ಧರ್ಮಸ್ಥಳ ಆಸುಪಾಸಿನಲ್ಲಿ ನಡೆಯುತ್ತಿರುವ ಬೆಳವಣಿಗೆಗೆ ಸಂಬಂಧಿಸಿದ ಪ್ರಕರಣದಲ್ಲಿ ಬಿಗ್ ಬಾಸ್ ಸ್ಪರ್ಧಿ ರಜತ್ ಮತ್ತು ಅವರ ಪತ್ನಿ ಅಕ್ಷತಾ ಅವರಿಗೆ ಜೀವ ಬೆದರಿಕೆ ಹಾಕಿರುವ ಸಂಬಂಧ ದಂಪತಿ ಪೊಲೀಸರಿಗೆ ದೂರು ನೀಡಿದ್ದಾರೆ.
ಡಿಜಿಐಜಿಪಿ ಕಚೇರಿಗೆ ಆಗಮಿಸಿ, ತಮಗೆ ಬಂದಿರುವ ಜೀವ ಬೆದರಿಕೆ ಸಂದೇಶಗಳು ಮತ್ತು ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಿಸಿದ್ದಾರೆ.
ರಜತ್ ಅವರ ಪತ್ನಿ ಅಕ್ಷತಾ ಗೌಡ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ‘ಕೊಲೆ ಮಾಡುವೆ, ಕತ್ತರಿಸುವೆ’ ಎಂಬ ಬೆದರಿಕೆ ಸಂದೇಶಗಳು ಬಂದಿವೆ ಎಂದು ಆರೋಪಿಸಿ ಈ ದೂರು ದಾಖಲಾಗಿದೆ. ಸದ್ಯ ಈ ದೂರು ಸೈಬರ್ ಠಾಣೆಗೆ ವರ್ಗಾವಣೆಯಾಗಿದೆ.
ದೂರು ನೀಡಿದ ಬಳಿಕ ಈ ಬಗ್ಗೆ ಮಾತನಾಡಿರುವ ರಜತ್, “ನಾವು ಧರ್ಮಸ್ಥಳಕ್ಕೆ ಸೌಜನ್ಯಗೆ ನ್ಯಾಯ ಕೇಳಲು ಹೋಗಿದ್ದೆವು. ಯಾವುದೇ ಜಾತಿ, ಧರ್ಮ, ದೇವಸ್ಥಾನದ ಬಗ್ಗೆ ನಾವು ಮಾತನಾಡಿಲ್ಲ. ಹಾಡಹಗಲೇ ನಮ್ಮ ಕಣ್ಣ ಮುಂದೆ ಗಲಾಟೆ ನಡೆದಿದೆ. ಹಲ್ಲೆ ಮಾಡಿದವರ ವಿರುದ್ಧ ಮತ್ತು ಬೆದರಿಕೆ ಸಂದೇಶ ಕಳುಹಿಸಿದವರ ವಿರುದ್ಧ ದೂರು ಕೊಟ್ಟಿದ್ದೇವೆ. ನಾವು ಬೆದರಿಕೆಗಳಿಗೆ ಹೆದರುವವರಲ್ಲ” ಎಂದರು.
ಬಳಿಕ ಮಾತನಾಡಿದ ಅಕ್ಷತಾ ತಮ್ಮ ಸಾಮಾಜಿಕ ಜಾಲತಾಣದ ಸ್ಟೇಟಸ್‌ನಲ್ಲಿ, ‘ನಿನ್ನ ಗಂಡನನ್ನು ವಾಪಸ್ ಕರೆಸಿಕೊ, ಇದು ಮಂಡ್ಯ ಅಲ್ಲ, ಕರಾವಳಿ’ ಎಂಬ ಸಂದೇಶವನ್ನು ಶಾರದಾ ಭಟ್ ಎಂಬುವವರು ಕಳಿಸಿದ್ದಾರೆ. ಇದು ಜೀವ ಬೆದರಿಕೆಯಾಗಿದ್ದು, ದೂರು ನೀಡಿದ್ದೇವೆ. ನಾವು ಮಂಡ್ಯದವರು, ಹುಟ್ಟಿ ಬೆಳೆದಿದ್ದು ಮಂಡ್ಯದಲ್ಲಿ. ವಾಪಸ್ ಕರೆಯುವ ಅವಶ್ಯಕತೆ ಇಲ್ಲ ಎಂದರು.
ಏನಿದು ಬೆಳವಣಿಗೆ?
ಧರ್ಮಸ್ಥಳದಲ್ಲಿ ಅತ್ಯಾಚಾರಕ್ಕೊಳಗಾಗಿ ಕೊಲೆಗೀಡಾಗಿದ್ದ ಸೌಜನ್ಯ ಮನೆಗೆ ಭೇಟಿ ನೀಡಿದ್ದರು. ಸ್ಥಳೀಯ ಯೂಟ್ಯೂಬರ್‌ಗಳಿಗೆ ಪಾಂಗಳ ಕ್ರಾಸ್ ಬಳಿ ಸಂದರ್ಶನ ನೀಡುತ್ತಿದ್ದ ವೇಳೆ ಕೆಲವು ಗೂಂಡಾಗಳು ಬಂದು ಯೂಟ್ಯೂಬರ್ಸ್‌ಗಳಿಗೆ ಹಲ್ಲೆ ನಡೆಸಿದ್ದರು. ಈ ವೇಳೆ ರಜತ್ ಪ್ರತ್ಯಕ್ಷ ಸಾಕ್ಷಿಯಾಗಿದ್ದರು. ಬಳಿಕ ಅಲ್ಲಿಂದ ತೆರಳಿದ್ದ ರಜತ್, ಈ ಘಟನೆಯ ಬಳಿಕ ತನಗೆ ಜೀವ ಬೆದರಿಕೆ ಬಂದಿರುವುದಾಗಿ ತಿಳಿಸಿದ್ದಾರೆ.

ಅಲ್ಲದೇ, ಸೌಜನ್ಯ ಮನೆಗೆ ಭೇಟಿಯ ಸಂಬಂಧ ಶಾರದಾ ಭಟ್ ಎಂಬುವವರು ಸಾಮಾಜಿಕ ಜಾಲತಾಣದಲ್ಲಿ, ‘ಬಿಗ್ ಬಾಸ್ ರಜತ್ ಅವರ ಪತ್ನಿ ಹೆಸರು ಅಕ್ಷತಾ. ಇವರು ರಜತ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ಇಬ್ಬರಿಗೂ ಇಬ್ಬರು ಮಕ್ಕಳಿದ್ದಾರೆ, ಒಂದು ಗಂಡು ಮತ್ತು ಒಂದು ಹೆಣ್ಣು.ಗಂಡ ಬೇಕು ಅಂದ್ರೆ ರಿಟರ್ನ್ ಕರೆಯಿಸಿಕೊಳ್ಳಿ ಅಕ್ಷತಾ ಅವರೇ…ಇದು ಮಂಡ್ಯ ಅಲ್ಲ ಕರಾವಳಿ…… ” ಎಂದು ಪೋಸ್ಟ್ ಮಾಡಿದ್ದರು. ಈ ಎಲ್ಲ ಬೆಳವಣಿಗೆಯ ಹಿನ್ನೆಲೆಯಲ್ಲಿ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.





