ಉಡುಪಿ ಜಿಲ್ಲೆಯ ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆಗೆ ಸಂಬಂಧಿಸಿ ಅಕ್ಷತಾ ಪೂಜಾರಿ ಅವರು ಮಾಡಿದ ಆರೋಪಗಳು ಸಂಪೂರ್ಣ ಸುಳ್ಳು ಹಾಗೂ ವಾಸ್ತವಕ್ಕೆ ದೂರವಾಗಿವೆ ಎಂದು ದೇವೇಂದ್ರ ಸುವರ್ಣ ಅವರು ಆರೋಪಿಸಿದ್ದಾರೆ. ಈ ಕುರಿತು ಅವರು ಇಂದು ಉಡುಪಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ತಮ್ಮ ನೋವು, ಅಸಮಾಧಾನ ಮತ್ತು ಪ್ರಕರಣದ ಸಂಪೂರ್ಣ ಹಿನ್ನೆಲೆಯನ್ನು ಮಾಧ್ಯಮಗಳ ಮುಂದೆ ವಿವರಿಸಿದರು.
ಅಕ್ಷತಾ ಪೂಜಾರಿ ಪ್ರಕರಣಕ್ಕೆ ಸಂಬಂಧಿಸಿ ವಿವಿಧ ಸಂಘಟನೆಗಳು, ನಾಯಕರು ಮತ್ತು ಸಾರ್ವಜನಿಕರು ನ್ಯಾಯಕ್ಕಾಗಿ ಧ್ವನಿ ಎತ್ತುತ್ತಿರುವುದನ್ನು ಗಮನಿಸಿದ ದೇವೇಂದ್ರ ಸುವರ್ಣ, “ನನಗೆ ಕಳೆದ 11 ವರ್ಷಗಳಿಂದ ನ್ಯಾಯ ಸಿಗದೆ ಇದ್ದರೂ ಯಾರೂ ಮಾತನಾಡಿಲ್ಲ. ಆದರೆ ಈಗ ಒಂದು ಪ್ರಕರಣಕ್ಕೆ ಮಾತ್ರ ಇಷ್ಟೊಂದು ಗಮನ ನೀಡಲಾಗುತ್ತಿದೆ. ಇದು ನನಗೆ ತೀವ್ರ ನೋವು ತಂದಿದೆ” ಎಂದು ಹೇಳಿದರು.
ಇದನ್ನು ಓದಿ : https://eedina.com/karnataka/akshatha-poojary-udupi-case-protest-brahmawara-police-station/2025-12-17/
ಪೊಲೀಸರು ಯಾವುದೇ ರೀತಿಯ ದೌರ್ಜನ್ಯ ಅಥವಾ ದುರ್ವರ್ತನೆ ತೋರಿಲ್ಲ ಎಂದು ಸ್ಪಷ್ಟಪಡಿಸಿದ ಅವರು, “ಪೊಲೀಸರು ಆಶೀಕ್ ಮನೆಗೆ ಹೋಗಿದ್ದು ಕೇವಲ ಆರೋಪಿಯ ಮಾಹಿತಿ ಸಂಗ್ರಹಿಸುವ ಉದ್ದೇಶದಿಂದ ಮಾತ್ರ. ಅಲ್ಲಿ ಮಾನವೀಯ ನೆಲೆಯಲ್ಲಿ ನಡೆದುಕೊಂಡಿದ್ದಾರೆ. ಯಾವುದೇ ಹಲ್ಲೆ, ಅವಾಚ್ಯ ಶಬ್ದ ಅಥವಾ ಅಸಭ್ಯ ವರ್ತನೆ ನಡೆದಿಲ್ಲ” ಎಂದು ಹೇಳಿದರು.
ತಮ್ಮ ಮೇಲೂ ಎಫ್‌ಐಆರ್ ದಾಖಲಿಸಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ದೇವೇಂದ್ರ ಸುವರ್ಣ, “ನಾನು ಕೋರ್ಟ್ ಆದೇಶದಂತೆ ಪೊಲೀಸರೊಂದಿಗೆ ಅಲ್ಲಿಗೆ ಹೋಗಿದ್ದೇನೆ. ಪೊಲೀಸರೇ ಕರೆ ಮಾಡಿ ಆಶೀಕ್ ಇಂತಹ ಲೊಕೇಷನ್‌ನಲ್ಲಿ ಇದ್ದಾನೆ ಎಂದು ಮಾಹಿತಿ ನೀಡಿದ ಕಾರಣ ನಾನು ಅವರ ಜೊತೆ ಹೋದೆ. ಇದನ್ನು ಹೊರತುಪಡಿಸಿ ನಾನು ಯಾರ ಮೇಲೂ ಹಲ್ಲೆ ಮಾಡಿಲ್ಲ, ಹುಡುಗಿಯೊಂದಿಗೆ ಯಾವುದೇ ರೀತಿಯ ಮಾತುಕತೆಯನ್ನೂ ನಡೆಸಿಲ್ಲ. ನನ್ನ ವಿರುದ್ಧ ದಾಖಲಿಸಿರುವ ಆರೋಪಗಳು ಸಂಪೂರ್ಣ ಸುಳ್ಳು” ಎಂದು ತಿಳಿಸಿದರು.
ಅಕ್ಷತಾ ಪೂಜಾರಿ ಅವರು ಮಾಡಿರುವ ಆರೋಪಗಳಿಂದಾಗಿ ಪೊಲೀಸರು ಹಾಗೂ ನನ್ನ ಮೇಲೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿದ ಅವರು, “ಸತ್ಯ ಮತ್ತು ಧರ್ಮ ಇದ್ದರೆ ಅದು ನನ್ನನ್ನು ಕಾಪಾಡುತ್ತದೆ ಎಂಬ ನಂಬಿಕೆ ನನಗಿದೆ. ನ್ಯಾಯ ಎಲ್ಲರಿಗೂ ಸಮಾನವಾಗಿ ದೊರಕಬೇಕು. ಒಂದು ಜಾತಿ ಅಥವಾ ಸಂಘಟನೆಯ ಬೆಂಬಲ ಇದ್ದವರಿಗೆ ಮಾತ್ರ ನ್ಯಾಯ ಸಿಗುವ ಸ್ಥಿತಿ ನಿರ್ಮಾಣವಾಗಬಾರದು” ಎಂದು ಹೇಳಿದರು.
ತಮಗೂ ನ್ಯಾಯ ದೊರಕಬೇಕಾದರೆ ಜಾತಿ ಅಥವಾ ಸಂಘಟನೆಯ ಹೆಸರಿನಲ್ಲಿ ಹೋರಾಟ ಮಾಡಬೇಕಾದ ಪರಿಸ್ಥಿತಿ ಎದುರಾಗುತ್ತಿರುವುದರ ಬಗ್ಗೆ ಬೇಸರ ವ್ಯಕ್ತಪಡಿಸಿದ ದೇವೇಂದ್ರ ಸುವರ್ಣ, “ನಾನು ಸತ್ಯದ ಮೇಲೆ ನಿಂತಿದ್ದೇನೆ. ಸಂವಿಧಾನದ ಕಾನೂನ್ನು ನಂಬಿದ್ದೇನೆ ನನಗೆ ನ್ಯಾಯ ಬೇಕು ಎಂದು ಪತ್ರಿಕಾಗೋಷ್ಠಿಯಲ್ಲಿ ಕಣ್ಣೀರು ಹಾಕಿದರು.





