ನಿರಂತರ ಮಳೆಯಿಂದಾಗಿ ಬೆಳೆಹಾನಿ ಉಂಟಾಗಿದ್ದು, ಶೀಘ್ರ ಪರಿಹಾರಕ್ಕೆ ಒತ್ತಾಯಿಸಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ವತಿಯಿಂದ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಅಹೋರಾತ್ರಿ ಧರಣಿ ನಡೆಸುತ್ತಿದ್ದು, ಈ ವೇಳೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಭಿತ್ತಿ ಫಲಕಗಳನ್ನು ಪ್ರದರ್ಶಿಸಿ ಘೋಷಣೆ ಕೂಗಿದರು.
ಮಾಜಿ ಶಾಸಕ ಅಮೃತ ದೇಸಾಯಿ ಮಾತನಾಡಿ, “ಗ್ರಾಮೀಣ ಭಾಗದ ಮಾರಡಗಿ, ಶಿವಳ್ಳಿ, ಹೆಬ್ಬಳ್ಳಿ ಭಾಗದಲ್ಲಿ ಹಾನಿಯಾದ ಬೆಳೆಯನ್ನು ವೀಕ್ಷಿಸಿದಾಗ ರೈತ ಸಂಕಷ್ಟಕ್ಕೆ ಸಿಲುಕಿರುವುದು ಚಿಂತಾಜನಕವಾಗಿದೆ. ಸತತ ಮಳೆಯಿಂದ ಹೆಸರು, ಉದ್ದು ಸಂಪೂರ್ಣ ಹಾಳಾಗಿದೆ. ಈ ಬಗ್ಗೆ ಕಾಂಗ್ರೆಸ್ ಸರ್ಕಾರ ತಲೆಕೆಡಿಸಿಕೊಳ್ಳುತ್ತಿಲ್ಲ. ಶೀಘ್ರವೇ ಬೆಳೆಹಾನಿಗೆ ಪರಿಹಾರ ಕೊಡಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಭರವಸೆ ನೀಡಿ ಹದಿನೈದು ದಿನ ಕಳೆದರೂ ಪರಿಹಾರ ದೊರಕಿಲ್ಲ. ಲಾಡ್ ಸಾಹೇಬರು ಮಾತನಾಡುವುದು ಯಾರಿಗೂ ಅರ್ಥವಾಗುವುದಿಲ್ಲ. ನಮ್ಮ ರೈತರಿಗೆ ಪರಿಹಾರ ಬೇಕಾಗಿದೆ” ಎಂದರು.
ಮಾಜಿ ಶಾಸಕಿ ಸೀಮಾ ಮಸೂತಿ ಮಾತನಾಡಿ, “ಬಿಜೆಪಿಯು ರೈತರ ಪರವಾಗಿ ಪ್ರತಿಭಟನೆ ನಡೆಸುತ್ತಿದೆ. ನಾವು ಬೆಳೆ ಹಾನಿ ಪರಿಶೀಲನೆ ನಡೆಸಿದಾಗ; ರೈತರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಅತಿಯಾದ ಮಳೆ ಮತ್ತು ಅತಿವೃಷ್ಠಿಯು ರೈತರ ಬಾಳನ್ನು ದುಸ್ಥಿತಿಗೆ ತಂದಿಟ್ಟಿದೆ. ಹೆಸರು, ಸೋಯಾಬಿನ್, ಉದ್ದು ಬೆಳೆ ನಾಶವಾದಾಗ; ರೈತರಿಗೆ ಏನು ಮಾತನಾಡಬೇಕೆಂದು ತೋಚಲಾರದ ವಾತಾವರಣ ಸೃಷ್ಟಿಯಾಗಿದೆ. ರೈತರಿಗೆ ಪ್ರತಿ ಎಕರೆಗೆ 50 ಸಾವಿರ ರೂಪಾಯಿ ಪರಿಹಾರ ನೀಡುವಂತೆ ಒತ್ತಾಯಿಸುತ್ತಾ, ರಾಜ್ಯ ಕಾಂಗ್ರೆಸ್ ಸರ್ಕಾರ ಕೂಡಲೆ ಬೆಳೆಹಾನಿ ಪರಿಹಾರ ನೀಡಬೇಕು” ಎಂದು ಮನವಿ ಮಾಡಿದರು.
ಇದನ್ನೂ ಓದಿ: ಧಾರವಾಡ | ಗಾಂಧಿ ಜಯಂತಿ ಅಂಗವಾಗಿ ಜಿಲ್ಲಾ, ರಾಜ್ಯಮಟ್ಟದ ಬಾಪೂಜಿ ಪ್ರಬಂಧ ಸ್ಪರ್ಧೆ





