ರೈತ ಹೋರಾಟಕ್ಕೆ ಯಾವುದೇ ಪಕ್ಷವಾದರೂ ತಲೆಬಾಗಲೇಬೇಕು ಎಂದು ಶಾಸಕ ಎಂ ಆರ್ ಪಾಟೀಲ್ ಹೇಳಿದ್ದಾರೆ.
ಧಾರವಾಡ ಜಿಲ್ಲೆಯ ಕುಂದಗೋಳ ಪಟ್ಟಣದ ಬಸವಣ್ಣಜ್ಜನವರ ಮಠ ಸಭಾಭವನದಲ್ಲಿ ಕೃಷಿ ಆಧಾರಿತ ಉದ್ಯಮಿಗಳ ಅಭಿವೃದ್ಧಿ ಸಂಸ್ಥೆಯಿಂದ ಜುಲೈ 31ರಂದು ಹಮ್ಮಿಕೊಂಡಿದ್ದ ರೈತ ಹುತಾತ್ಮ ದಿನಾಚರಣೆಯಲ್ಲಿ ಮಾತನಾಡಿದರು.
“ರೈತ ಹೋರಾಟ, ಪ್ರತಿಭಟನೆಗೆ ಯಾವುದೇ ರಾಜಕೀಯ ಪಕ್ಷವಾಗಿರಲಿ ತಲೆಬಾಗಲೇಬೇಕು. ರೈತರ ಹೋರಾಟ ನಿರಂತರವಾಗಿರಲಿ. ಕುಂದಗೋಳ ಪಟ್ಟಣದಲ್ಲಿ ತಾಲೂಕು ರೈತ ಭವನ ಕಟ್ಟಲು ಮುಂದಾಗುತ್ತೇನೆ. ಪ್ರತಿಯೊಂದು ಅಧಿವೇಶನದಲ್ಲಿ ನಾನು ರೈತರ ಪರ ಧ್ವನಿಯೆತ್ತಿದ್ದೇನೆ. ಈಗಾಗಲೇ ಜಿಲ್ಲೆಯ ಎಲ್ಲ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಸಭೆ ನಡೆಸಲಾಗಿದ್ದು, ಅದರಂತೆ ತಾಲೂಕಿಗೆ ಬರಪರಿಹಾರ ಕೊಡಿಸಲಾಗುವುದು ಮತ್ತು ಬೆಣ್ಣೆಹಳ್ಳದ ಸಮಸ್ಯೆ ಏನೇ ಇದ್ದರೂ ಬಗೆಹರಿಸಲಾಗುವುದು” ಎಂದು ಭರವಸೆ ನೀಡಿದರು.
ಮಾಜಿ ಶಾಸಕ ಎಂ ಎಸ್ ಅಕ್ಕಿ ಮಾತನಾಡಿ, “ಧಾರವಾಡ ನಿರಾವರಿಯಿಂದ ವಂಚಿತವಾದ ಜಿಲ್ಲೆಯಾಗಿದೆ. ನಾವು ಸದಾ ರೈತರ ಹೋರಾಟಕ್ಕೆ ಬೆಂಬಲವಾಗಿದ್ದೇವೆ. ಯಾವುದೇ ಸರ್ಕಾರಗಳು ಎಚ್ಚೆತ್ತುಕೊಳ್ಳಬೇಕೆಂದರೆ ರೈತ ಹೋರಾಟಗಳೇ ಕಾರಣವಾಗುತ್ತವೆ. ಯಾರೇ ಆದರೂ ರೈತನಿಗೆ ಹೆದರಲೆಬೇಕು” ಎಂದರು.
ಈ ಸುದ್ದಿ ಓದಿದ್ದೀರಾ? ತುಮಕೂರು | ದಲಿತ ಚಳವಳಿಗೆ 50 ವರ್ಷದ ಸಂಭ್ರಮಕ್ಕೆ ಆಹ್ವಾನ
ಕುಂದಗೋಳ ತಾಲೂಕು ರೈತ ಸಂಘದ ಅಧ್ಯಕ್ಷ ಗುರುಪಾದಪ್ಪ ಬಂಕದ ಮಾತನಾಡಿ, ರೈತರ ವಿವಿಧ ಬೇಡಿಕೆಗಳನ್ನು ಆಗ್ರಹಿಸಿ, “ಹುತಾತ್ಮ ರೈತರಿಗೆ ಗೌರವ ನೀಡಬಯಸುವುದಾದರೆ ಸರ್ಕಾರವು ರೈತರ ಬೇಡಿಕೆಗಳನ್ನು ಈಡೇರಿಸಬೇಕು. ಸಾಲಮನ್ನಾ ಮಾಡಬೇಕು. ಕಳಸಾ ಬಂಡೂರಿ ಯೋಜನೆ ಜಾರಿ ಮಾಡಬೇಕು. ರೈತರು ಆತ್ಮಹತ್ಯೆ ಮಾಡಿಕೊಳ್ಳದಂತೆ ಜಾಗೃತಿ ವಹಿಸಬೇಕು” ಎಂದರು.
ಹೆಚ್ಚು ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ, ಸೇವೆ ಸಲ್ಲಿಸುತ್ತಿರುವ ಸೈನಿಕರಿಗೆ ಸನ್ಮಾನಗೈದು ಗೌರವಿಸಿದರು. ತಾಲೂಕಿನ ರೈತ ಸಂಘಟಕರು, ಹಸಿರುಸೇನೆ ಸಂಘಟಕರು, ರೈತರು, ರೈತ ಮಹಿಳೆಯರು, ವಿದ್ಯಾರ್ಥಿಗಳು ಇದ್ದರು.





