ಡಾ. ಎಂ. ಎಂ. ಕಲಬುರ್ಗಿಯವರು ಕನ್ನಡ ಪಾಂಡಿತ್ಯ ಪರಂಪರೆಯ ಗಣ್ಯ ವಿದ್ವಾಂಸರು. ಎಲ್ಲರಂತೆ ಬದುಕದೇ ಎಲ್ಲರಿಗಾಗಿ ಬದುಕಿದ ಸಾರ್ಥಕ ಬದುಕು ಅವರದ್ದಾಗಿತ್ತು. ನಿಸ್ವಾರ್ಥ ಮನೋಭಾವದ ಅವರು ವಿದ್ಯಾರ್ಥಿಗಳೇ ನನ್ನ ನಿಜವಾದ ವಾರಸುದಾರರು ಎಂಬ ಉದಾತ್ತ ಭಾವನೆಯುಳ್ಳ ಹೃದಯ ಶ್ರೀಮಂತಿಕೆ ಅವರಲ್ಲಿತ್ತು ಎಂದು ಮುಳಗುಂದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ. ಆರ್. ಎಂ. ಕಲ್ಲನಗೌಡರ ಅಭಿಪ್ರಾಯಪಟ್ಟರು.
ಧಾರವಾಡದ ಕಲ್ಯಾಣ ನಗರದ ಹಿರೇಮಲ್ಲೂರ ಈಶ್ವರನ್ ಪದವಿ ಪೂರ್ವ ಕಾಲೇಜಿನಲ್ಲಿ ಕವಿವ ಸಂಘವು ಆಯೋಜಿಸಿದ್ದ ಎಂ.ಎಂ.ಕಲಬುರ್ಗಿ ಸಂಸ್ಮರಣೆ ದತ್ತಿ ಕಾರ್ಯಕ್ರಮದಲ್ಲಿ ‘ಡಾ. ಎಂ.ಎಂ. ಕಲಬುರ್ಗಿ ಜೀವನ ಹಾಗೂ ಸಾಧನೆ’ ಕುರಿತು ಉಪನ್ಯಾಸ ನೀಡಿ, ಮಾತನಾಡಿ, ಎಂ.ಎಂ.ಕಲಬುರ್ಗಿಯವರು ಬಹು ಶಾಸ್ತ್ರೀಯ ಅಧ್ಯಯನದ ಸತ್ಯಶೋಧಕರು. ಕನ್ನಡ ನಾಡು-ನುಡಿಯ ಗಂಭೀರ ಚಿಂತಕರಾಗಿದ್ದರು. ಜಾನಪದ ಇತಿಹಾಸ. ಸಂಸ್ಕೃತಿ, ಹಸ್ತಪ್ರತಿ ಶಾಸನ, ಗ್ರಂಥ ಸಂಪಾದನೆ, ಸಂಶೋಧನೆಗೆ ಸಂಬಂಧಿಸಿದಂತೆ ನಾನಾ ಕ್ಷೇತ್ರದಲ್ಲಿ ಅವಿಶ್ರಾಂತವಾಗಿ ಕಾರ್ಯ ಮಾಡಿದವರಾಗಿದ್ದರು. ಶರಣ ಸಂಸ್ಕೃತಿಯಂತೆ ಬದುಕಿದ ಅವರು, ಕಾಯಕ ಸಿದ್ಧಾಂತದಲ್ಲಿ ನಂಬಿಕೆ ಹೊಂದಿದವರಾಗಿದ್ದರು. ಜಾತಿ, ಧರ್ಮ, ಲಿಂಗ, ವರ್ಗಗಳನ್ನು ಮೀರಿ ಬೆಳೆದವರಾಗಿದ್ದರು. ಸ್ಥಳೀಯ ಇತಿಹಾಸ ಪುರುಷರ ಬಗ್ಗೆ ತಲಸ್ಪರ್ಶ ಅಧ್ಯಯನ ಮಾಡಿದವರು.
ನಿರಂತರ ಓದುವ ಹವ್ಯಾಸದ ಅವರು, ಈ ನಾಡಿಗೆ ಒಬ್ಬ ಗುರುವಾಗಿ ಮಾರ್ಗದರ್ಶನ ಮಾಡಿದವರು. ಅವರು ನೂರಕ್ಕೂ ಹೆಚ್ಚು ಕೃತಿಗಳನ್ನು ಸಹಸ್ರಾರು ಲೇಖನ ಬರೆದು ಕನ್ನಡ ಸಾಹಿತ್ಯ ಶ್ರೀಮಂತಗೊಳಿಸಿದ್ದಾರೆ. ಸೃಜನಶೀಲ ಸಾಹಿತ್ಯದಲ್ಲೂ ಆಸಕ್ತಿ ಹೊಂದಿದ ಅವರು, ಕರ್ನಾಟಕ ಸರ್ಕಾರ ಪ್ರಕಟಿಸಿದ ವಚನ ಸಾಹಿತ್ಯ ಸಂಪುಟ ಮಾಲೆಗೆ ಪ್ರಧಾನ ಸಂಪಾದಕರಾಗಿ ಕಾರ್ಯ ಮಾಡಿದ್ದಾರೆ. ಲಿಂ. ಜಗದ್ಗುರು ತೋಂಟದ ಸಿದ್ಧಲಿಂಗ ಶ್ರೀಗಳ ಹಿಂದಿನ ಶಕ್ತಿಯೇ ಡಾ. ಎಂ. ಎಂ. ಕಲಬುರ್ಗಿಯವರು. ಅವರ ದೂರದೃಷ್ಟಿಯ ಫಲವೇ ಇಂದಿನ ಡಾ. ಹಿರೇಮಲ್ಲೂರ ಈಶ್ವರನ್ ಕಾಲೇಜು. ಇಂದು ಅವರು ಭೌತಿಕವಾಗಿ ನಮ್ಮೊಂದಿಗಿಲ್ಲ. ಆದರೆ ಅವರ ಚಿಂತನೆಗಳು ಎಂದೆಂದಿಗೂ ಅಮರ ಎಂದರು.
ಅಧ್ಯಕ್ಷತೆ ವಹಿಸಿದ್ದ ಹಿರೇಮಲ್ಲೂರ ಈಶ್ವರನ್ ಕಾಲೇಜಿನ ಪ್ರಾಚಾರ್ಯ, ದತ್ತಿದಾನಿ ಪ್ರಿ. ಶಶಿಧರ ತೋಡಕರ ಮಾತನಾಡಿ, ಕಲಬುರಗಿಯವರು ಸೋಮಾರಿತನ ಎಂದೂ ಸೇರುತ್ತಿರಲಿಲ್ಲ. ವಿದ್ಯಾರ್ಥಿಗಳಿಗೆ ಪಠ್ಯ ಮೀರಿದ ಜ್ಞಾನ ಸಂಪತ್ತನ್ನು ಪ್ರಾಧ್ಯಾಪಕರು ನೀಡಬೇಕೆಂದು ಬಯಸಿದವರು. ಪ್ರಾಧ್ಯಾಪಕರು ವಿದ್ಯಾರ್ಥಿಗಳಿಗೆ ವಿದ್ಯೆ ನೀಡಿದರೆ ಸಾಲದು, ಅನ್ನದ ದಾರಿ ತೋರುವಂತಿರಬೇಕು. ಕೆಲಸದ ಬಗ್ಗೆ ನಿಷ್ಠೆಯುಳ್ಳ ಅವರು ಸಮಯ, ಶಕ್ತಿ ಹಾಗೂ ಹಣ ಹೇಗೆ ಯೋಜನಾಬದ್ಧವಾಗಿರಬೇಕೆಂಬುದನ್ನು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುತ್ತಿದ್ದರು ಎಂದರು.
ಇದನ್ನೂ ಓದಿ ಧಾರವಾಡ | ರಸ್ತೆ ಅಪಘಾತ; ಬೈಕ್ ಸವಾರ ಸಾವು
ಶಂಕರ ಕುಂಬಿ ಸ್ವಾಗತಿಸಿದರು. ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನೀಲಮ್ಮ ಕೋಟಿ ವಂದಿಸಿದರು. ಗಾಯತ್ರಿ ಸರ್‌ದೇಶಪಾಂಡೆ ಪ್ರಾರ್ಥಿಸಿದರು. ಈರಣ್ಣ ಇಂಜನಗೇರಿ ನಿರೂಪಿಸಿದರು. ವೀರಣ್ಣ ಒಡ್ಡೀನ, ವಿಜಯ ಕಲಬುರ್ಗಿ, ಡಾ. ವೀರಣ್ಣ ರಾಜೂರ, ಡಾ. ಚಂದ್ರಶೇಖರ ರೊಟ್ಟಿಗವಾಡ, ಬಸಯ್ಯ ಶಿರೋಳ, ಪ್ರೊ. ವಿಭೂತಿ ಇದ್ದರು.





