ಪಾಲಿಕೆ ಸಾಮಾನ್ಯ ಸಭೆಯಲ್ಲಿ ವಿರೋಧ ಪಕ್ಷದವರಿಗೆ ಚರ್ಚೆಗೆ ಅವಕಾಶ ನೀಡಲಾಗುತ್ತಿಲ್ಲ. ವಿಷಯ ಪಟ್ಟಿಯಲ್ಲಿನ ಅಂಶಗಳನ್ನು ಚರ್ಚಿಸದೆ, ಏಕಪಕ್ಷೀಯವಾಗಿ ಅನುಮೋದಿಸಲಾಗಿದೆ ಎಂದು ಆರೋಪಿಸಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ವಿಪಕ್ಷ ಕಾಂಗ್ರೆಸ್ ಸದಸ್ಯರು ಸಭಾತ್ಯಾಗ ಮಾಡಿ, ಪ್ರತಿಭಟನೆ ನಡೆಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಪಾಲಿಕೆ ವಿರೋಧ ಪಕ್ಷದ ನಾಯಕಿ ಸುವರ್ಣಾ ಕಲ್ಲಕುಂಟಲಾ, “ಕಟ್ಟಡ ತೆರಿಗೆ ಶೇ.20ಕ್ಕೆ ಹೆಚ್ಚಿಸುವುದನ್ನು ವಿರೋಧಿಸಿದ್ದೇವೆ. ಪ್ರತಿ ವರ್ಷ ಈ ತೆರಿಗೆ ಹೆಚ್ಚಿಸದೆ, ಐದು ವರ್ಷಕ್ಕೊಮ್ಮೆ ಏರಿಸಬೇಕು ಎಂದು ಪ್ರಸ್ತಾಪಿಸಲು ಅವಕಾಶವನ್ನೇ ನೀಡಲಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“15ನೇ ಹಣಕಾಸು ಆಯೋಗದಲ್ಲಿ ಪಾಲಿಕೆಗೆ ₹43 ಕೋಟಿ ಅನುದಾನ ಮಂಜೂರಾಗಿದೆ. ಈ ಅನುದಾನವನ್ನು ಯಾವ್ಯಾವುದಕ್ಕೆ ಬಳಕೆ ಮಾಡಲಾಗುವುದು ಎಂದು ವಿರೋಧ ಪಕ್ಷದವರ ಜತೆ ಚರ್ಚಿಸಿಲ್ಲ. ಆಡಳಿತ ಪಕ್ಷ ಬಿಜೆಪಿಯವರು ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ” ಎಂದು ದೂರಿದರು.
“ಚರ್ಚೆಗೆ ಅವಕಾಶ ನೀಡದೆ ಏಕಪಕ್ಷೀಯವಾಗಿ ವಿಷಯಗಳನ್ನು ಅನುಮೋದಿಸಿರುವ ಕುರಿತು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಿಗೆ ದೂರು ನೀಡುತ್ತೇವೆ. ಪಾಲಿಕೆ ಆಯುಕ್ತರು ಬಿಜೆಪಿಯವರ ಕೈಗೊಂಬೆಯಾಗಿದ್ಧಾರೆ. ಅವರನ್ನು ವರ್ಗಾವಣೆ ಮಾಡಬೇಕು” ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ನಿರಂಜನಯ್ಯ ಹಿರೇಮಠ, ಕವಿತಾ ಕಬ್ಬೇರ, ಮಹಮದ್ ಇಕ್ಬಾಲ್ ನವಲೂರು ಉಪಸ್ಥಿತರಿದ್ದರು.




