ಸಮಾಜದಲ್ಲಿ ಶಿಕ್ಷಕರಿಗೆ ಅಪಾರ ಗೌರವ, ವಿಶ್ವಾಸ ಮತ್ತು ಅವರಲ್ಲಿ ನಂಬಿಕೆ ಇದೆ. ಶಿಕ್ಷಕರಿಂದ ನಿರೀಕ್ಷಿತ ಬದಲಾವಣೆ ಸಾಧ್ಯ. ಪ್ರತಿಯೊಬ್ಬ ಶಿಕ್ಷಕರು ಪ್ರಾಮಾಣಿಕವಾಗಿ ಪ್ರಯತ್ನ ಮಾಡಿ, ಮಕ್ಕಳ ಭವಿಷ್ಯವನ್ನು ಉತ್ತಮವಾಗಿ ರೂಪಿಸಬೇಕೆಂದು ಕಾರ್ಮಿಕ ಇಲಾಖೆ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.
ಸೆ. 6ರಂದು ಜೆ.ಎಸ್.ಎಸ್. ಕಾಲೇಜು ಆವರಣದಲ್ಲಿರುವ ಸನ್ನಿಧಿ ಕಲಾ ಕ್ಷೇತ್ರದಲ್ಲಿ ಭಾರತ ರತ್ನ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಜನ್ಮ ದಿನಾಚರಣೆಯ ಅಂಗವಾಗಿ ಜಿಲ್ಲಾ ಮಟ್ಟದ ಶಿಕ್ಷಕರ ದಿನೋತ್ಸವ ಹಾಗೂ ಉತ್ತಮ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ, ಮಾತನಾಡುತ್ತಾ, ಶಿಕ್ಷಕ ವೃತ್ತಿ ಪವಿತ್ರವಾದದ್ದು. ವ್ಯಕ್ತಿ ಏಷ್ಟೇ ಎತ್ತರಕ್ಕೆ ಏರಿದರು ತನಗೆ ಶಿಕ್ಷಣ ನೀಡಿದ, ಪಾಠ ಕಲಿಸಿದ ಶಿಕ್ಷಕರ ಬಗ್ಗೆ ಅಪಾರವಾದ ಗೌರವ ಮತ್ತು ವಿಶ್ವಾಸವಿರುತ್ತದೆ, ಎಲ್ಲರೂ ವೃತ್ತಿಗೆ ಘನತೆ ತರುವಂತೆ ಕರ್ತವ್ಯ ನಿರ್ವಹಿಸಬೇಕೆಂದು.
ಜಿಲ್ಲಾಡಳಿತವು ಮಿಷನ್ ವಿದ್ಯಾಕಾಶಿ ಮೂಲಕ ಜಿಲ್ಲೆಯಲ್ಲಿ ಫಲಿತಾಂಶ ಸುಧಾರಣೆ ಹಾಗೂ ಶೈಕ್ಷಣಿಕ ಗುಣಮಟ್ಟ ಹೆಚ್ಚಳಕ್ಕೆ ಅನೇಕ ರೀತಿಯ ಕಾರ್ಯಕ್ರಮಗಳನ್ನು ರೂಪಿಸಿ, ಜಾರಿಗೊಳಿಸಿದೆ. ಆದರೆ ಕಳೆದ ಸಾಲಿನಲ್ಲಿ ನಿರೀಕ್ಷಿತ ಎಸ್.ಎಸ್.ಎಲ್.ಸಿ ಫಲಿತಾಂಶ ಲಭಿಸಲಿಲ್ಲ. ಇದಕ್ಕೆ ಶಿಕ್ಷಕರು ಕಾರಣರಾಗಿದ್ದಾರೆ. ಮುಂದಿನ ದಿನಗಳಲ್ಲಿ ನಮ್ಮ ಜಿಲ್ಲೆಯು ರಾಜ್ಯದ ಮೊದಲ ಹತ್ತು ಜಿಲ್ಲೆಗಳಲ್ಲಿ ಇರಬೇಕು. ಈ ನಿಟ್ಟಿನಲ್ಲಿ ತಾವು ನೀಡಲಿದೆ. ಶಿಕ್ಷಕರು ಮಕ್ಕಳಲ್ಲಿ ನೈತಿಕ ಶಿಕ್ಷಣ ಬೆಳಸಲು ಹೆಚ್ಚು ಸಮಯ ನೀಡಬೇಕು. ಅಕ್ಷರದೊಂದಿಗೆ ಮಾನವೀಯತೆಯನ್ನು ಕಲಿಸಿದರೆ ಮಕ್ಕಳ ಭವಿಷ್ಯ ಉತ್ತಮವಾಗುತ್ತದೆ. ಶಿಕ್ಷಕರ ಬೇಡಿಕೆ, ಸೌಲಭ್ಯಗಳಿಗಾಗಿ ಹೋರಾಟ ಮಾಡುವ ಸಂಘಟನೆಗಳು ಶೈಕ್ಷಣಿಕ ಗುಣಮಟ್ಟ ಸುಧಾರಣೆ ಹಾಗೂ ಮಕ್ಕಳ ಉತ್ತಮ ಭವಿಷ್ಯ ನಿರ್ಮಾಣಕ್ಕೂ ಒಗ್ಗಟಿನಿಂದ ಕೆಲಸ ಮಾಡಬೇಕೆಂದು ಹೇಳಿದರು.
ಶಿಕ್ಷಣದೊಂದಿಗೆ ಕೌಶಲ್ಯದ ಕಲಿಕೆಯು ವ್ಯಕ್ತಿಯ ಜೀವನದ ಗೆಲುವಿಗೆ ಕಾರಣವಾಗುತ್ತದೆ. ಬೇರೆ ರಾಷ್ಟ್ರಗಳಿಗೆ ಹೋಲಿಸಿದಾಗ ನಮ್ಮಲ್ಲಿ ಶೇ. 3 ರಷ್ಟು ಕೌಶಲ್ಯಭರಿತ ಮಾನವ ಸಂಪನ್ಮೂಲ ಲಭ್ಯವಾಗುತ್ತದೆ. ಇದು ಶೇ. 100 ರಷ್ಟು ಆಗುವಂತೆ ಪ್ರಾಥಮಿಕ ಶಿಕ್ಷಣದಿಂದಲೇ ನೈತಿಕ ಶಿಕ್ಷಣ ಹಾಗೂ ಕೌಶಲ್ಯ ಶಿಕ್ಷಣ ನೀಡಬೇಕು. ಶಿಕ್ಷಕ ಸಮೂಹ ರಾಜಕೀಯ ಪಕ್ಷ, ರಾಜಕಾರಣಿಗಳೊಂದಿಗೆ ಗುರುತಿಕೊಳ್ಳದೇ ಶಿಕ್ಷಣವನ್ನೇ ತಮ್ಮ ದೈಯ್ಯವೆಂದು ಭಾವಿಸಿ, ಪ್ರಾಮಾಣಿಕವಾಗಿ ತಮ್ಮ ಕರ್ತವ್ಯ ನಿರ್ವಹಸಿಬೇಕೆಂದು ವಿನಂತಿಸಿದರು.
ನವಲಗುಂದ ಶಾಸಕ ಎನ್.ಎಚ್.ಕೋನರೆಡ್ಡಿ ಮಾತನಾಡಿ, ಹಿಂದಿನ ಕಾಲದಲ್ಲಿದ್ದ ಶಿಕ್ಷಣ ಪದ್ಧತಿ ಈಗ ಸಿಗಲು ಸಾಧ್ಯವಾಗುತ್ತಿಲ್ಲ. ಹಿಂದಿನ ಕಾಲದಲ್ಲಿ ಗುರುಕುಲ ಪದ್ಧತಿಯಾಗಲಿ ಅಥವಾ ಸಾಂಪ್ರದಾಯಿಕ ಶಿಕ್ಷಣ ಕ್ರಮವಾಗಲಿ ಇತ್ತು. ಅಲ್ಲಿ ಶಿಕ್ಷಕರು ಕೇವಲ ಪಾಠ ಹೇಳುವವರಾಗಿರದೇ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಮಾರ್ಗದರ್ಶಕರಾಗಿದ್ದರು. ವಿದ್ಯಾರ್ಥಿಗಳಲ್ಲಿ ಶಿಸ್ತು, ಸಂಸ್ಕೃತಿ, ನೈತಿಕ ಮೌಲ್ಯಗಳನ್ನು ಬೆಳೆಸುವಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾಗಿತ್ತು. ಆದರೆ ಈಗಿನ ವ್ಯವಸ್ಥೆಯಲ್ಲಿ ಶಿಕ್ಷಕರು ಕೇವಲ ಪಠ್ಯಕ್ರಮ ಮುಗಿಸುವರು ಆಗಿದ್ದಾರೆ. ಕೇವಲ ಪಠ್ಯಕ್ರಮ ಮತ್ತು ಅಂಕಗಳಿಗೆ ಸೀಮಿತವಾಗದೆ, ವಿದ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವ ವಿಕಸನಕ್ಕೆ ಒತ್ತು ನೀಡಬೇಕು ಎಂದರು.

ಜಿಲ್ಲಾಧಿಕಾರಿ ದಿವ್ಯ ಪ್ರಭು ಮಾತನಾಡಿ, ಶಿಕ್ಷಕರೆಂದರೆ ಕೇವಲ ವೃತ್ತಿ, ಕೆಲಸ ಎಂದು ಭಾವಿಸಬಾರದು. ವಿದ್ಯೆಯನ್ನು ಸಮರ್ಪಿಸುವ ಅತ್ಯುತ್ತಮವಾದ ಕೆಲಸವಾಗಿದೆ. ಶಿಕ್ಷಕರಾದವರು ಪಾಠವನ್ನು ಮಾಡುವಾಗ ಮಕ್ಕಳಿಗೆ ಆ ಪಾಠದ ಬಗ್ಗೆ ಪ್ರೀತಿ, ಆಸಕ್ತಿ ಹಾಗೂ ಮನವರಿಕೆ ಆಗುವ ರೀತಿಯಲ್ಲಿ ಅಂದರೆ ಕಥೆಗಳ ಮುಖಾಂತರ ಹೇಳಿದರೆ, ಬಹಳ ವರ್ಷಗಳ ಕಾಲ ಅದು ಅವರಿಗೆ ನೆನಪಿನಲ್ಲಿ ಉಳಿಯಲು ಸಾಧ್ಯವಾಗುತ್ತದೆ. ಶಿಕ್ಷಕರಾದವರು ವಿದ್ಯಾರ್ಥಿಗಳಲ್ಲಿ ಯಾರು ಹೆಚ್ಚು, ಕಡಿಮೆ ಎಂದು ಭಾವಿಸದೆ ಎಲ್ಲರನ್ನೂ ಸಮಾನವಾಗಿ ಕಾಣಬೇಕು ಎಂದು ಹೇಳಿದರು.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮಹಾಪೌರರಾದ ಜ್ಯೋತಿ ಪಾಟೀಲ ಮಾತನಾಡಿ, ಶಿಕ್ಷಕರು ಮತ್ತು ಯೋಧರು ನಮ್ಮ ದೇಶದ ಎರಡು ಕಣ್ಣುಗಳಿದ್ದಹಾಗೆ. ಶಿಕ್ಷಕರು ವಿದ್ಯಾರ್ಥಿಗಳಿಂದ ಯಾವುದೇ ರೀತಿಯ ಅಪೇಕ್ಷೆಯನ್ನು ಇಟ್ಟುಕೊಳ್ಳದೇ, ಅವರಿಗೆ ವಿದ್ಯೆಯನ್ನು ದಾನ ಮಾಡುತ್ತಾರೆ. ಪ್ರತಿಯೊಬ್ಬ ಶಿಕ್ಷಕರು ಬಯಸುವುದೇನೆಂದರೆ ನಮ್ಮ ವಿದ್ಯಾರ್ಥಿಗಳು, ನಾವು ಕಲಿಸಿ ಕೊಟ್ಟ ವಿದ್ಯಾರ್ಥಿಗಳು ಸಮಾಜದಲ್ಲಿ ಒಂದು ಅತ್ಯುನ್ನತ್ತ ಸ್ಥಾನಲ್ಲಿ ಇದ್ದರೆ ಅದೇ ಅವರು ಶಿಕ್ಷಕರಿಗೆ ಕೊಡುವ ಗುರುದಕ್ಷಿಣೆ. ವಿದ್ಯಾ ಕಾಶಿಯನ್ನು ಉನ್ನತ ಶಿಖರಕ್ಕೆ ತೆಗೆದುಕೊಂಡು ಹೋಗಬೇಕೆಂದರೆ ಅದರಲ್ಲಿ ಅತ್ಯಂತ ಪ್ರಮುಖ ಪಾತ್ರ ಶಿಕ್ಷಕರದ್ದಾಗಿದೆ ಎಂದರು.
ಜಿಲ್ಲಾ ಪಂಚಾಯುತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಮಾತನಾಡಿ, ಶಿಕ್ಷಕರು ಕೇವಲ ಪಾಠ ಮಾಡುವ ವ್ಯಕ್ತಿಗಳಲ್ಲ, ಬದಲಿಗೆ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವ ಶಿಲ್ಪಿಗಳು, ಸಮಾಜಕ್ಕೆ ಉತ್ತಮ ಪ್ರಜೆಗಳನ್ನು ನೀಡುವ ಮಾರ್ಗದರ್ಶಕರು. ಮಕ್ಕಳಿಗೆ ಜೀವನದಲ್ಲಿ ಪ್ರೇರಣೆ ನೀಡುವ ಶಿಕ್ಷಕರು, ದೇವಸ್ವರೂಪಿಗಳಿದ್ದಂತೆ. ಒಬ್ಬ ವಿದ್ಯಾರ್ಥಿಯನ್ನು ನಾಯಕನ್ನಾಗಿ ರೂಪಿಸುವುದು ಶಿಕ್ಷಕರ ಸಾಮಥ್ರ್ಯವನ್ನು ಅವಲಂಭಿಸಿದೆ. ಮನೆಯೇ ಮೊದಲ ಪಾಠ ಶಾಲೆ. ತಾಯಿಯೇ ಮೊದಲು ಗುರು. ಮನೆಯಲ್ಲಿನ ವಾತಾವರಣ ಮಕ್ಕಳನ್ನು ಜೀವನದಲ್ಲಿ ಮುಂದೆ ಬರಲು ಪ್ರೇರಿಪಿಸುತ್ತದೆ. ಹಾಗೂ ಪ್ರತಿಯೊಬ್ಬ ಶಿಕ್ಷಕರೂ ತಮ್ಮ ವೃತ್ತಿಯ ಬಗ್ಗೆ ಹೆಮ್ಮೆ ಪಡಬೇಕು. ಶಿಕ್ಷಕರ ಪರಿಶ್ರಮದಿಂದಲೇ ದೇಶದ ಭವಿಷ್ಯ ಉಜ್ವಲವಾಗುತ್ತದೆ ಎಂದು ಹೇಳಿದರು.
ಮುರುಘಾಮಠದ ಡಾ. ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಗುರು ಎಂದರೆ ಕೇವಲ ಪಾಠ ಬೋಧಿಸುವ ವ್ಯಕ್ತಿ ಅಲ್ಲ. ಗುರು ಎಂದರೆ ಜೀವನಕ್ಕೆ ಬೆಳಕು ತರುವವನು. ಒಂದು ದೀಪ ಇನ್ನೊಂದು ದೀಪ ಬೆಳಗುವಂತೆ, ಒಬ್ಬ ಗುರು ತನ್ನ ಜ್ಞಾನದಿಂದ ಸಾವಿರಾರು ವಿದ್ಯಾರ್ಥಿಗಳ ಜೀವನ ಬೆಳಗಿಸುತ್ತಾನೆ. ಶಿಕ್ಷಣ ಕೇವಲ ಅಂಕಗಳು ಅಥವಾ ಪರೀಕ್ಷೆಗಳಿಗಾಗಿ ಅಲ್ಲ. ಅದು ವ್ಯಕ್ತಿತ್ವ ನಿರ್ಮಾಣದ ಸಾಧನ. ವಿದ್ಯಾರ್ಥಿಗಳು ತಮ್ಮ ಗುರುಗಳ ಮಾತುಗಳನ್ನು ಜೀವನದಲ್ಲಿ ಪಾಲಿಸುವುದೇ ನಿಜವಾದ ಗೌರವ. ಗುರುಗಳ ತ್ಯಾಗವನ್ನು ಮರೆಯಬೇಡಿ. ನಿಮ್ಮ ಬದುಕಿನಲ್ಲಿ ಸಾಧನೆ ಮಾಡಿದಾಗ, ಅದರ ಹಿಂದೆ ನಿಮ್ಮ ಶಿಕ್ಷಕರ ಶ್ರಮವಿದೆ ಎಂಬುದನ್ನು ನೆನಪಿಸಿಕೊಳ್ಳಿ. ಶಿಕ್ಷಕರನ್ನು ಗೌರವಿಸುವುದು ಭಾರತೀಯ ಸಂಸ್ಕøತಿಯ ಅವಿಭಾಜ್ಯ ಅಂಶವಾಗಿದೆ. ಸಮಾಜದಲ್ಲಿ ಒಳ್ಳೆಯ ನಾಗರಿಕರನ್ನು ರೂಪಿಸುವ ಶಕ್ತಿ ಶಿಕ್ಷಕರಲ್ಲಿದೆ ಎಂದು ಹೇಳಿದರು.
ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್.ಎಸ್.ಕೆಳದಿಮಠ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ರೇಣುಕಾ ಅಮಲಝರಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಡೆಯಟ್ ಪ್ರಾಚಾರ್ಯ ಜಯಶ್ರೀ ಕಾರೇಕರ, ಧಾರವಾಡ ತಹಶೀಲ್ದಾರ ಡಾ. ಡಿ.ಎಚ್.ಹೂಗಾರ, ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಬಿ.ಎಫ್.ಚುಳಕಿ, ಪ್ರದಾನ ಕಾರ್ಯದರ್ಶಿ ರಾಜಶೇಖರ ಹೊನ್ನಪ್ಪನವರ, ಸರ್ಕಾರಿ ನೌಕರ ಸಂಘದ ಜಿಲ್ಲಾ ಅಧ್ಯಕ್ಷ ಎಸ್.ಎಫ್. ಸಿದ್ದನಗೌಡರ, ಪ್ರೌಢಶಾಲೆ ಶಿಕ್ಷಕರ ಸಂಘದ ಅಧ್ಯಕ್ಷ ನಾರಾಯಣ ಭಜಂತ್ರಿ, ವಾಯ್.ಹೆಚ್.ಬಣವಿ, ಪಾಂಡುರಂಗ ಅಂಕಲಿ, ಹುದ್ದಾರ ವೇದಿಕೆಮೇಲಿದ್ದರು.
ಈ ಸುದ್ಧಿ ಓದಿದ್ದೀರಾ? ಧಾರವಾಡ | ಫೋಟೊ, ವಿಡೀಯೋಗ್ರಾಫರಗಳಿಗೆ ಅಸಂಘಟಿತ ಕಾರ್ಮಿಕ ಕಾರ್ಡ್ ನೋಂದಣಿ ಅಭಿಯಾನ
ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಮುಖ್ಯೋಪಾಧ್ಯರು, ಶಿಕ್ಷಕರು, ವಿವಿಧ ಶಿಕ್ಷಕರ ಸಂಘಗಳ ಪ್ರದಾಧಿಕಾರಿಗಳು, ಸದಸ್ಯರು ಭಾಗವಹಿಸಿದ್ದರು.





