ಬಾಲ್ಯ ವಿವಾಹ ಒಂದು ಸಾಮಾಜಿಕ ಪಿಡುಗು. ಇದನ್ನು ನಿರ್ಮೂಲನೆ ಮಾಡುವಲ್ಲಿ ಶ್ರಮವಹಿಸಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವ್ಹಿಲ್ ನ್ಯಾಯಾಧೀಶ ಪರುಶುರಾಮ ದೊಡ್ಡಮನಿ ಹೇಳಿದರು.
ಜುಮ್ಮಾ ಮಸೀದಿ ಕಮಿಟಿಯ ಅಧ್ಯಕ್ಷರುಗಳು ಹಾಗೂ ಮೌಲಾನಾಗಳಿಗೆ ಬಾಲ್ಯ ವಿವಾಹ ಮುಕ್ತ ಭಾರತ-100 ದಿನಗಳ ಅಭಿಯಾನ ಕಾರ್ಯಕ್ರಮದ ಅಂಗವಾಗಿ ಧಾರವಾಡ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಎ.ಡಿ.ಆರ್. ಕಟ್ಟಡದಲ್ಲಿ ಹಮ್ಮಿಕೊಂಡಿದ್ದ, ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
18 ವರ್ಷದ ಒಳಗಿನ ಹೆಣ್ಣು ಮಕ್ಕಳಿಗೆ 21 ವರ್ಷದ ಒಳಗಿನ ಗಂಡು ಮಕ್ಕಳಿಗೆ ವಿವಾಹ ಮಾಡಿದಲ್ಲಿ ಅದನ್ನು ಬಾಲ್ಯ ವಿವಾಹ ಎಂದು ಪರಿಗಣಿಸಲಾಗುತ್ತದೆ. ಇಂತಹ ಕೃತ್ಯದಲ್ಲಿ ಭಾಗಿಯಾಗಿರುವ ಎಲ್ಲರನ್ನೂ ಅಂದರೆ ತಂದೆ, ತಾಯಿ, ಕಲ್ಯಾಣ ಮಂಟಪದ ಮಾಲೀಕರು, ಪುರೋಹಿತರು, ಮೌಲ್ವಿಗಳು, ಫೋಟೋಗ್ರಾಫರ್ ಮುಂತಾದವರ ಮೇಲೆ ಬಾಲ್ಯವಿವಾಹ ನಿಷೇಧ ಕಾಯ್ದೆ-2006 ಪ್ರಕಾರ ಶಿಕ್ಷೆಗೆ ಒಳಪಡಿಸಬಹುದಾಗಿದೆ ಎಂದರು.
ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಬಿ. ವಾಯ್ ಪಾಟೀಲ ಮಾತನಾಡಿ, ವಿವಿಧ ಸಂಕಷ್ಟ ಪರಿಸ್ಥಿತಿಯಲ್ಲಿರುವ ಮಕ್ಕಳನ್ನು ರಕ್ಷಣೆ ಮಾಡಿ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸಲಾಗುತ್ತಿದ್ದು, ಇಂತಹ ಮಕ್ಕಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗುತ್ತದೆ ಮದರಸಾಗಳಲ್ಲಿ ಕುರಾನ ಪಠಣದ ಜೊತೆಗೆ ಶಿಕ್ಷಣವನ್ನು ನೀಡಿ ಅವರನ್ನು ಮುಖ್ಯವಾಹಿನಿಗೆ ತರಬೇಕು ಎಂದರು. ಧಾರವಾಡದ ಮಕ್ಕಳ ಕಲ್ಯಾಣ ಸಮಿತಿ ಸದಸ್ಯೆ ನೂರಜಹಾನ ಕಿಲ್ಲೇದಾರ ಮಾತನಾಡಿ, ಬಾಲ್ಯ ವಿವಾಹ ನಿಷೇಧ ಕಾಯ್ದೆ ಮತ್ತು ಬಾಲಕಾರ್ಮಿಕ ನಿಷೇಧ ಕಾಯ್ದೆ ಕುರಿತು ಮಾಹಿತಿ ನೀಡಿದರು. ವಿವಾಹ ಸಂದರ್ಭದಲ್ಲಿ ವಯಸ್ಸಿನ ದಾಖಲೆ ದೃಢೀಕರಣಕ್ಕೆ ಜನ್ಮ ದಾಖಲೆ ಮತ್ತು ಶಾಲಾ ದಾಖಲಾತಿ ಪರಿಗಣಿಸುವಂತೆ ತಿಳಿಸಿದರು.
ಅಂಜುಮನ್ ಸಂಸ್ಥೆ ಉಪಾಧ್ಯಕ್ಷ ಬಿ.ಎ ಜಾಗೀರದಾರ ಮಾತನಾಡಿ, ಬಾಲ್ಯ ವಿವಾಹ ಮುಕ್ತ ಭಾರತ ಅಭಿಯಾನ ಹಿನ್ನೆಲೆಯಲ್ಲಿ ನಮ್ಮ ಜಮಾತ್ ಮೂಲಕ ಬಾಲ್ಯವಿವಾಹ ತಡೆಯಲು ಒಂದು ಸುತ್ತೋಲೆ ಹೊರಡಿಸಿ ಸರ್ಕಾರದೊಂದಿಗೆ ಕೈಜೋಡಿಸಲಾಗುವುದು ಎಂದರು.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ದೀಪಾ ಜಾವೂರ ಮಾತನಾಡಿ, ಬಾಲ್ಯ ವಿವಾಹ ಮುಕ್ತ ಭಾರತ ಅಭಿಯಾನ ಹಿನ್ನೆಲೆಯಲ್ಲಿ ಮಾನ್ಯ ಜಿಲ್ಲಾಧಿಕಾರಿಗಳ ನಿರ್ದೇಶನದ ಮೇರೆಗೆ ಇಂದು ಜುಮ್ಮಾ ಮಸೀದಿ ಕಮಿಟಿಯ ಅಧ್ಯಕ್ಷರು ಹಾಗೂ ಮೌಲಾನಾಗಳಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಮುಂದಿನ ದಿನಗಳಲ್ಲಿ ಕಲ್ಯಾಣ ಮಂಟಪ ಮಾಲೀಕರಿಗೆ, ಪುರೋಹಿತರಿಗೆ, ಪ್ರಿಟಿಂಗ್ ಪ್ರೆಸ್ ಮಾಲಿಕರಿಗೆ ಮುಂತಾದವರಿಗೆ ಕಾರ್ಯಕ್ರಮ ಆಯೋಜಿಸಲು ಯೋಜಿಸಲಾಗಿದೆ. ಎಲ್ಲ ಸಮುದಾಯದವರು ಬಾಲ್ಯ ವಿವಾಹ ತಡೆಗೆ ಇಲಾಖೆಗಳ ಜೊತೆ ಕೈ ಜೋಡಿಸಬೇಕು. ಪ್ರಮುಖವಾಗಿ ಸಮುದಾಯದಲ್ಲಿ ವಿವಾಹ ಆಯೋಜನೆ ಸಂದರ್ಭದಲ್ಲಿ ಮತ್ತು ಸಾಮೂಹಿಕ ವಿವಾಹಗಳ ಆಯೋಜಿಸುವ ಸಂದರ್ಭದಲ್ಲಿ ಮಕ್ಕಳ ವಯಸ್ಸಿನ ದೃಢೀಕರಣದ ಬಗ್ಗೆ ಹೆಚ್ಚಿನ ಗಮನ ಹರಿಸುವುದು ಅವಶ್ಯವಿದ್ದು, ಈ ಹಿನ್ನೆಲೆಯಲ್ಲಿ ತಮ್ಮ ವ್ಯಾಪ್ತಿಯ ಶಾದಿ ಮಹಲ್, ಜಮಾತ್‍ಗಳಿಗೆ ಸೂಕ್ತ ನಿರ್ದೇಶನ ನೀಡಲು ತಿಳಿಸಿದರು.
ಇದನ್ನೂ ಓದಿ ಧಾರವಾಡ | ನಿರ್ಗತಿಕರ ಸೇವೆಯೇ ನಿಜವಾದ ಧರ್ಮವೆಂದಿದ್ದಾರೆ ವಿವೇಕಾನಂದರು: ಶಶಿಧರ ಹೊಸಳ್ಳಿ
ಬಾಲ್ಯವಿವಾಹ ಮುಂತಾದ ಸಂಕಷ್ಟ ಪರಿಸ್ಥಿತಿಯಲ್ಲಿರುವ ಮಕ್ಕಳನ್ನು ರಕ್ಷಿಸಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಬಾಲಮಂದಿರಗಳ ಮೂಲಕ ಮಕ್ಕಳನ್ನು ಪುನರ್ವಸತಿಗೊಳಿಸಿ ಮುಖ್ಯ ವಾಹಿನಿಗೆ ತರಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಮಹಮ್ಮದಲಿ ತಹಶೀಲ್ದಾರ ನಿರೂಪಿಸಿದರು. ಬಸಲಿಂಗಪ್ಪ ನೀರಲಕೇರಿ ವಂದಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ವಕ್ಫ ಸಲಹಾ ಸಮಿತಿ ಅಧ್ಯಕ್ಷ ಮಹಮ್ಮದ ಹಾಶ್ಮದ ಹಿಂಡಸಗೇರಿ, ಜಿಲ್ಲಾ ವಕ್ಫ ಅಧಿಕಾರಿಗಳು ಮತ್ತು ವಿವಿಧ ಜುಮ್ಮಾ ಮಸೀದಿ ಕಮಿಟಿಯ ಅಧ್ಯಕ್ಷ ತಾಜುದ್ದಿನ್ ಶೇಖ ಪೆಂಡಾರಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿಗಳಾದ ಪ್ರಕಾಶ ಕೊಡ್ಲಿವಾಡ, ಶಂಕರ ಬೋಸಲೆ, ಬಸವರಾಜ ಅಬ್ಬಾರ ಹಾಗೂ ಮಕ್ಕಳ ಸಹಾಯವಾಣಿ ಸಿಬ್ಬಂದಿಗಳು ಹಾಜರಿದ್ದರು.





