ದೇಶದ ಸ್ವಾತಂತ್ರ್ಯ ಚಳುವಳಿ ಹಾಗೂ ಕರ್ನಾಟಕದ ಏಕೀಕರಣ ಚಳುವಳಿಗಳಲ್ಲಿ ಏಕಕಾಲದಲ್ಲಿ ಭಾಗವಹಿಸಿ, ಸಕ್ರೀಯವಾಗಿ ಪಾಲ್ಗೊಂಡಿದ್ದ ಮಹನೀಯ ಹೋರಾಟಗಾರರಲ್ಲಿ ಅದರಗುಂಚಿ ಶಂಕರಗೌಡರು ಪ್ರಮುಖರಾಗಿದ್ದರು ಎಂದು ಕರ್ನಾಟಕ ವಿದ್ಯಾವರ್ಧಕ ಸಂಘವು, ನವಲಗುಂದ ಸರಕಾರಿ ಪದವಿ ಮಹಾವಿದ್ಯಾಲಯದ ಎನ್.ಎಸ್.ಎಸ್. ಘಟಕ ಹಾಗೂ ಕನ್ನಡ ವಿಭಾಗದ ಸಹಯೋಗದಲ್ಲಿ ಆಯೋಜಿಸಿದ್ದ ‘ಅದರಗುಂಚಿ ಶಂಕರಗೌಡರ ದತ್ತಿ’ ಕಾರ್ಯಕ್ರಮದ ಅತಿಥಿಯಾಗಿ ಖ್ಯಾತ ಸಾಂಸ್ಕೃತಿಕ ಚಿಂತಕ ರವೀಂದ್ರನಾಥ ದೊಡ್ಡಮೇಟಿ ಮಾತನಾಡಿದರು.
ಸುಭಾಸಚಂದ್ರ ಬೋಸರ ಪ್ರಭಾವಕ್ಕೆ ಒಳಗಾಗಿದ್ದ ಶಂಕರಗೌಡರು, ಮಹಾತ್ಮಾ ಗಾಂಧೀಜಿಯವರ ಒಡನಾಡಿಯೂ ಆಗಿದ್ದರು. ಜೊತೆಗೆ ಅಪ್ಪಟ ದೇಶಭಕ್ತರಾಗಿ, ಸಂತರಾಗಿ, ಶರಣರಾಗಿ, ಹೋರಾಟಗಾರರಾಗಿದ್ದ ಇವರು, ವಿದ್ಯಾದಾನಿಯೂ ಆಗಿದ್ದರು. ಕರ್ನಾಟಕ ಏಕೀಕರಣಕ್ಕಾಗಿಯೇ ‘ಕರ್ನಾಟಕ ಏಕೀಕರಣ ಪರಿಷತ್ತು’ ಸ್ಥಾಪಿಸಿದ್ದರು. ಅದರಗುಂಚಿಯ ಕಲ್ಮೇಶ್ವರ ದೇವಸ್ಥಾನದಲ್ಲಿ ಉಪವಾಸ ಕುಳಿತು ದೇಶದ ಜನತೆಯ ಗಮನವನ್ನು ಸೆಳೆದಿದ್ದರು. ಅತ್ಯಂತ ಪ್ರಭಾವಿ ವ್ಯಕ್ತಿಯಾಗಿದ್ದರು. ಇಂತಹ ಮಹಾನ್ ವ್ಯಕ್ತಿಗಳ ನಿಸ್ವಾರ್ಥ ಹೋರಾಟದ ಫಲವಾಗಿಯೇ ಕರ್ನಾಟಕದ ಜನತೆ ಒಂದುಗೂಡಲು ಸಾಧ್ಯವಾಯಿತು ಎಂದು ಹೇಳಿದರು.
ಸಮಾರಂಭದ ಮುಖ್ಯ ಅತಿಥಿಯಾಗಿದ್ದ ಹಾಗೂ ಅದರಗುಂಚಿ ಶಂಕರಗೌಡರ ಸಹೋದರ ವಿರುಪಾಕ್ಷಿಗೌಡ ಪಾಟೀಲ ಅವರು, ಸುತ್ತಮುತ್ತ ಹಳ್ಳಿಯ ರೈತರನ್ನು ಕಟ್ಟಿಕೊಂಡು, ಚಕ್ಕಡಿಗಳ ಮೆರವಣಿಗೆಯ ಮೂಲಕ ಹೋರಾಟ ಮಾಡಿದ ಶಂಕರಗೌಡರು, ಎಲೆಯ ಮರೆಯ ಕಾಯಿಯಾಗಿದ್ದವರು. ಜನರ ಮನಸ್ಸಿನಲ್ಲಿ ಚಳುವಳಿಗಳ ಕಿಚ್ಚನ್ನು ಹೊತ್ತಿಸಿದವರು. ಅವರು ನಿಷ್ಠುರವಾದಿಯಾಗಿದ್ದರು. ಪ್ರತಿಯೊಂದು ಹೋರಾಟದಲ್ಲೂ ಮುಂಚೂಣಿಯಲ್ಲಿ ಇದ್ದು, ಜಯವನ್ನು ಸಾಧಿಸಿದ ಧೀಮಂತರಾಗಿದ್ದರು. ಅಂತವರ ತ್ಯಾಗದ ಪ್ರತೀಕವಾಗಿ ಸ್ವಾತಂತ್ರ್ಯ ಲಭಿಸಿದ್ದಲ್ಲದೇ ಕರ್ನಾಟಕ ಏಕೀಕರಣವೂ ಸಾಧ್ಯವಾಯಿತು. ಇಂತಹ ಮಹಾನ್ ವ್ಯಕ್ತಿಗಳ ಜೀವನ ಚರಿತ್ರೆಯನ್ನು ಪಠ್ಯಪುಸ್ತಕಗಳಲ್ಲಿ ಸೇರಿಸುವುದರೊಂದಿಗೆ ಅವರ ಪ್ರಭಾವ ವಿದ್ಯಾರ್ಥಿಗಳ ಮೇಲಾಗಬೇಕು ಎಂದರು.
ಕರ್ನಾಟಕ ವಿದ್ಯಾವರ್ಧಕ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಡಾ. ಜಿನದತ್ತ ಅ. ಹಡಗಲಿ ಪ್ರಾಸ್ತಾವಿಕ ನುಡಿಗಳನ್ನಾಡುತ್ತಾ, ಕರ್ನಾಟಕ ಏಕೀಕರಣ ಚಳುವಳಿಯಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘದ ಪಾತ್ರ ಹಾಗೂ ಇವತ್ತು ಅದು ಅನೇಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತ ಮುನ್ನಡೆದಿರುವ ವಿವರ ನೀಡಿದರು.
ಇದನ್ನೂ ಓದಿ ಧಾರವಾಡ | ಕನ್ನಡ ರಂಗಭೂಮಿಗೆ ಮೊದಲಿನಂತಹ ವೈಭವ ಇಲ್ಲದಿರುವುದು ವಿಷಾದನೀಯ: ಮಹಾದೇವ ಹಡಪದ
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪ್ರಾ. ಎಂ. ಬಿ. ಬಾಗಡಿ, ಅವರು ಪ್ರತಿಯೊಬ್ಬ ಕನ್ನಡಿಗರೂ ಏಕೀಕರಣ ಹಾಗೂ ಸ್ವಾತಂತ್ರ್ಯ ಹೋರಾಟಗಾರರನ್ನು ನೆನಪಿಸಿಕೊಳ್ಳುವುದರೊಂದಿಗೆ ಕನ್ನಡ ನಾಡು-ನುಡಿ ಹಾಗೂ ದೇಶದ ಬಗ್ಗೆ ಗೌರವದ ಭಾವನೆ ಹೊಂದಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ದತ್ತಿದಾನಿ ಡಾ. ರಾಮು ಮೂಲಗಿ, ಗೌಡಪ್ಪಗೌಡ ಪಾಟೀಲ, ಎ.ಬಿ. ಕೊಪ್ಪದ, ಎಸ್.ಜಿ. ಹಿರೇಮಠ ಉಪಸ್ತಿತರಿದ್ದರು. ಕು. ಸಂಜನಾ ಗಣಾಚಾರಿ ಪ್ರಾರ್ಥನೆ ಗೀತೆ ಹಾಡಿದರು. ಬಿ.ವಿ. ಏಣಗಿ ವಂದಿಸಿದರು. ಡಾ. ಆಯ್.ಬಿ. ಸಾತಿಹಾಳ ನಿರೂಪಿಸಿದರು.





