ವಿದ್ಯಾವಾಚಸ್ಪತಿ ಡಾ. ಪಂಚಾಕ್ಷರಿ ಹಿರೇಮಠ ಬಹುಭಾಷಾ ವಿಶಾರದರು ಮಾತ್ರವಲ್ಲದೆ, ಅಂತರಾಷ್ಟ್ರೀಯ ಮಟ್ಟದ ವಿದ್ವಾಂಸರು. ಅವರು ಮಾನವೀಯತೆ ಹಾಗೂ ಪ್ರಾಮಾಣಿಕತೆಯ ಧ್ವನಿಯಾಗಿದ್ದರು ಎಂದು ತುಮಕೂರಿನ ಸಾಹಿತಿ ಡಾ. ಎಸ್. ಪಿ. ಪದ್ಮಪ್ರಸಾದ ಹೇಳಿದರು.
ಕರ್ನಾಟಕ ವಿದ್ಯಾವರ್ಧಕ ಸಂಘವು ಆಯೋಜಿಸಿದ್ದ, ಡಾ. ಪಂಚಾಕ್ಷರಿ ಹಿರೇಮಠ ಅವರ 93ನೇ ಜನ್ಮದಿನದ ಪ್ರಯುಕ್ತ ಡಾ. ಪಂಚಾಕ್ಷರಿ ಹಿರೇಮಠ ಅವರ “ಆತ್ಮಸಖಿ ತುಂಬು ಹೃದಯ ಬಟ್ಟಲನ” ಹಾಗೂ “ಕಾಶ್ಮೀರದ ಮಹಾಯೋಗಿನಿ ಲಲ್ಲೇಶ್ವರಿ” ಎರಡು ಕೃತಿ ಲೋಕಾರ್ಪಣೆ ಮಾಡಿ ಗ್ರಂಥ ಪರಿಚಯಿಸಿ ಮಾತನಾಡಿದರು.
ಡಾ. ಪಂಚಾಕ್ಷರಿ ಹಿರೇಮಠ ಒಬ್ಬ ಭಾವಜೀವಿ. ಸಂವೇದನಾಶೀಲರು. ಭಕ್ತಿಭಾವದಿಂದ ಬದುಕಿದವರು. ಪ್ರಬಂಧ, ಕಥೆ, ವಿಮರ್ಶೆ ಹಾಗೂ ಅನುವಾದ ಹೀಗೆ ಸಾಹಿತ್ಯದ ವಿವಿಧ ಕ್ಷೇತ್ರದಲ್ಲಿ ಶ್ರದ್ಧೆಯಿಂದ ಸಾಹಿತ್ಯ ಕೃಷಿ ಮಾಡಿದ ಮೇರು ವಿದ್ವಾಂಸರು. ಪ್ರೀತಿಯೇ ಅವರ ಸಾಹಿತ್ಯದ ಜೀವಾಳವಾಗಿತ್ತು. ಅವರು ಶರಣ್ಯಭಾವ ಹಾಗೂ ಶರಣಭಾವದವರು. ಬರೆದಂತೆ ಬದುಕಿದವರು. ಅವರ ಬರವಣಿಗೆ ಬರೀ ಅಕ್ಷರಗಳಲ್ಲ, ಸಾರ್ಥಕ ಬದುಕಿನ ಸೂತ್ರಗಳು. ಒಂದು ನೂರಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ ಅವರು ಅನುವಾದ ಕ್ಷೇತ್ರದಲ್ಲಿ ಮಾಡಿದ ಸಾಧನೆ ಅನನ್ಯ.
ಹೈದ್ರಾಬಾದ ಕರ್ನಾಟಕದ ವಿಮೋಚನೆ ಸೇರಿದಂತೆ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾದ ಮಹಾನ್ ದೇಶಭಕ್ತರು. ಅವರ ಬರಹಗಳಲ್ಲಿ ಪ್ರೀತಿ, ವಿನಯತೆ, ಸೌಹಾರ್ಧತೆ, ನೋವು, ಕುಟುಂಬವತ್ಸಲತೆ, ಸರಳತೆ, ಸತ್ಯನಿಷ್ಠೆಗಳಿವೆ. ಅವರು ತಮ್ಮ ನಡೆ-ನುಡಿಗಳಲ್ಲಿ ಇನ್ನೂ ಜೀವಂತವಾಗಿದ್ದಾರೆ. ಸತ್ಯ ಹಾಗೂ ನೈತಿಕತೆಗಳೇ ಅವರ ಜೀವನದ ಉಸಿರಾಗಿದ್ದವು ಎಂದು ಹೇಳಿದರು.
ಪ್ರೊ. ಮಲ್ಲಿಕಾರ್ಜುನ ಹಿರೇಮಠ ಮಾನತಾಡಿ, ಡಾ. ಪಂಚಾಕ್ಷರಿ ಹಿರೇಮಠ ಎಲ್ಲರಂತೆ ಬದುಕದೇ ಎಲ್ಲರಿಗಾಗಿ ಬದುಕಿದ ಸಾರ್ಥಕ ಬದುಕಿನ ಪುಣ್ಯಪುರುಷರು. ಹೃದಯ ವೈಶಾಲ್ಯತೆಯ ಅವರು ಎಲ್ಲರ ಹೃದಯ ಹೃದಯಗಳನ್ನು ಕೂಡಿಸುವ ಕೆಲಸ ಮಾಡಿದರು. ಅವರದು ಸೌಹಾರ್ದತೆಯ ಸಾರ್ಥಕ ಬದುಕು ಎಂದರು.
ದತ್ತಿದಾನಿ ಮೃತ್ಯುಂಜಯ ಹಿರೇಮಠ ಮಾತನಾಡಿದರು. ಇದೇ ಸಂದರ್ಭದಲ್ಲಿ ಗಣ್ಯರನ್ನು ಸನ್ಮಾನಿಸಿ, ಗೌರವಿಸಲಾಯಿತು. ಕ.ವಿ.ವ. ಸಂಘದ ಅಧ್ಯಕ್ಷರಾದ ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೇದಿಕೆಯಲ್ಲಿ ಶಂಕರ ಕುಂಬಿ ಉಪಸ್ಥಿತರಿದ್ದರು. ಲಿಂಗಯ್ಯ ಹಿರೇಮಠ ಪ್ರಾರ್ಥಿಸಿದರು. ಡಾ. ಜಿನದತ್ತ ಹಡಗಲಿ ಸ್ವಾಗತಿಸಿದರು. ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ, ಮಾತನಾಡಿದರು. ಶಿವಾನಂದ ಭಾವಿಕಟ್ಟಿ ನಿರೂಪಿಸಿದರು. ಸತೀಶ ತುರಮರಿ ವಂದಿಸಿದರು.
ಶ್ರೀನಿವಾಸ ವಾಡಪ್ಪಿ, ವೀರಣ್ಣ ಒಡ್ಡೀನ, ಡಾ. ಧನವಂತ ಹಾಜವಗೋಳ, ಶಾಂತಾದೇವಿ ಹಿರೇಮಠ, ಜಯದೇವ ಹಿರೇಮಠ, ವಿಜಯಶ್ರೀ ಹಿರೇಮಠ, ಸರೋಜಾ ಹಿರೇಮಠ, ಬಿ.ಎಸ್. ಶಿರೋಳ, ವಿಜಯಕಮಾರ ಡಂಬಳ, ಮಾರ್ಕಂಡೇಯ ದೊಡಮನಿ, ಅನ್ನದಾನಿ ಹಿರೇಮಠ ಸೇರಿದಂತೆ ಹಿರೇಮಠ ಪರಿವಾರದವರು ಇದ್ದರು.





