ದನಿಯಿಲ್ಲದವರ, ಸಮಾಜದ ಅಂಚಿನಲ್ಲಿರುವ ಜನಸಾಮಾನ್ಯರ ಕುರಿತು ಬರೆದ ಸಾಹಿತ್ಯ ಬಹುಕಾಲ ನಿಲ್ಲುತ್ತದೆ. ಡಾ ಸಿದ್ಧಲಿಂಗ ಪಟ್ಟಣಶೆಟ್ಟಿ ಅವರು ಭಾರತೀಯ ಭಾಷೆಗಳ ನಡುವಿನ ಸೇತುವೆಯಾಗಿ ಬಹುತ್ವವನ್ನು ಎತ್ತಿ ಹಿಡಿದ ಲೇಖಕ ಎಂದು ಗೋವಾದ ಜ್ಞಾನಪೀಠ ಪುರಸ್ಕೃತ ಸಾಹಿತಿ ದಾಮೋದರ ಮೌಜೋ ಹೇಳಿದರು.
ಧಾರವಾಡದ ಆಲೂರು ವೆಂಕಟರಾವ್ ಸಭಾಭವನದಲ್ಲಿ ಪ್ರೊಗ್ರೆಸಿವ್ ಕಲ್ಚರಲ್ ಅಸೋಸಿಯೇಶನ್ ಆಫ್ ಇಂಡಿಯಾ (ಪಿಸಿಎಐ) ಸಂಘಟನೆ ಏರ್ಪಡಿಸಿದ್ದ ಕೇಂದ್ರ ಸಾಹಿತ್ಯ ಅಕಾಡೆಮಿ ಅನುವಾದ ಪುರಸ್ಕಾರಕ್ಕೆ ಭಾಜನರಾದ ಸಿದ್ಧಲಿಂಗ ಪಟ್ಟಣಶೆಟ್ಟಿ ಅವರ ಅಭಿನಂದನ ಸಮಾರಂಭ ಹಾಗೂ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ, ನಾವು ಈ ಸಮಾಜದ ಓರೆಕೋರೆಗಳ ಕುರಿತು ನಮ್ಮ ಭಿನ್ನಮತವನ್ನು ದಾಖಲಿಸಲು ಬರೆಯಬೇಕು. ಅಂದಾಗ ಒಂದು ಹೊಸ ಎಚ್ಚರ ಮೂಡಲು ಸಾಧ್ಯ. ದೇಶದಲ್ಲಿ ಎಲ್ಲ ಭಾಷೆಗಳು ಶ್ರೇಷ್ಠವೇ. ಯಾವ ಭಾಷೆಯನ್ನೂ ನಾವು ತಿರಸ್ಕರಿಸಬಾರದು. ಆದರೆ ಯಾವುದೇ ಭಾಷೆಯ ಹೇರಿಕೆಯಿಂದ ಸಮಸ್ಯೆಗಳು ಉದ್ಭವಿಸುತ್ತವೆ. ಯುವ ಲೇಖಕರು ತಮ್ಮ ಪರಂಪರೆಯ ಮೌಲ್ಯಗಳನ್ನು ಹೀರಿಕೊಂಡು ಹೊಸದನ್ನು ಕಟ್ಟಲು ಪ್ರಯತ್ನಿಸಬೇಕು ಎಂದು ತಿಳಿಸಿದರು.
ಬುಕ್ ಬ್ರಹ್ಮ ಸಂಚಾಲಕ ದೇವು ಪತ್ತಾರ ಸಿದ್ಧಲಿಂಗ ಪಟ್ಟಣಶೆಟ್ಟಿ ಅವರ ಕಾವ್ಯದ ಕುರಿತು ಮಾತನಾಡಿ, ಡಾ.ಸಿದ್ಧಲಿಂಗ ಪಟ್ಟಣಶೆಟ್ಟಿಯವರು ಆರೂವರೆ ದಶಕಗಳಿಂದ ಕಾವ್ಯ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರತಿಮೆಗಳು ಅವರ ಕಾವ್ಯದ ವಿಶೇಷ ಗುಣವಾಗಿವೆ. ಪಟ್ಟಣಶೆಟ್ಟರ ಕಾವ್ಯವೆಂದರೆ ಒಂದು ರೀತಿ ಪ್ರತಿಮೆಗಳ ಸಮೂಹ. ಅವರ ಕವಿತೆಯಿಂದ ಕವಿತೆಗೆ ಬದಲಾವಣೆ, ಬೆಳವಣಿಗೆ ಎದ್ದುಕಾಣುತ್ತದೆ. ಅಲ್ಲಿ ಕವಿತೆ ಕಟ್ಟುವ ಕಸುಬುದಾರಿಕೆ ಕಾಣುತ್ತದೆ ಎಂದರು. ಅವರು ಯಾವಾಗಲೂ ಅಧಿಕಾರ ಕ್ರೇಂದ್ರದಿಂದ ಅಂತರ ಕಾಯ್ದುಕೊಂಡು ಬಂದವರು. ಹಾಗಂತ ತಪ್ಪುಗಳು ಕಂಡಾಗ ಖಂಡಿಸದೇ ಕೂತವರಲ್ಲ ಎಂದು ಹೇಳಿದರು.
ಲೇಖಕಿ ಡಾ.ಪ್ರಜ್ಞಾ ಮತ್ತಿಹಳ್ಳಿ ಸಿದ್ಧಲಿಂಗ ಪಟ್ಟಣಶೆಟ್ಟಿ ಗದ್ಯದ ಬಗ್ಗೆ ಮಾತನಾಡಿ, ಕಂಡುಂಡದ್ದನ್ನು ಬಿಡುಬೀಸಾಗಿ ಬರೆದಿರುವುದು, ಅನವಶ್ಯಕ ಹೊಗಳಿಕೆ ಮಾಡದೇ ತೆಗಳಲೂ ಹೋಗದೇ ಆಪ್ತವಾಗುವ ಗುಣ ಅವರ ಗದ್ಯ ಬರವಣಿಗೆಯಲ್ಲಿ ಕಾಣ ಸಿಗುತ್ತದೆ ಎಂದರು. ಧಾರವಾಡ ಜನಜಾಗೃತಿ ಅಭಿಯಾನದ ಸಲಹೆಗಾರ ರಾಮಾಂಜನಪ್ಪ ಆಲ್ದಳ್ಳಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಪಟ್ಟಣಶೆಟ್ಟಿಯವರು ಸದಾ ನಮ್ಮ ಪ್ರಗತಿಪರ ಆಶಯದ ಕಾರ್ಯಕ್ರಮಗಳಿಗೆ ಬೆಂಬಲಿಸುತ್ತ ಬಂದಿದ್ದಾರೆ. ಯುವಜನತೆ ಹಿರಿಯರ ಸ್ಪೂರ್ತಿಯ ಮಾತುಗಳ ಆಶಯದಂತೆ ಸಾಂಸ್ಕೃತಿಕ ಚಳುವಳಿಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಅಭಿನಂದನೆ ಸ್ವೀಕರಿಸಿದ ಪಟ್ಟಣಶೆಟ್ಟಿಯವರು ಯುವಲೇಖಕರು ಸತತ ಓದು ಬರವಣಿಗೆಯಿಂದ ಸಾಹಿತ್ಯದಲ್ಲಿ ಮುಂದುವರಿಯಬೇಕು. ಸಾಮಾನ್ಯ ಜನರ ಒಡನಾಟದಲ್ಲಿ ಬದುಕಿನ ಅನುಭವಗಳನ್ನು ದಾಖಲಿಸಬೇಕು ಎಂದರು.
ಇದನ್ನೂ ಓದಿ ನಿರುದ್ಯೋಗದ ಪ್ರಶ್ನೆಗೆ ನಿಗ್ರಹವೇ ಉತ್ತರವೇ?; ಉದ್ಯೋಗಾಕಾಂಕ್ಷಿಗಳಿಗೆ ಉತ್ತರಿಸುವವರಾರು?
ರಂಗಕರ್ಮಿ, ಶಿರೀಷ್ ಜೋಶಿ ಪಟ್ಟಣಶೆಟ್ಟರ ರಂಗಸಾಹಿತ್ಯದ ಕುರಿತು ಮಾತನಾಡಿದರು. ಮಲ್ಲು ಹುಡೇದ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಶ್ವಿನಿ ನಿರೂಪಿಸಿದರು. ಹೇಮಾ ಪಟ್ಟಣಶೆಟ್ಟಿ, ಸುನೀತಕುಮಾರ್ ಶೆಟ್ಟಿ, ಅಲಕಾ ರಾವ್, ಕಳಕೇಶ್ ಎಸ್ ಇದ್ದರು. ನಂತರ ಪಟ್ಟಣಶೆಟ್ಟಿಯವರೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು. ಸುನಂದಾ ಕಡಮೆ, ವಿಠ್ಠಲ ದಳವಾಯಿ ಸಂವಾದ ನಡೆಸಿ ಕೊಟ್ಟರು.





