ಧರ್ಮಸ್ಥಳ ಅಸಹಜ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ರಚಿಸಿರುವ ಎಸ್ಐಟಿ ನಿಷ್ಪಕ್ಷಪಾತವಾಗಿ ತನಿಖೆ ನಡೆಸುವಂತೆ ಆಗ್ರಹಿಸಿ ಎಐಎಂಎಸ್ಎಸ್ ಸಾಂಸ್ಕೃತಿಕ ಸಂಘಟನೆ ಕಾರ್ಯಕರ್ತರು ಮೈಸೂರು ಜಿಲ್ಲಾಧಿಕಾರಿ ಕಚೇರಿಯ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಧರ್ಮಸ್ಥಳ ವ್ಯಾಪ್ತಿಯಲ್ಲಿ ಕಳೆದ 20 ವರ್ಷಗಳಲ್ಲಿ ನಡೆದಿವೆ ಎನ್ನಲಾದ ಅನೇಕಾನೇಕ ಮಹಿಳೆಯರು ಮತ್ತು ವಿದ್ಯಾರ್ಥಿನಿಯರ ನಾಪತ್ತೆ ಹಾಗೂ ಅಸಹಜ ಸಾವು, ಘೋರ ಕೊಲೆ, ಅತ್ಯಾಚಾರ, ದೌರ್ಜನ್ಯಗಳ ಪ್ರಕರಣಗಳು ಇಡೀ ದೇಶದ ಆತ್ಮಸಾಕ್ಷಿಯನ್ನು ಕಲಕಿ, ಜನತೆಯಲ್ಲಿ ತೀವ್ರ ಆತಂಕವನ್ನು ಹುಟ್ಟಿಸಿವೆ.
ಅತ್ಯಾಚಾರಕ್ಕೊಳಗಾದ ನೂರಕ್ಕೂ ಹೆಚ್ಚು ಶಾಲಾ ಬಾಲಕಿಯರು, ಮಹಿಳೆಯರ ಶವಗಳನ್ನು 1995 ರಿಂದ 2014ರ ನಡುವೆ ಅಲ್ಲಿನ ಸುತ್ತಮುತ್ತ ಹೂತಿದ್ದೇನೆ ಎಂದು ಧರ್ಮಸ್ಥಳದ ಮಾಜಿ ಪೌರಕಾರ್ಮಿಕ ಎನ್ನಲಾದ ವ್ಯಕ್ತಿಯ ದೂರನ್ನು ಆಧರಿಸಿ ಎಫ್ಐಆರ್ ಮಾಡಲಾಗಿದೆ.
ಅವರು ಹೂತಿರುವ ಬಹುಪಾಲು ಶವಗಳು ಬಾಲಕಿಯರು ಮತ್ತು ಮಹಿಳೆಯರದ್ದು ಎಂಬುದು ಬಹಳ ಆಘಾತಕಾರಿ ವಿಷಯವಾಗಿದೆ. 2010ರಲ್ಲಿ ಆತ ಶಾಲಾ ಬ್ಯಾಗ್ ಸಮೇತ ಹೂತಿದ್ದ ಸುಮಾರು 12 ವರ್ಷದ ಬಾಲಕಿಯ ಶವದ ನೆನಪು ಆತನಿಗೆ ನಿದ್ರಿಸಲು ಕೊಡದೆ ಈ ಎಲ್ಲಾ ವಿಷಯಗಳನ್ನು ಬಹಿರಂಗ ಪಡಿಸಲು ಪ್ರೇರೇಪಿಸಿರುವುದಾಗಿ ಆತ ಹೇಳಿಕೊಂಡಿರುವುದು ಮಾಧ್ಯಮಗಳಲ್ಲಿ ಪ್ರಕಟವಾಗಿದೆ.
ಅಲ್ಲದೆ, ಈ ವಿಷಯಗಳು ಸಾರ್ವಜನಿಕ ವಲಯದಲ್ಲಿ ವ್ಯಾಪಕವಾಗಿ ಚರ್ಚೆಗೆ ಒಳಪಡುತ್ತಿವೆ. ಅಷ್ಟೇ ಅಲ್ಲದೆ, ಈ ಪ್ರಕರಣಗಳ ವಿರುದ್ಧ ಹಲವಾರು ವರ್ಷಗಳಿಂದ ಪ್ರತಿರೋಧಗಳು, ಹೋರಾಟಗಳು ನಡೆಯುತ್ತಲೇ ಬರುತ್ತಿವೆ. ಈ ಹಿನ್ನೆಲೆಯಲ್ಲಿ ಸರ್ಕಾರ ಇತ್ತೀಚೆಗಷ್ಟೆ ಈ ನೂರಾರು ಶವಗಳ ಸಮಾಧಿ ಪ್ರಕರಣಗಳ ಕುರಿತು ಸಮಗ್ರ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸಲು ಎಸ್.ಐ.ಟಿ (ವಿಶೇಷ ತನಿಖಾ ದಳ) ನೇಮಿಸಿದೆ.
ತನ್ನ ಪಶ್ಚಾತ್ತಾಪದ ನೋವಿನಿಂದ ಹೊರಬರಲು ಮತ್ತು ಬಲಿಯಾದವರ ಸಂತ್ರಸ್ತರಿಗೆ ನ್ಯಾಯ ಒದಗಿಸಲು ಸುಮಾರು ಒಂದು ದಶಕದ ನಂತರ ತಾನು ಮುಂದೆ ಬಂದಿದ್ದೇನೆ ಎಂದು ಆ ವ್ಯಕ್ತಿ ಹೇಳಿಕೊಂಡಿದ್ದಾರೆ. ಅವರ ದೂರಿನಲ್ಲಿ, ಆತನನ್ನು ಮೇಲ್ವಿಚಾರಕರು ಶವಗಳು ಪತ್ತೆಯಾದ ನಿರ್ದಿಷ್ಟ ಸ್ಥಳಗಳಿಗೆ ಕರೆದು ವಿಲೇವಾರಿ ಮಾಡಲು ಹೇಳುತ್ತಿದ್ದರು. ಅವುಗಳಲ್ಲಿ ಹಲವು ಅಪ್ರಾಪ್ತ ಬಾಲಕಿಯರಾಗಿದ್ದವು ಎಂದಿದ್ದಾರೆ. ಒಬ್ಬ 20 ವರ್ಷದ ಮಹಿಳೆಯ ಮುಖವನ್ನು ಆಸಿಡ್‌ನಿಂದ ಸುಟ್ಟು, ಅವಳ ದೇಹವನ್ನು ಪತ್ರಿಕೆಯಿಂದ ಸುತ್ತಿಡಲಾಯಿತು ಮತ್ತು ಅವಳ ದೇಹವನ್ನು ಸುಡಲು ನನ್ನನ್ನು ಕೇಳಲಾಯಿತು.
ಆತನನ್ನು ಶಾಶ್ವತವಾಗಿ ಕಾಡಿದ್ದ ಒಂದು ಘಟನೆ 2010ರಲ್ಲಿ ಕಲ್ಲೇರಿಯಲ್ಲಿ ಪೆಟ್ರೋಲ್ ಬಂಕ್‌ನಿಂದ ಸುಮಾರು 500 ಮೀಟರ್ ದೂರದಲ್ಲಿ ಶಾಲಾ ಸಮವಸ್ತ್ರ ಧರಿಸಿದ್ದ 12 ರಿಂದ 15 ವರ್ಷದೊಳಗಿನ ಹುಡುಗಿಯೊಬ್ಬಳು ಶವವಾಗಿ ಬಿದ್ದಿರುವುದು ಕಂಡುಬಂದಿದೆ. ಅದನ್ನು ಹೂಳಬೇಕೆಂದು ಹೇಳಿದ್ದು ಇಂತಹ ಪ್ರಕರಣಗಳಲ್ಲಿ ಮುಖ ಸುಟ್ಟು, ಬಟ್ಟೆಗಳನ್ನು ಸುಟ್ಟು, ಸಾಕ್ಷ್ಯ ನಾಶ ಮಾಡಿದ್ದು.
ಆ ಹತ್ಯೆಗಳ ಹಿಂದಿನ ಬಲಿ ಪಶುಗಳು ಮತ್ತು ಅಪರಾಧಿಗಳನ್ನು ಬಹಿರಂಗಪಡಿಸುವುದು ನನ್ನ ಉದ್ದೇಶ ಎಂದು ಆತ ವಿವರಿಸಿದ್ದಾರೆ. ಹಾಗಾಗಿ, ಈ ಪ್ರಕ್ಷುಬ್ಧ ಪರಿಸ್ಥಿತಿಯಲ್ಲಿ ಶೀಘ್ರವಾಗಿ ಈ ನೂರಾರು ಸಾವುಗಳ ಕುರಿತು ಸಮಗ್ರ ನಿಷ್ಪಕ್ಷಪಾತ ತನಿಖೆ ನಡೆಯಬೇಕು.
ಯಾರೇ ತಪ್ಪಿತಸ್ಥರು, ಎಷ್ಟೇ ಉನ್ನತ ಸ್ಥಾನದಲ್ಲಿದ್ದರೂ. ಎಷ್ಟೇ ಪ್ರಭಾವಿ ವಲಯದವರಾಗಿದ್ದರೂ ಅವರಿಗೆ ಕಠಿಣ ಶಿಕ್ಷೆಯಾಗಬೇಕು ಹಾಗೂ ಎಲ್ಲಾ ಸಾಕ್ಷಿಗಳಿಗೆ ಮತ್ತು ಸಂತ್ರಸ್ತ ಕುಟುಂಬಗಳಿಗೆ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮೈಸೂರು | ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ
ಮನವಿ ನೀಡುವಾಗ ಜಿಲ್ಲಾ ಉಪಾಧ್ಯಕ್ಷೆ ಸೀಮಾ, ಜಿಲ್ಲಾ ಕಾರ್ಯದರ್ಶಿ ಪುಷ್ಪ ಇದ್ದರು.





