ಖಾಸಗಿ ಕಾಲೇಜೊಂದರ ವಿದ್ಯಾರ್ಥಿನಿಯರ ಫೋಟೊಗಳನ್ನು ಎಡಿಟ್ ಮಾಡಿ, ಬೇರೊಬ್ಬರ ನಗ್ನ ದೇಹ ಚಿತ್ರಗಳಿಗೆ ಅಂಟಿಸಿ, ಆ ಅಶ್ಲೀಲ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದ ಆರೋಪದ ಮೇಲೆ ಇಬ್ಬರನ್ನು ಹುಬ್ಬಳ್ಳಿ ಪೊಲೀಸರು ಬಂಧಿಸಿದ್ದಾರೆ.
ಧಾರವಾಡ ತಾಲೂಕಿನ ಇಂಗಳಹಳ್ಳಿ ಗ್ರಾಮದ ಹ್ಯಾಕರ್ ಕಿರಣ್ ಚವನಗೌಡರ ಮತ್ತು ಆತನ ಸ್ನೇಹಿತ ನವೀನ್ ಅಕ್ಕಿ ಬಂಧಿತ ಆರೋಪಿಗಳು. ಈ ಇಬ್ಬರೂ, ಹುಬ್ಬಳ್ಳಿ ನಗರದ ಖಾಸಗಿ ಕಾಲೇಜಿನ ವಿದ್ಯಾರ್ಥಿನಿಯರ ಪೋಟೋಗಳನ್ನು ಡೌನ್‌ಲೋಡ್ ಮಾಡಿಕೊಂಡು, ಅವುಗಳನ್ನು ಎಡಿಟ್ ಮಾಡಿ, ಅಶ್ಲೀಲ ಚಿತ್ರಗಳಿಗೆ ಅಂಟಿಸಿ, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ ಎಂದು ಆರೋಪಿಸಲಾಗಿದೆ.
ಇತ್ತೀಚೆಗೆ, ಫೇಸ್‌ಬುಕ್‌ನಲ್ಲಿ ವಿದ್ಯಾರ್ಥಿನಿಯರ ಚಿತ್ರಗಳನ್ನು ಎಡಿಟ್ ಮಾಡಲಾದ ಅಶ್ಲೀಲ ಚಿತ್ರಗಳ ಕಾಣಿಸಿಕೊಂಡಿದ್ದವು. ಆ ಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಮೊದಲಿಗೆ ವಿದ್ಯಾರ್ಥಿನಿಯರು ಓದುತ್ತಿದ್ದ ಕಾಲೇಜಿನ ವಿದ್ಯಾರ್ಥಿ ರಜನಿಕಾಂತ ತಳವಾರ ಎಂಬಾತನನ್ನು ಸಂಶಯದ ಮೇಲೆ ಬಂಧಿಸಿದ್ದರು. ಅಲ್ಲದೆ, ಹ್ಯಾಕ್ ಮಾಡಲಾದ ವಿದ್ಯಾರ್ಥಿನಿಯರ ಇನ್‌ಸ್ಟಾಗ್ರಾಮ್ ಖಾತೆ ವಿವರ ಸಂಗ್ರಹಿಸಿ ಪೋಸ್ಟ್‌ನ ಮೂಲದ ಬಗ್ಗೆ ಮಾಹಿತಿ ನೀಡುವಂತೆ ಫೇಸ್‌ಬುಕ್‌ಗೆ ಪತ್ರ ಬರೆದಿದ್ದರು ಎಂದು ವರದಿಯಾಗಿದೆ.
ಪೊಲೀಸರ ಪತ್ರಕ್ಕೆ ಫೇಸ್‌ಬುಕ್ ಪ್ರತಿಕ್ರಿಯಿಸಿದ್ದು, ಮಾಹಿತಿಗಳನ್ನು ನೀಡಿದೆ. ಮಾಹಿತಿ ಪಡೆದ ಪೊಲೀಸರು ಹ್ಯಾಕರ್ ಕಿರಣ್ ಚವನಗೌಡರ ಮತ್ತು ಆತನ ಸ್ನೇಹಿತ ನವೀನ್ ಅಕ್ಕಿಯನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದಾರೆ. ವಿಚಾರಣೆಯಲ್ಲಿ ತಪ್ಪಿತಸ್ಥ ರಜನಿಕಾಂತನಲ್ಲ, ಈ ಇಬ್ಬರೇ ಎಂಬುದು ಸ್ಪಷ್ಟವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.




