ಯದ ಕಟ್ಟ ಕಡೆ ವ್ಯಕ್ತಿಗೂ ಸಹ ತಲುಪುತದೆ ಎಂದರು.
ಶಾಸಕರಾದ ಡಾ. ಕೊತ್ತೂರು ಮಂಜುನಾಥ್ ಅವರು ಮಾತನಾಡಿ ಪಂಚ ಗ್ಯಾರಂಟಿ ಯೋಜನೆ ಜನರ ಶ್ರೇಯೋಭಿವೃದ್ಧಿಗೆ ಕಾರಣವಾಗಿದೆ. ಜನರು ಇದನ್ನು ಸದುಪಯೋಗ ಪಡಿಸಿ ಮುನ್ನಡೆಯಬೇಕೆಂದರು ಗ್ಯಾರಂಟಿ ಯೋಜನೆಗಳು ಪ್ರತಿಯೊಬ್ಬರಿಗೂ ಒಂದಲ್ಲ ಒಂದು ರೀತಿ ಪರಿಣಾಮ ಬೀರಿದ್ದು, ಅದರಲ್ಲಿ ಮಹಿಳೆಯರಿಗೆ ಹೆಚ್ಚಿನ ಅನುಕೂಲವಾಗಿದೆ. ಹೆಣ್ಣು ಮಕ್ಕಳಿಗೆ ಹೆಚ್ಚಿನ ಶಕ್ತಿ ತುಂಬಿದೆ ಎಂದು ಅವರು ಹೇಳಿದರು.
ಗ್ಯಾರಂಟಿ ಯೋಜನೆಗಳ ಬಗ್ಗೆ ತಳಮಟ್ಟದಲ್ಲಿ ಮತ್ತಷ್ಟು ಜಾಗೃತಿ ಮೂಡಿಸಬೇಕು. ಗ್ಯಾರಂಟಿ ಯೋಜನೆ ಪಡೆಯಲು ತಲಾದಾಯ ಮತ್ತಿತರ ಕಾರಣಗಳಿಂದ ಸಮಸ್ಯೆಯಾಗಿದ್ದ ಕುಟುಂಬಗಳಿಗೆ ಸರಿಪಡಿಸಲು ಕ್ರಮವಹಿಸಲಾಗಿದೆ. ಆ ನಿಟ್ಟಿನಲ್ಲಿ 1.20 ಲಕ್ಷ ಕುಟುಂಬಗಳಲ್ಲಿ 59 ಸಾವಿರ ಕುಟುಂಬಗಳ ಜಿಎಸ್‍ಟಿ ಮತ್ತಿತರ ಸಂಬಂಧ ಸರಿಪಡಿಸಲು ಶ್ರಮಿಸಲಾಗಿದೆ. ರಾಜ್ಯದಲ್ಲಿ 7 ರಿಂದ 8 ಸಾವಿರ ಕುಟುಂಬಗಳಿಗೆ ಗ್ಯಾರಂಟಿ ಯೋಜನೆ ತಲುಪುತ್ತಿದೆ ಎಂದರು.
ಪಂಚ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳು ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳಿಂದ ಬಡವರಿಗೆ, ಯುವಜನರಿಗೆ ಅನುಕೂಲವಾಗಿದ್ದು ಇದರ ಸದ್ಭಳಕೆಯಿಂದ ಕುಟುಂಬ ನಿರ್ವಹಣೆ ಶಿಕ್ಷಣ ಆರೋಗ್ಯ ಮತ್ತಿತರ ಕಾರ್ಯಕ್ಕೆ ತುಂಬಾ ಅನುಕೂಲವಾಗಿದೆ ಎಂದು ಅವರು ಹೇಳಿದರು.
ಕೋಲಾರ ಜಿಲ್ಲೆಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ಚಿಕ್ಕರೆಡ್ಡಪ್ಪ ಮತ್ತು ತಂಡದವರು ಗ್ಯಾರಂಟಿ ಯೋಜನೆ ಕುರಿತು ಬೀದಿನಾಟಕ ಮಾಡಿ ಗಮನ ಸೆಳೆದರು. ಇದೇ ಸಂದರ್ಭದಲ್ಲಿ ಪಂಚ ಗ್ಯಾರಂಟಿ ಯೋಜನೆಗಳನೊಳಗೊಂಡ ಜಿಲ್ಲಾ ಮಾಹಿತಿ ಅಭಿಪ್ರಾಯಗಳ ಕಿರು ಹೊತ್ತಿಗೆ ಹಾಗೂ ಜಿಲ್ಲಾ ಪಂಚಾಯತ್ ದಿನಚರಿಯನ್ನು ಸಚಿವರು ಬಿಡುಗಡೆಗೊಳಿಸಿದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಪ್ರವೀಣ್. ಪಿ. ಬಾಗೇವಾಡಿ ಸ್ವಾಗತಿಸಿದರು.
ಗ್ಯಾರಂಟಿ ಯೋಜನೆಗಳಾದ ಶಕ್ತಿ ಗೃಹಲಕ್ಷ್ಮಿ ಗೃಹಜ್ಯೋತಿ ಅನ್ನಭಾಗ್ಯ ಹಾಗೂ ಯುವನಿಧಿ ಕಾರ್ಯಕ್ರಮಗಳ ಕುರಿತು ಏರ್ಪಡಿಸಲಾಗಿದ್ದ ವಸ್ತುಪ್ರದರ್ಶನ ಮಳಿಗೆಯನ್ನು ಜಿಲ್ಲಾ ಉಸ್ತುವಾರಿ ಸಚಿವರು ಇದೇ ಸಂದರ್ಭದಲ್ಲಿ ಉದ್ಘಾಟಿಸಿದರು. ಪಂಚ ಗ್ಯಾರಂಟಿ ಯೋಜನೆಗಳ ಮಾಹಿತಿ ಒಳಗೊಂಡ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮಳಿಗೆ ಗಮನ ಸೆಳೆಯಿತು.
ಇದನ್ನು ಓದಿದ್ದೀರಾ..? ಸ್ವಾತಂತ್ರ್ಯಕ್ಕಾಗಿ ಆರ್.ಎಸ್.ಎಸ್ ಕೊಡುಗೆ ಶೂನ್ಯ ಇದ್ದರೆ ಬಹಿರಂಗ ಪಡಿಸಲಿ
ಈ ಸಂದರ್ಭದಲ್ಲಿ ಮಾಲೂರು ಶಾಸಕರಾದ ಕೆ.ವೈ ನಂಜೇಗೌಡ, ವಿಧಾನ ಪರಿಷತ್ ಸದಸ್ಯರಾದ ಅನಿಲ್ ಕುಮಾರ್ ಜಿಲ್ಲಾ ಗ್ಯಾರಂಟಿ ಯೋಜನೆ ಪ್ರಾಧಿಕಾರದ ಅಧ್ಯಕ್ಷರಾದ ವೈ.ಶಿವಕುಮಾರ್, ಗ್ಯಾರಂಟಿ ಯೋಜನೆ ಮೈಸೂರು ಘಟಕದ ಉಪಾಧ್ಯಕ್ಷೆ ಪುಷ್ಪ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧ್ಯಕ್ಷರಾದ ಕೃಷ್ಣಪ್ಪ, ಕೋಲಾರ ನಗರಸಭೆ ಮಾಜಿ ಅಧ್ಯಕ್ಷರಾದ ಲಕ್ಷ್ಮೀದೇವಮ್ಮ ರಮೇಶ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಎಲ್ಲಾ ತಾಲ್ಲೂಕು ಅಧ್ಯಕ್ಷರು, ಉಪಾಧ್ಯಕ್ಷರು, ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕನ್ನಿಕಾ ಸಿಕ್ರಿವಾಲ್, ಉಪಕಾರ್ಯದರ್ಶಿ ಟಿ.ಕೆ ರಮೇಶ್ ಸೇರಿದಂತೆ ಮತ್ತಿತರರು ಇದ್ದರು.




