ಯಾರೇ ವಿರೋಧಿಸಿದರೂ ಬಸವ ಸಂಸ್ಜೃತಿ ಉತ್ಸವ ನಡೆಯುತ್ತದೆ. ವಿಶ್ವಗುರು ಬಸವಣ್ಣನವರ ಸಲುವಾಗಿ ಈ ಅಭಿಯಾನ ನಡೆಯುತ್ತಿದೆಯೇ ಹೊರತು ಯಾವುದೇ ರಾಜಕಾರಣಿ ಅಥವಾ ಸ್ವಾಮಿಗಳ ಸಲುವಾಗಿ ಅಲ್ಲ ಅಥವಾ ಯಾರ ವಿರುದ್ಧವೂ ಅಲ್ಲ ಎಂದು ಧಾರವಾಡದಲ್ಲಿ ಬಸವಪರ ಸಂಘಟನೆಗಳು ಸ್ಪಷ್ಟಪಡಿಸಿವೆ.
ವಿಶ್ವಗುರು ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ರಾಜ್ಯ ಸರ್ಕಾರ ಘೋಷಿಸಿ ಒಂದು ವರ್ಷ ಪೂರೈಸಿದ ಸಂಭ್ರಮದಲ್ಲಿ ರಾಜ್ಯಾದ್ಯಂತ ವಿವಿಧ ಜಿಲ್ಲೆಗಳಲ್ಲಿ ಬಸವ ಸಂಸ್ಕೃತಿ ಅಭಿಯಾನ ನಡೆಯುತ್ತಿದ್ದು, ಧಾರವಾಡದಲ್ಲಿಯೂ ಇದೇ ಸೆಪ್ಟೆಂಬರ್ 12ರಂದು ಈ ಕಾರ್ಯಕ್ರಮ ನಡೆಯುತ್ತಿದೆ. ಈ ಕುರಿತು ಮುರುಘಾಮಠದಲ್ಲಿ ನಡೆಸಿದ ಪೂರ್ವಭಾವಿ ಸಭೆಯಲ್ಲಿ ಶುವಾನಂದ ಶೆಟ್ಟೆಣ್ಣವರ ಮಾತನಾಡಿ, ” ಬಸವಣ್ಣನ ಸಲುವಾಗಿ ಎಲ್ಲರೂ ಒಂದಾಗಿ ದುಡಿಯೋಣ. ಸೇವೆಯ ಫಲ ಸಿಕ್ಕೇ ಸಿಗುತ್ತದೆ” ಎಂದರು.
ಬಸವಂತಪ್ಪ ತೋಟದ ಮಾತನಾಡಿ, “ಹೊಸ ಉತ್ಸಾಹ ಮೂಡಲಿ. ಎಲ್ಲರೂ ಭಾಗವಹಿಸೋಣ. ಬಸವಣ್ಣ ಒಬ್ಬರಿಗೆ ಮಾತ್ರ ಸೀಮಿತವಲ್ಲ. ಎಲ್ಲರಿಗೂ ಬೇಕಾದವರು. ಶರಣರ ವೇಶಭೂಷಣವನ್ನು ಮಕ್ಕಳು ಧರಿಸುವುದಿದ್ದರೆ; ಹೆಸರು ನೊಂದಾಯಿಸಿಕೊಳ್ಳಬೇಕು. ಪ್ರಸಾದ ವ್ಯವಸ್ಥೆ ಇದ್ದಾಗ; ಯಾರೂ ಪ್ರಸಾದ ಕೆಡಿಸದಿರಿ. ಎಲ್ಲರೂ ವೈಯಕ್ತಿಕ ರಾಜಕೀಯ, ದ್ವೇಷ ಎಲ್ಲವನ್ನೂ ಮರೆತು, ಒಗ್ಗಟ್ಟಾಗಿ ಈ ಅಭಿಯಾನವನ್ನು ಯಶಸ್ವಿಯಾಗುವಂತೆ ಕಾರ್ಯನಿರ್ವಹಿಸಬೇಕು. ಯಾವುದೇ ರಾಜಕಾರಣಿಗಳು ಬರಲಿ, ಬರದಿರಲಿ, ಸ್ವಾಮೀಜಿಗಳು ಬರಲಿ ಬರದಿರಲಿ ಯಾರ ಬಗ್ಗೆಯೂ ತಲೆಕೆಡಿಸಿಕೊಳ್ಳುವುದು ಬೇಡ. ಎಲ್ಲರೂ ಲಿಂಗಾಯತ ಧರ್ಮದ ಬದ್ದತೆಯಿಂದ ಪಾಲ್ಗೊಳ್ಳಲು ಅನುವು ಮಾಡಿಕೊಡಿ” ಎಂದು ಕರೆ ಕೊಟ್ಟರು.
ಇದನ್ನೂ ಓದಿ: ಧಾರವಾಡ | ಗಣೇಶ ವಿಸರ್ಜನೆ ವೇಳೆ ಡಿಜೆ ವಿಚಾರಕ್ಕೆ ಗುಂಪು ಜಗಳ
ಸಂತೋಷ್ ಕತ್ತಿಶೆಟ್ಟರ್ ಮಾತನಾಡಿ, “ನಮ್ಮ ಬೆಳವಣಿಗೆಗಳನ್ನು ವಿರೋಧಿಸುವವರನ್ನು ಪ್ರತಿವಿರೋಧಿಸದೇ ನಾವೇ ದೂರಕರಿಸೋಣ. ಹುಬ್ಬಳ್ಳಿಯಲ್ಲಿ ಕೂಡಾ ಬಸವ ಸಂಸ್ಕೃತಿಯನ್ನು ಬೆಳೆಸಬೇಕಿದೆ. ಆ ಕಾರ್ಯಕ್ಕೆ ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಿ” ಎಂದರು.
ಮುರುಘಾಮಠದ ಉಪಾಧ್ಯಕ್ಷ ಹಾಗೂ ಬಸವ ಸಂಸ್ಕೃತಿ ಅಭಿಯಾನದ ಕಾರ್ಯದರ್ಶಿ ಪಟ್ಟಣಶೆಟ್ಟಿ ಮಾತನಾಡಿ, “ಯುವಕರೆಲ್ಲ ಸೇರಿ ಈ ಅಭಿಯಾನ ಮಾಡುತ್ತಿರುವುದು ಸಂತೋಷದ ವಿಚಾರವಾಗಿದೆ. ನಾವು ಮಾಡುವ ಕಾರ್ಯ ಸದ್ವಿನಿಯೋಗವಾಗಲಿ. ಎಲ್ಲರನ್ನು ಅಭಿಯಾನಕ್ಕೆ ಕರೆತರುವ ಕೆಲಸವಾಗಲಿ. ನಾವು ಮಾಡುವ ಕಾರ್ಯ ಮೊದಲು ಆತ್ಮಸಾಕ್ಷಿಯಾಗಿ ನಮಗೇ ಸರಿ ಎನಿಸಬೇಕು. ಉಪದೇಶ ಮಾಡುವವರು ಮೊದಲು ಆತ್ಮ ವಿಮರ್ಶೆ ಮಾಡಿಕೊಳ್ಳಬೇಕಿದೆ. ಯಾರು ಯಾರ ಮೇಲೆ ಸವಾರಿ ಮಾಡದೇ ಎಲ್ಲರೂ ಒಗ್ಗೂಡಿ ಕೆಲಸಮಾಡಬೇಕಿದೆ” ಎಂದರು.
ಸಭೆಯಲ್ಲಿ ಶಿವರುದ್ರಗೌಡ ಪಾಟೀಲ್, ದೇಸೂರ, ರವಿ ಬಾಗೋಡಿ, ಸಿ ಜಿ ಪಾಟೀಲ್, ಗುರುರಾಜ ಅವರಾದಿ, ಭೀಮನಗೌಡ ಪಾಟೀಲ್, ಮನೋಹರ ಜಮಖಂಡಿ, ಶಿವರುದ್ರಗೌಡ ಪಾಟೀಲ್, ವಿಶ್ವನಾಥ ನಡಕಟ್ಟಿ, ಸಂತೋಷ್, ಅರುಣ ಮೂಡಿ ಹಾಗೂ ಇತರರು ಇದ್ದರು.





