ಒಂದೇ ಕುಟುಂಬದ ಠೇವಣಿ ಹಣವನ್ನು ವಾಪಸ್ ಕೊಡದ ಕಿತ್ತೂರುರಾಣಿ ಚೆನ್ನಮ್ಮ ಕೋ-ಆಪರೇಟಿವ ಸೊಸೈಟಿಗೆ ಜಿಲ್ಲಾ ಗ್ರಾಹಕರ ಆಯೋಗಯು ದಂಡ ವಿಧಿಸಿ, ಠೇವಣಿದಾರರಿಗೆ ಪರಿಹಾರ ನೀಡಲು ಆದೇಶ ಹೊರಡಿಸಿದೆ.
ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿರುವ ಕಿತ್ತೂರುರಾಣಿ ಚೆನ್ನಮ್ಮ ಕೋ-ಆಪರೇಟಿವ ಸೊಸೈಟಿಯಲ್ಲಿ 2023-24 ರ ಸಾಲಿನಲ್ಲಿ ನಗರದ ಸೆಂಟ್ರಲ್ ಎಕ್ಸೈಸ್ ಕಾಲೋನಿಯ ನಿವಾಸಿಗಳಾದ ಅಶೋಕ ಮತ್ತು ರೇಖಾ ಅನ್ವೇಕರ್ ಹಾಗೂ ಸುಮಾ ಮತ್ತು ಅವರ ಮಗಳು ನಿಸ್ಮಿತಾ ವಿಠ್ಠಲಕರ ಎಂಬುವವರು ತಲಾ ರೂ:13 ಲಕ್ಷ, ರೂ:5,50,000, ರೂ:14,50,000 ಹಾಗೂ ರೂ:3,50,000 ಮೊತ್ತದಲ್ಲಿ ಇಟ್ಟಿದ್ದ ಠೇವಣಿಗಳ ಅವಧಿ ಮುಕ್ತಾಯವಾಗಿದ್ದವು. ಕೆಲವೊಂದು ಮುಂದಿನ ವರ್ಷದಲ್ಲಿ ಮುಕ್ತಾಯವಾಗುತ್ತಿದ್ದವು.
ದೂರುದಾರರು ಸೊಸೈಟಿಯ ವ್ಯವಹಾರಿಕ ತೊಂದರೆಗಳನ್ನು ಅರಿತು ತಮ್ಮ ಎಲ್ಲ ಠೇವಣಿ ಹಣ ಮರಳಿಸುವಂತೆ ಕೋಆಪರೇಟಿವ್ ಸೊಸೈಟಿಗೆ ಸಾಕಷ್ಟು ಸಲ ಕೇಳಿಕೊಂಡಿದ್ದರೂ ಠೇವಣಿ ಹಣವನ್ನು ಕೊಡದೆ ತಮಗೆ ಮೋಸ ಮಾಡಿ ಸೇವಾ ನ್ಯೂನ್ಯತೆ ಎಸಗಿದ್ದಾರೆ ಎಂದು ಹೇಳಿ ಸೊಸೈಟಿಯವರ ಮೇಲೆ ಕ್ರಮಕೈಗೊಂಡು ತಮ್ಮ ಠೇವಣಿ ಹಣ ಮರುಪಾವತಿಸುವಂತೆ ಮತ್ತು ತಮಗಾದ ತೊಂದರೆ ಮತ್ತು ಮಾನಸಿಕ ಹಿಂಸೆಗೆ ಪರಿಹಾರ ಕೊಡಿಸಬೇಕೆಂದು ಜಿಲ್ಲಾ ಗ್ರಾಹಕರ ಆಯೋಗಕ್ಕೆ ಜುಲೈ 9ರಂದು ದೂರುಗಳನ್ನು ಸಲ್ಲಿಸಿದ್ದರು.
ದೂರುದಾರರು ಠೇವಣಿ ರೂಪದಲ್ಲಿ ಇಟ್ಟಂತಹ ಹಣವನ್ನು ಎದುರುದಾರರು ತಮ್ಮ ಸೊಸೈಟಿಯ ಅಭಿವೃದ್ಧಿಗಾಗಿ ಉಪಯೋಗಿಸಿಕೊಂಡಿರುವುದು ಕಂಡುಬರುತ್ತದೆ. ಅಲ್ಲದೆ ದೂರುದಾರರಿಗೆ ಹಣದ ಅವಶ್ಯಕತೆ ಇದ್ದು ಅದನ್ನು ಎದುರುದಾರರು ಮರಳಿಸದೆ ಇರುವುದು ಗ್ರಾಹಕರ ರಕ್ಷಣಾ ಕಾಯ್ದೆಯಡಿ ಸೇವಾ ನ್ಯೂನ್ಯತೆ ಆಗುತ್ತದೆ ಎಂದು ಆಯೋಗ ತೀರ್ಪು ನೀಡಿದೆ.
ಈ ಸುದ್ಧಿ ಓದಿದ್ದೀರಾ? ಧಾರವಾಡ | ಸೌಹಾರ್ದತೆಗೆ ಸಾಕ್ಷಿಯಾದ ಈದ್ ಮಿಲಾದ್; ಹಬ್ಬದಲ್ಲಿ ವಿವಿಧ ಧರ್ಮಿಯರು ಭಾಗಿ
ಠೇವಣಿ ಇಟ್ಟ ದಿನಾಂಕಗಳಿಂದ ಬಡ್ಡಿಯೊಂದಿಗೆ ಲೆಕ್ಕ ಹಾಕಿ ದೂರುದಾರರಿಗೆ ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ಹಿಂದಿರುಗಿಸಬೇಕು. ಜೊತೆಗೆ ಸೇವಾ ನ್ಯೂನ್ಯತೆಯಿಂದ ದೂರುದಾರರಿಗೆ ಆಗಿರುವ ಅನಾನುಕೂಲ, ತೊಂದರೆ ಹಾಗೂ ಮಾನಸಿಕ ಹಿಂಸೆಗೆ ತಲಾ ರೂ.50,000 ಪರಿಹಾರ ಹಾಗೂ ತಲಾ ರೂ.10,000 ಪ್ರಕರಣದ ಖರ್ಚು ವೆಚ್ಚ ನೀಡಲು ಎದುರುದಾರರಿಗೆ ಆಯೋಗವು ತೀರ್ಪಿನಲ್ಲಿ ಆದೇಶಿಸಿದೆ.





