“ಜಾತಿ ವಿನಾಶವಾಗಬೇಕಾದರೆ ಮೊದಲು ಶಾಸ್ತ್ರಗಳ ವಿನಾಶವಾಗಬೇಕು. ಅಂತರ್ಜಾತಿ ವಿವಾಹಗಳ ಸಂಖ್ಯೆ ಹೆಚ್ಚಾಗಬೇಕು ಎಂದು ಅಂಬೇಡ್ಕರ್ ತಿಳಿಸಿದ್ದರು” ಎಂದು ನಡೆದ ಬುದ್ಧ, ಬಸವ, ಅಂಬೇಡ್ಕರ್ ವಿಚಾರ ಸಂಕಿರಣದಲ್ಲಿ ಲೇಖಕ ಸದಾಶಿವ ಮರ್ಜಿ ವಿಚಾರ ಮಂಡಿಸಿದರು.
ಧಾರವಾಡ ಪಟ್ಟಣದ ಕೃಷಿ ವಿಶ್ವವಿದ್ಯಾಲಯದಲ್ಲಿ ಬುದ್ಧ, ಬಸವ, ಅಂಬೇಡ್ಕರ್ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
“ಭಾರತದಲ್ಲಿ ಪ್ರಧಾನ ಸಂಸ್ಕೃತಿಗೆ ವಿರುದ್ಧವಾಗಿ ಪರ್ಯಾಯ ಸಂಸ್ಕೃತಿಯನ್ನು ಕಟ್ಟುವುದರ ಮೂಲಕ ಮಾನವ ಪ್ರೀತಿ, ಅಂತಃಕರಣ, ಪ್ರಜ್ಞೆ, ಸಮತೆಯನ್ನು ಬೋಧಿಸುತ್ತಲೇ ಪ್ರಜ್ಞೆ ಮತ್ತು ವೈಚಾರಿಕತೆಯನ್ನು ಹುಟ್ಟು ಹಾಕಿದವರು. ಜನರಲ್ಲಿ ವಿವೇಕ ಮತ್ತು ವಿವೇಚನೆಯನ್ನು ಹುಟ್ಟುಹಾಕಿದರು. ಜನಪರ ಚಳುವಳಿಗಳನ್ನು ರೂಪಿಸಿದರು. ಸಮಾಜಕ್ಕೆ ಹೊಸ ಚೇತನ ಮತ್ತು ಆಯಾಮವನ್ನು ನೀಡಿದ್ದಾರೆ” ಎಂದರು.
ಡಾ.ಸದಾನಂದ ಸುಗಂಧಿ ಮಾತನಾಡಿ, “ಈ ಜಗತ್ತಿಗೆ ಮೊಟ್ಟ ಮೊದಲು ಆಧ್ಯಾತ್ಮವನ್ನು ಕಲಿಸಿದ್ದು ಗೌತಮಬುದ್ಧ. ಅಂಬೇಡ್ಕರ್ ಅವರು ನಾನು ನನ್ನ ಧರ್ಮಕ್ಕೆ ಮರಳಿ ಬಂದಿದ್ದೇನೆ ಅಂದಿದ್ದಾರೆಯೇ ಹೊರತು; ನಾನು ಬೌದ್ಧ ಧಮ್ಮಕ್ಕೆ ಮತಾಂತರಗೊಂಡಿದ್ದೇನೆ ಅಂದಿಲ್ಲ. ಹೀಗಾಗಿ ಅಂಬೇಡ್ಕರ್ ಮತಾಂತರಗೊಂಡವರಲ್ಲ. ಮರಳಿ ಬುದ್ಧನೆಡೆಗೆ, ಮರಳಿ ಮನೆಗೆ ಬಂದವರು. ಹಿಂದೂ ಧರ್ಮದ ಜಾತಿ ವ್ಯವಸ್ಥೆಯಲ್ಲಿ ಮಾನಸಿಕವಾಗಿ ಬಳಲುತ್ತಿರುವುದನ್ನು ಕಂಡ ಬಾಬಾಸಾಹೇಬರು ಮರಳಿ ಗೂಡು ಸೇರುತ್ತಾರೆ” ಎಂದು ಅಂಬೇಡ್ಕರ್ ಮತಾಂತರ ಮತ್ತು ಅದರ ಪರಿಣಾಮಗಳು ವಿಚಾರದ ಕುರಿತು ಮಾತನಾಡಿದರು.
ಈ ಸುದ್ದಿ ಓದಿದ್ದೀರಾ? ಗದಗ | ಪ್ರವಾಹದಿಂದ ಹಾನಿಗೀಡಾದ ಪ್ರದೇಶ ವೀಕ್ಷಿಸಿದ ಸಚಿವ ಎಚ್ ಕೆ ಪಾಟೀಲ
ಮಾದಾರ ಚನ್ನಯ್ಯ ಸ್ವಾಮೀಜಿ ಮಾತನಾಡಿ, “ಬುದ್ಧ, ಬಸವ, ಅಂಬೇಡ್ಕರ್ ಚಿಂತನೆಗಳನ್ನು ಮನೆ ಮತ್ತು ಮನಗಳಲ್ಲಿ ಅಳವಡಿಸಿಕೊಳ್ಳುವುದು ಎಲ್ಲರ ಜವಾಬ್ದಾರಿಯಾಗಿದೆ. ಈ ಮಹನೀಯರು ಹುಟ್ಟಿ ಬರದೇ ಇದ್ದಿದ್ದರೆ; ನಾವಾರೂ ಸಮಾನತೆಯಿಂದ ಬದುಕಲು ಸಾಧ್ಯವಿದ್ದಿದ್ದಿಲ್ಲ. ನಾವೇ ಶ್ರೇಷ್ಠ ಇತರರು ಕನಿಷ್ಠವೆಂಬ ಮನೋಭಾವ ಹೆಚ್ಚಾಗುತ್ತಿದೆ. ನೆರೆಹೊರೆಯ ರಾಷ್ಟ್ರಗಳನ್ನು ಶತ್ರುಗಳಂತೆ ಕಾಣುವ ವಾತಾವರಣ ಸೃಷ್ಟಿಯಾಗಿರುವ ಪರಿಣಾಮ ಸಮಾಜದಲ್ಲಿ ಅಶಾಂತಿ ಹೆಚ್ಚಾಗುತ್ತಿದೆ” ಎಂದರು.
ಈ ಸಂದರ್ಭದಲ್ಲಿ ಚಿಂತಕರು, ಸಾಹಿತಿಗಳು, ವಿದ್ವಾಂಸರು, ವಿವಿಧ ಮಠಾಧೀಶರು, ಬುದ್ಧ, ಬಸವ, ಅಂಬೇಡ್ಕರ್ ಅನುಯಾಯಿಗಳು ವೇದಿಕೆ ಮೇಲಿದ್ದರು.





