ನಾಟಕಗಳು ನಮ್ಮ ಬದುಕಿನ ಕನ್ನಡಿ, ನಾಟಕ ಕಲೆ ಒಂದು ನೈಜ ಕಲೆಯಾಗಿದ್ದು, ಸಮಾಜದ ಅಂಕ ಡೊಂಕುಗಳನ್ನು ತಿದ್ದುವ ಶಕ್ತಿ ಅದಕ್ಕಿದೆ ಎಂದು ಕರ್ನಾಟಕ ವಿದ್ಯಾವರ್ಧಕ ಸಂಘವು ರಾಜ್ಯೋತ್ಸವ ಅಂಗವಾಗಿ ಆಯೋಜಿಸಿದ್ದ ಹತ್ತು ದಿನಗಳ ನಾಟಕೋತ್ಸವಕ್ಕೆ ಚಾಲನೆ ನೀಡಿದ ವೈದ್ಯ ಡಾ. ನಿತಿನಚಂದ್ರ ಹತ್ತಿಕಾಳ ಹೇಳಿದರು.
ಇಂದಿನ ಆಧುನಿಕತೆಯ ಭರಾಟೆಯಲ್ಲಿ ಸಿನಿಮಾ ಹಾಗೂ ದೂರದರ್ಶನದ ಪ್ರಭಾವದಿಂದ ನಾಟಕ ಪ್ರದರ್ಶನ ಕ್ಷೀಣಿಸಿದಂತೆ ಕಂಡರೂ, ಪ್ರೇಕ್ಷಕರಲ್ಲಿ ನಾಟಕ ನೋಡುವ ಹವ್ಯಾಸ ಮಾತ್ರ ಕಡಿಮೆಯಾಗಿಲ್ಲ. ನಮ್ಮ ಸಂಸ್ಕೃತಿ ಪರಂಪರೆಯ ಪ್ರತೀಕವಾದ ನಾಟಕಗಳು ನಮ್ಮ ಸಮಾಜದ ದೈನಂದಿನ ಸಮಸ್ಯೆಗಳನ್ನೇ ಆಧಾರವಾಗಿ ಪ್ರದರ್ಶನ ಮಾಡುತ್ತಾರೆ. ಇಂತಹ ಜೀವಂತ ಹಾಗೂ ಸಮಗ್ರ ಕಲೆಯನ್ನು ನಾವೆಲ್ಲ ನಾಟಕ ನೋಡುವುದರ ಮೂಲಕ ಕಲೆ ಕಲಾವಿದರ ಬದುಕು ಹಸುನಾಗುವಂತೆ ಮಾಡಬೇಕೆಂದು ಹೇಳಿದರು.
ಕನ್ನಡ ಹಾಗೂ ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಕೆ. ಎಚ್. ಚೆನ್ನೂರ ರಂಗ ಕಲಾವಿದರನ್ನು ಗೌರವಿಸಿ ಮಾತನಾಡಿ, ಕವಿವ ಸಂಘ ರಾಜ್ಯೋತ್ಸವ ನಿಮಿತ್ತ ಇಡೀ ತಿಂಗಳು ಕಾರ್ಯಕ್ರಮ ಆಯೋಜಿಸಿದ್ದು ಶ್ಲಾಘನೀಯ. ಪದಾಧಿಕಾರಿಗಳೆಲ್ಲ ಕನ್ನಡದ ರಥವನ್ನು ಸಂಘಕ್ಕೆ ಚ್ಯುತಿ ಬಾರದಂತೆ ಎಳೆಯುತ್ತಿರುವುದು ಅಭಿನಂದನೀಯ.ಕವಿವ ಸಂಘವು ತಾಯಿ ಭುವನೇಶ್ವರಿಯ ಸ್ವರೂಪವಿದ್ದಂತೆ ಎಂದು ಹೇಳಿದರು.
ಬೆಳಗಾವಿಯ ರವಿ ಕೋಟಾರಗಸ್ತಿ ಹಾಗೂ ಕದಮನಹಳ್ಳಿಯ ಮಂಜುಳಾ ಕರೆಗೌಡ್ರು ರಂಗ ಸನ್ಮಾನ ಸ್ವೀಕರಿಸಿ, ಕವಿವ ಸಂಘ ನಮ್ಮ ಕಲಾ ಸೇವೆಯನ್ನು ಗುರುತಿಸುವ ಕಾರ್ಯ ಅಭಿನಂದನೀಯ ಹಾಗೂ ನಮ್ಮ ಭಾಗ್ಯ ಎಂದು ಹೇಳಿದರು.
ಇದನ್ನೂ ಓದಿ ಧಾರವಾಡ | ಉಪವಾಸ ಸತ್ಯಾಗ್ರಹ ಕೈಬಿಟ್ಟ ರೈತರು; ಮೆಕ್ಕೆಜೋಳ ಖರೀದಿ ಭರವಸೆ ನೀಡಿದ ಶಾಸಕರು, ಜಿಲ್ಲಾಧಿಕಾರಿ
ವೇದಿಕೆಯ ಮೇಲೆ ಕವಿವ ಸಂಘದ ಅಧ್ಯಕ್ಷರಾದ ಚಂದ್ರಕಾಂತ ಬೆಲ್ಲದ ಇದ್ದರು. ವೀರಣ್ಣ ಒಡ್ಡೀನ ಸ್ವಾಗತಿಸಿದರು. ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ ಶೈಲಜಾ ಅಮರಶೆಟ್ಟಿ ನಿರೂಪಿಸಿದರು. ಶಿವಾನಂದ ಭಾವಿಕಟ್ಟಿ ವಂದಿಸಿದರು. ಬಸವಪ್ರಭು ಹೊಸಕೇರಿ, ಸತೀಶ ತುರಮರಿ, ಶಂಕರ ಕುಂಬಿ, ಎಂ. ಎಂ. ಚಿಕ್ಕಮಠ, ಈರಣ್ಣ ನವಲಗುಂದ, ಎಸ್. ಎಮ್. ದಾನಪ್ಪಗೌಡರ, ಭೀಮಪ್ಪ ಖಟಾವಿ, ಬಿ. ಆಯ್. ಈಳಿಗೇರ ಇದ್ದರು. ಡಾ. ಪ್ರಕಾಶ್ ಗರುಡ ನಿರ್ದೇಶನದ ‘ಕಲ್ಲು ಬೆಳೆಯುವ ಕಥೆ ನಾಟಕ ಗೊಂಬೆ ಮನೆ’ ನಾಟಕ ಪ್ರದರ್ಶನಗೊಳಿಸಿದರು.





