ಪಾದಚಾರಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಎಡಗಾಲಿನ ಮೂಳೆ ಮುರಿದು, ಗಾಯಗೊಂಡಿದ್ದ ವ್ಯಕ್ತಿ ಸರಿಯಾದ ಸಮಯಕ್ಕೆ ಆಂಬ್ಯುಲೆನ್ಸ್ ಬಾರದ್ದಕ್ಕೆ ಪರದಾಟ ನಡೆಸಿದ ಜಿಲ್ಲೆಯ ಕುಂದಗೋಳ ತಾಲೂಕಿನ ಸಂಶಿ ಗ್ರಾಮದಲ್ಲಿ ಇಂದು (ಡಿ.8) ಮಧ್ಯಾಹ್ನ ನಡೆದಿದೆ.
ಸಂಶಿ ಬಸ್ ನಿಲ್ದಾಣದ ಹತ್ತಿರ ರಸ್ತೆ ದಾಟುತ್ತಿದ್ದ ಪಾದಚಾರಿ ಮಂಜುನಾಥ ದ್ಯಾಮನಗೌಡ ಧರಣಿ ಎಂಬುವವರಿಗೆ ಇದೇ ಗ್ರಾಮದ ಮಲಿಕರೆಹಾನ್ ನದಾಫ್ ಎಂಬ ಬೈಕ್ ಸವಾರನೊಬ್ಬ ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿಗೆ ಸರಿಯಾದ ಸಮಯಕ್ಕೆ ಆಂಬ್ಯುಲೆನ್ಸ್ ಲಭ್ಯವಾಗದೆ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನರಳಾಟ ನಡೆಸಿದ ಪರಿಸ್ಥಿತಿ ಎದುರಾಯಿತು ಎಂದು ತಿಳಿದುಬಂದಿದೆ.
ಅಪಘಾತದ ತೀವ್ರತೆಗೆ ಮಂಜುನಾಥ ಧರಣಿ ಹಣೆ, ಕೈ ಮತ್ತು ಕಾಲುಗಳಿಗೆ ತೀವ್ರ ಗಾಯಗಳಾಗಿ, ರಕ್ತಸ್ರಾವದಿಂದ ಬಳಲುತ್ತಿದ್ದರು. ಮತ್ತು ಎಡಗಾಲಿನ ಮೂಳೆ ಮುರಿದಿದೆ. ತಕ್ಷಣವೇ ಸ್ಥಳೀಯರು ಗಾಯಾಳುವನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸುತ್ತಾರೆ. ಸಂಶಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗಾಯಾಳು ಸ್ಥಿತಿ ಗಮನಿಸಿದ ವೈದ್ಯರು ಪ್ರಥಮ ಚಿಕಿತ್ಸೆ ನೀಡಿ, ಸಮಯ ಮೀರಿ ಆಂಬ್ಯುಲೆನ್ಸ್ ತಡವಾಗಿ ಆಗಮಿಸುತ್ತದೆ. ಹೆಚ್ಚಿನ ಚಿಕಿತ್ಸೆಗಾಗಿ ತುರ್ತಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸುವಂತೆ ಸೂಚಿಸಿದ್ದಾರೆ.
ಈ ಬಗ್ಗೆ ಈದಿನ.ಕಾಮ್ ಜತೆಗೆ ವೈದ್ಯ ಡಾ. ಸುರೇಶ ಕಳಸಣ್ಣವರ ಮಾತನಾಡಿ, ಗಾಯಗೊಂಡಿದ್ದ ವ್ಯಕ್ತಿಯ ಸ್ಥಿತಿ ಭಯಪಡುವಂತೆ ಇರಲಿಲ್ಲವಾದರೂ ಎಡಗಾಲಿನ ಮೂಳೆ ಮುರಿದಿದೆ. ಮತ್ತು ಆಸ್ಪತ್ರೆಗೆ ಅವರನ್ನು ಕರೆತಂದ ತಕ್ಷಣ ಪ್ರಾಥಮಿಕ ಅರೋಗ್ಯ ತಪಾಸಣೆ ನಡೆಸಲಾಯಿತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಕರೆದೋಯ್ಯುವಂತೆ ಸೂಚನೆ ನೀಡಲಾಯಿತು. ಆಂಬ್ಯುಲೆನ್ಸ್ ತಡವಾಗಿದ್ದ ವಿಚಾರಕ್ಕೆ ಉತ್ತರಿಸಿದ ಅವರು, ಆ ರೀತಿ ಆಂಬ್ಯುಲೆನ್ಸ್ ತಡವಾಗಿ ಬಂದಿಲ್ಲ ಎಂದು ತಿಳಿಸಿದರು.
ಸ್ಥಳೀಯರು ಅಪಘಾತ ಸಂಭವಿಸಿದ ತಕ್ಷಣವೇ ಆಂಬ್ಯುಲೆನ್ಸ್‌ಗೆ ಕರೆ ಮಾಡಿದ್ದರೂ, ಅದು ನಿಗದಿತ ಸಮಯಕ್ಕೆ ಸ್ಥಳಕ್ಕೆ ತಲುಪಲಿಲ್ಲ ಎಂದು ಹೇಳಿದ್ದು, ಇದರಿಂದಾಗಿ ತೀವ್ರ ಗಾಯಗೊಂಡಿದ್ದ ಮಂಜುನಾಥ ಧರಣಿ ಸಂಶಿ ಆರೋಗ್ಯ ಕೇಂದ್ರದಲ್ಲೇ ನೋವಿನಿಂದ ನರಳಬೇಕಾಯಿತು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ ಧಾರವಾಡ | ಅಕ್ರಮ ಸ್ಪಿರೀಟ್ ಪತ್ತೆಯಾದ ಪ್ರಕರಣ; 51 ಕೆ.ಜಿ ಗಾಂಜಾ ಪೊಲೀಸ್ ವಶಕ್ಕೆ
ಈ ಘಟನೆ ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.





