ರಸ್ತೆ ಅಗಲೀಕರಣದ ಸಮಯದಲ್ಲಿ ತೆಗೆದುಹಾಕಿರುವ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮಾಜಿ ಮೇಯರ್ ಶಿವಲಿಂಗಪ್ಪ ಗುರುಸಿದ್ಧಪ್ಪ ಅಗಡಿ ಅವರ ನಾಮಫಲಕಗಳನ್ನು ಮರುಸ್ಥಾಪನೆ ಮಾಡಲು ಒತ್ತಾಯಿಸಿ ನಾಗರಿಕರು ಹಾಗೂ ಅಗಡಿ ಕುಟುಂಬದ ವತಿಯಿಂದ ಮಹಾಪೌರರು ಮತ್ತು ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿದರು.
ಈ ಕುರಿತು ಈದಿನ.ಕಾಮ್ ಜತೆಗೆ ಶಶಿಧರ ಅಗಡಿ ಮಾತನಾಡಿ, ಶಿವಲಿಂಗಪ್ಪ ಗುರುಸಿದ್ಧಪ್ಪ ಅಗಡಿ ಅವರು ಎರಡು ಅವಧಿಗಳ ಕಾಲ ಚುನಾಯಿತ ಕಾರ್ಪೊರೇಟರ್ ಆಗಿ ಸೇವೆ ಸಲ್ಲಿಸಿ, ಪ್ರಥಮ ಅವಧಿಯಲ್ಲಿ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ಮಹಾನಗರ ಪಾಲಿಕೆಯ ಬಜೆಟ್ ಮಂಡಿಸಿದ್ದರು. ದ್ವಿತೀಯ ಅವಧಿಯಲ್ಲಿ ಮೇಯರ್ ಆಗಿ ಸೇವೆ ಸಲ್ಲಿಸಿದ ಅವರ ಮಹತ್ವಪೂರ್ಣ ಸಾರ್ವಜನಿಕ ಸೇವೆಯನ್ನು ಗೌರವಿಸುವ ಉದ್ದೇಶದಿಂದ, ಮಹಾನಗರ ಪಾಲಿಕೆಯು ಶಿವಾಜಿ ವೃತ್ತದಿಂದ ಸವದತ್ತಿ ರಸ್ತೆಯ ಎಪಿಎಂಸಿ ವರೆಗೆ ಇರುವ ರಸ್ತೆ ಮಾರ್ಗವನ್ನು ಅಧಿಕೃತವಾಗಿ “ಶಿವಲಿಂಗಪ್ಪ ಗುರುಸಿದ್ಧಪ್ಪ ಅಗಡಿ ಮಾರ್ಗ” ಎಂದು ನಾಮಕರಣ ಮಾಡಿತ್ತು.
ನಾಮ ಫಲಕಗಳನ್ನು ಶಿವಾಜಿ ವೃತ್ತ, ಪಟೇಲ್ ಟಿಂಬರ್ ಯಾರ್ಡ್, ಕೆ.ಎಸ್.ಆರ್.ಟಿ.ಸಿ ಡಿಪೋ ವೃತ್ತ, ಸವದತ್ತಿ ರಸ್ತೆಯ ಎಪಿಎಂಸಿ ಗೇಟ್ ಹತ್ತಿರದಲ್ಲಿ ಅಳವಡಿಸಲಾಗಿತ್ತು. ಇತ್ತೀಚೆಗೆ ರಸ್ತೆ ಅಗಲೀಕರಣ, ಅಭಿವೃದ್ಧಿ ಹಾಗೂ ಪುನರ್ ನಿರ್ಮಾಣ ಕಾಮಗಾರಿಗಳನ್ನು ಕೈಗೊಂಡ ಸಂದರ್ಭದಲ್ಲಿ, ಈ ಎಲ್ಲಾ ರಸ್ತೆಯಲ್ಲಿನ ಹೆಸರಿನ ಫಲಕಗಳನ್ನು ತೆಗೆದುಹಾಕಲಾಗಿದದ್ದು, ಕಾಮಗಾರಿಗಳು ಪೂರ್ಣಗೊಂಡ ನಂತರವೂ ಈ ಫಲಕಗಳನ್ನು ಮರುಸ್ಥಾಪನೆ ಮಾಡಲಾಗಿಲ್ಲ.
ಈ ರಸ್ತೆ ಸಾರ್ವಜನಿಕವಾಗಿ “ಶಿವಲಿಂಗಪ್ಪ ಗುರುಸಿದ್ಧಪ್ಪ ಅಗಡಿ ಮಾರ್ಗ” ಎಂಬ ಹೆಸರಿನಿಂದಲೇ ವ್ಯಾಪಕವಾಗಿ ಪರಿಚಿತವಾಗಿದ್ದು, ಫಲಕಗಳ ಅನುಪಸ್ಥಿತಿಯಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿರುವುದಲ್ಲದೆ, ಅವರು ಸಲ್ಲಿಸಿದ ಅಮೂಲ್ಯ ಸೇವೆಗೆ ನೀಡಿದ ಗೌರವವೂ ಕಡಿಮೆಯಾಗುತ್ತಿರುವಂತೆ ಕಾಣುತ್ತಿದೆ ಎಂದು ಮಹಾಪೌರರಿಗೆ ಮತ್ತು ಆಯುಕ್ತರಿಗೆ ಈ ವಿಷಯವನ್ನು ಪರಿಗಣಿಸಿ, ಸಂಬಂಧಿಸಿದವರಿಗೆ ನಿರ್ದೇಶನ ನೀಡಿ, ಹಿಂದೆ ಸ್ಥಾಪಿಸಲಾಗಿದ್ದ ಸ್ಥಳಗಳಲ್ಲಿಯೇ ರಸ್ತೆ ಹೆಸರಿನ ಫಲಕಗಳನ್ನು ಶೀಘ್ರವಾಗಿ ಮರುಸ್ಥಾಪಿಸುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ನ್ಯಾಯವಾದಿ ಗೌರಮ್ಮ ಅಗಡಿ, ವಿಜಯಲಕ್ಷ್ಮೀ ಅಗಡಿ, ಉಮಾ ಅಗಡಿ, ಡಾ. ಬಸವರಾಜ ಅಗಡಿ, ಶಶಿಧರ ಅಗಡಿ, ಸಂಗಣ್ಣ ಹಿತ್ತಲಮನಿ, ದೀಪಕ ಅಗಡಿ, ಜಿಲೇಬಿ ಬಸಣ್ಣ ಸೇರಿದಂತೆ ವಾರ್ಡಿನ ನಾಗರಿಕರು ಇದ್ದರು.





