ಆಸ್ತಿ ಕಲಹಕ್ಕೆ ಸಂಬಂಧಿಸಿದಂತೆ ಕೆಲವರಿಂದ ತೀವ್ರ ಮಾನಸಿಕ ಕಿರುಕುಳಕ್ಕೆ ಮನನೊಂದ ಯುವಕನೋರ್ವ ಮನೆಯ ಅಟ್ಟದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕುಂದಗೋಳ ತಾಲ್ಲೂಕು ಚಿಕ್ಕನೇರ್ತಿ ಗ್ರಾಮದಲ್ಲಿ ನಡೆದಿದೆ.
ಈ ಘಟನೆಗೆ ಕಿರುಕುಳವೇ ಕಾರಣ ಎಂದು ಮೃತನ ಕುಟುಂಬಸ್ಥರು ದೂರು ನೀಡಿದ್ದು, ಪೊಲೀಸರು 8 ಮಂದಿ ಆರೋಪಿಗಳ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಗಂಭೀರ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. 23 ವರ್ಷದ ಫಕ್ಕೀರೇಶ ಹನಮಂತಪ್ಪ ತಡಸದ ಮೃತ ಯುವಕ ಎಂದು ಗುರುತಿಸಲಾಗಿದೆ. ಕೃಷಿ ಕೆಲಸ ಮಾಡಿಕೊಂಡಿದ್ದ ಈ ಯುವಕ, ಅಕ್ಟೋಬರ್ 15 ರಂದು ಮುಂಜಾನೆ 4:00-4:30 ಗಂಟೆಯ ನಡುವಿನ ಸುಮಾರಿಗೆ ತಮ್ಮ ಮನೆಯ ಮೇಲಿನ ಮಹಡಿಗೆ ಹಾಕಿದ ಕಟ್ಟಿಗೆಯ ಕಂಬಿಗೆ ಹಗ್ಗದಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.
ಮೃತ ಯುವಕನ ಅಜ್ಜನ ಆಸ್ತಿಯಲ್ಲಿ ಸುಮಾರು 20 ಎಕರೆ ಪಾಲು ಬೇಕೆಂದು ಕೆಲವರು ಕೋರ್ಟ್ ಮೂಲಕ ನೋಟಿಸ್ ಕಳುಹಿಸಿ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದರು. ಅಷ್ಟೇ ಅಲ್ಲದೆ, ಮನೆ ಮತ್ತು ಹಿತ್ತಲಿನಲ್ಲಿ ಪಾಲು ನೀಡಬೇಕೆಂದು ಆಗಾಗ ದೂರವಾಣಿ ಕರೆಗಳ ಮೂಲಕವೂ ತೀವ್ರ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಈ ಮಾನಸಿಕ ಒತ್ತಡವನ್ನು ಸಹಿಸಲಾಗದ ಫಕ್ಕೀರೇಶ ಆತ್ಮಹತ್ಯೆಯ ನಿರ್ಧಾರಕ್ಕೆ ಬಂದಿದ್ದಾನೆ ಎಂದು ಹೇಳಲಾಗಿದೆ.
ಈ ಸುದ್ಧಿ ಓದಿದ್ದೀರಾ? ಧಾರವಾಡ | ರೈತರ ಭೂಮಿ ಕಬಳಿಕೆ ಆರೋಪ; ಅಗತ್ಯ ಕ್ರಮಕ್ಕೆ ಒತ್ತಾಯ
ಆರೋಪಿಗಳು:
ಕಿರಟಗೇರಿಯ ಶಿವುನಗೌಡ ಸಂಕನಗೌಡ್ರ (50) ಮತ್ತು ಅಣ್ಣಪ್ಪ ಸಂಕನಗೌಡ್ರ (46), ಬ್ಯಾಹಟ್ಟಿಯ ಬಸಪ್ಪ ರೋಗಿ (60) ಮತ್ತು ಕಲ್ಲಪ್ಪ ರೋಗಿ (80), ಹುಲ್ಲೂರದ ಮುದಕಪ್ಪ ರಗಟೆ (50) ಮತ್ತು ಶರಣಪ್ಪ ರಗಟ (40), ಮಂಟೂರಿನ ರಾಯಮ್ಮ ಗುಂಜಳ (50) ಹಾಗೂ ಇತರ ಕೆಲವರ ವಿರುದ್ಧ ಸೂಕ್ತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೋಲಿಸ್ ಮೂಲಗಳಿಂದ ತಿಳಿದುಬಂದಿದೆ.





