ಕಳೆದ ಮೂರು ದಿನಗಳಿಂದ ನವಲಗುಂದ ಪಟ್ಟಣದಲ್ಲಿ ಸರಕಾರದ ಬೆಂಬಲ ಬೆಲೆ ಯೋಜನೆಯಲ್ಲಿ ಮೆಕ್ಕೆಜೋಳ ಖರೀದಿಗೆ ಅಗ್ರಹಿಸಿ, ಧರಣಿ, ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ರೈತರ ಸ್ಥಳಕ್ಕೆ ಇಂದು ಶಾಸಕ ಎನ್.ಎಚ್.ಕೋನರಡ್ಡಿ ಹಾಗೂ ಜಿಲ್ಲಾಧಿಕಾರಿ ದಿವ್ಯ ಪ್ರಭು ಭೇಟಿ ನೀಡಿ ರೈತರೊಂದಿಗೆ ಚರ್ಚಿಸಿ, ಸರಕಾರದಿಂದ ಬೆಂಬಲ ಬೆಲೆ ಯೋಜನೆಯಡಿ ಮೆಕ್ಕೆಜೋಳ ಖರೀದಿಸಲು ಸರಕಾರ ಮಟ್ಟದಲ್ಲಿ ಚರ್ಚಿಸಿ, ಕ್ರಮವಹಿಸಲಾಗುತ್ತಿದೆ. ಸ್ವಲ್ಪ ದಿನಗಳ ಕಾಲಾವಕಾಶ ನೀಡಿ, ಉಪವಾಸ ಸತ್ಯಾಗ್ರಹ, ಧರಣಿ ಹಿಂಪಡೆಯುವಂತೆ ಮಾಡಿದ ಮನವಿ ಪರಗಣಿಸಿ, ರೈತರು ಎಳನೀರು ಸೇವೆಸುವ ಮೂಲಕ ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಿ, ಧರಣಿ ಹಿಂಪಡೆದರು.
ಈ ವೇಳೆ ಶಾಸಕ ಎನ್.ಎಚ್. ಕೋನರಡ್ಡಿ ಮಾತನಾಡಿ, ಸರಕಾರ ಮಟ್ಟದಲ್ಲಿ ನಿನ್ನೆ ಮುಖ್ಯಮಂತ್ರಿ ಸಿದ್ಧರಾಮಯ್ಯವರಿಗೆ ಗೋವಿನ ಜೋಳದ ಖರೀದಿ ಬಗ್ಗೆ ಮಾತನಾಡಿದ್ದೇನೆ. ಕೇಂದ್ರ ಸರಕಾರ ಅನುಮತಿ ಕೊಡಲಿ ಬಿಡಲಿ ಗೋವಿನ ಜೋಳ ಖರೀದಿಗೆ ಸರಕಾರ ಬದ್ಧವಾಗಿದೆ. ತಾಂತ್ರಿಕ ಕಾರಣದಿಂದ ತಡವಾಗಿದೆ. ಸಚಿವ ಎಚ್. ಕೆ. ಪಾಟೀಲ ಹಾಗೂ ಚಲವರಾಯಸ್ವಾಮಿ ಅವರನ್ನು ದೆಹಲಿ ಕಳಿಸಿ, ಗೊಂದಲಗಳನ್ನು ಸರಿಪಡಿಸಲು ಮುಖ್ಯಮಂತ್ರಿಗಳು ಸೂಚಿಸಿದ್ದಾರೆ. ಶೀಘ್ರದಲ್ಲಿ ಖರೀದಿ ಕೇಂದ್ರ ಸ್ಥಾಪಿಸುವ ಭರವಸೆಯನ್ನು ನೀಡಿದರು ಮತ್ತು ರೈತ ಹೋರಾಟಗಾರರಿಗೆ ಸತ್ಯಗ್ರಹ ನಿಲ್ಲಿಸುವಂತೆ ಮನವಿ ಮಾಡಿದರು.
ಜಿಲ್ಲಾಧಿಕಾರಿ ದಿವ್ಯ ಪ್ರಭು ಮಾತನಾಡಿ, ರಾಜ್ಯ ಸರಕಾರದ ಕಾರ್ಯದರ್ಶಿ ಶಾಲನಿ ರಜನೀಶ ಹಾಗೂ ಸರಕಾರ ಮಟ್ಟದ ಅಧಿಕಾರಗಳು, ಸರಕಾರದಿಂದ ಮೆಕ್ಕೆಜೋಳ ಖರೀದಿಗೆ ಅಗತ್ಯವಿರುವ ಕ್ರಮಕೈಗೊಳ್ಳಲು ನಿರಂತರ ಪ್ರಯತ್ನ ಮಾಡುತ್ತಿದ್ದು, ಈ ವಿಷಯದ ಗಂಭೀರತೆಯ ಅರಿವು ಇದೆ. ಸಕಾಲಕ್ಕೆ ಸರಿಪಡಿಸಲಾಗುವುದು. ರಾಜ್ಯದಲ್ಲಿ ಮೊದಲಿಗರಾಗಿ ಧಾರವಾಡ ಜಿಲ್ಲೆಯಲ್ಲಿ ಬೆಳೆ ಹಾನಿ ಸಮೀಕ್ಷೆ ಮಾಡಿ ನವಲಗುಂದ ತಾಲೂಕಿಗೆ ಪ್ರಥಮದಲ್ಲಿ ಪರಿಹಾರ ನೀಡಿದ್ದು, ಇನ್ನೊಂದು ಹಂತದಲ್ಲಿ ಪರಿಹಾರ ಸಿಗಲಿದೆ. ರೈತರ ಸಂಬಂಧಿಸಿದ ವಿಷಯಗಳಲ್ಲಿ ಸುಮಾರು ವರ್ಷಗಳ ಹಿಂದೆಯಿಂದಲೂ ಹೋರಾಟ ಮಾಡುತ್ತಾ ಬಂದಿದ್ದೀರಿ ಅದರಲ್ಲೂ ನವಲಗುಂದ ತಾಲೂಕು ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ. ಪ್ರಸ್ತುತ ರೈತರಿಗೆ ಹಲವಾರು ಯೋಜನೆಗಳು ಜಾರಿಯಾಗಿವೆ ಎಂದರೆ ಅದಕ್ಕೆ ನಿಮ್ಮ ಕೊಡುಗೆ ಅಪಾರ ಅದಕ್ಕಾಗಿ ನಿಮ್ಮ ಯಾವುದೇ ಒಂದು ವಿಷಯವನ್ನು ಅತ್ಯಂತ ಪರಿಣಾಮಕಾರಿಯಾಗಿ ಜಿಲ್ಲಾಡಳಿತ ಮತ್ತು ತಾಲೂಕ್ ಆಡಳಿತ ಪ್ರತಿಯೊಂದು ವಿಷಯವನ್ನು ಗಂಭೀರವಾಗಿ ಪರಿಗಣಿಸುತ್ತೇವೆ ಎಂದು ಹೇಳಿದರು.
ಧಾರವಾಡ ಜಿಲ್ಲೆಯಲ್ಲಿ 95 ಸಾವಿರ ಹೆಕ್ಟರ್ ಬೆಳೆ ನಷ್ಟವಾಗಿದೆ. ಜಿಲ್ಲಾಡಳಿತವು 2 ಸಾರಿ ಪಟ್ಟಿಯನ್ನು ಸಿದ್ಧಪಡಿಸಿ, ಅತ್ಯಂತ ಪಾರದರ್ಶಕವಾಗಿ ಮಾಡಲಾಗಿದೆ. ಈ ಕುರಿತು ಪತ್ರಿಕೆಗಳಲ್ಲಿ ಪ್ರಕಟಣೆಯನ್ನು ಸಹ ನೀಡಿದೆ. ಈಗಾಗಲೇ ರೂ. 65 ಕೋಟಿ ಮೊತ್ತವನ್ನು ರೈತರಿಗೆ ಜಮಾ ಮಾಡಲಾಗಿದೆ. ರಾಜ್ಯದಲ್ಲಿಯೇ ರೈತರಿಗೆ ಮೊಟ್ಟಮೊದಲು ಹಣ ಜಮಾ ಮಾಡಿದ ಹೆಮ್ಮೆ ನಮ್ಮ ಜಿಲ್ಲಾಡಳಿತಕ್ಕೆ ಇದೆ. ಇನ್ನೂ ಅನುದಾನ ಬರುವುದು ಇದೆ. ನಂತರ ಅದನ್ನು ಸಹ ತಕ್ಷಣವೇ ನೇರವಾಗಿ ರೈತರ ಖಾತೆಗೆ ಜಮಾ ಮಾಡುತ್ತೇವೆ ಎಂದು ಅವರು ಹೇಳಿದರು.
ಕೆಲವು ರೈತರಿಗೆ ಹಣ ಜಮವಾಗಿಲ್ಲ ಎಂಬುದು ತಿಳಿದಿದೆ. ಅದಕ್ಕೆ ಕೆಲವು ತಾಂತ್ರಿಕ ಸಮಸ್ಯೆಗಳು ಆಗಿರುವುದರಿಂದ ಎಲ್ಲ ತಾಲೂಕುಗಳ ತಹಶೀಲ್ದಾರರಿಗೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದ್ದೇವೆ ಎಂದು ಹೇಳಿದರು.
ರೈತರಿಗೆ ಯಾವುದಾದರೂ ಸಮಸ್ಯೆಗಳು ಇದ್ದರೆ, ನೀವು ತಹಸಿಲ್ದಾರ್ ಕಚೇರಿಗೆ ಹೋಗಿ ಅಥವಾ ಜಿಲ್ಲಾಡಳಿತಕ್ಕೆ ಟೋಲ್ ಫ್ರೀ ನಂಬರಗೆ ಕರೆ ಮಾಡಿ. ರೈತರ ಸಮಸ್ಯೆಗಳು ಏನೇ ಇದ್ದರೂ ಜಿಲ್ಲಾಡಳಿತವು ಆದಷ್ಟು ಬೇಗನೆ ಬಗೆಹರಿಸುತ್ತದೆ. ಜಿಲ್ಲೆಯಲ್ಲಿ 80 ಸಾವಿರ ಹೆಕ್ಟರ್ ಹೆಸರು ಬೆಳೆ ಹಾನಿಯಾಗಿದೆ. ಪ್ರತ್ಯಕ್ಷವಾಗಿ ಸಚಿವರು, ಶಾಸಕರು ಹಾಗೂ ಜಿಲ್ಲಾಡಳಿತ ಎಲ್ಲರೂ ರೈತರ ಹೊಲಗಳಿಗೆ ಹೋಗಿ ನೋಡಿದ್ದೇವೆ. ಆದ್ದರಿಂದ ಪ್ರತಿವರ್ಷದಂತೆ ಈ ವರ್ಷವೂ ಎಫ್‍ಎಕ್ಯೂ ಗುಣಮಟ್ಟದ ಹೆಸರು ಕಾಳು ಉತ್ಪನ್ನ ಖರೀದಿ ಮಾಡುವುದರಿಂದ ರೈತರಿಗೆ ಸಮಸ್ಯೆ ಆಗುತ್ತದೆ. ಏಕೆಂದರೆ ಅತಿ ಹೆಚ್ಚು ಮಳೆಯಾಗಿರುವುದರಿಂದ ಗುಣಮಟ್ಟದಲ್ಲಿ ವ್ಯತ್ಯಾಸ ಆಗಿದೆ. ಈ ಕುರಿತು ಸರ್ಕಾರದ ಗಮನಕ್ಕೆ ತರಲಾಗಿದ್ದು ಸಮಸ್ಯೆ ಪರಿಹರಿಸಲಾಗುವುದು.
ಜಿಲ್ಲೆಯಲ್ಲಿ ಸುಮಾರು ಒಂಬತ್ತು ಸಾವಿರ ರೈತರು ಹೆಸರು ಕಾಳು ಮಾರಾಟಕ್ಕೆ ನೋಂದಣಿ ಮಾಡಿದ್ದಾರೆ. ಅದರಲ್ಲಿ ಕೇವಲ 76 ರೈತರಿಂದ ಮಾತ್ರ ಖರೀದಿಯಾಗಿದೆ. ಕಾರಣ ಏನೆಂದರೆ ಗುಣಮಟ್ಟದಲ್ಲಿ ಅತಿಯಾದ ಸಮಸ್ಯೆ ಆಗಿರುವುದರಿಂದ ಎಂದು ಹೇಳಿದರು. ಜಿಲ್ಲಾಡಳಿತವು ಈ ಒಂದು ಸಮಸ್ಯೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹಾಗೂ ಶಾಸಕರುಗಳಿಗೆ ಮತ್ತು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಗಮನಕ್ಕೂ ತಂದಿದ್ದೇವೆ. ಮತ್ತು ಸಂಬಂಧಪಟ್ಟ ಅಧಿಕಾರಿಯವರ ಗಮನಕ್ಕೂ ತರಲಾಗಿದೆ. ಆದಷ್ಟು ಬೇಗನೆ ರೈತರ ಸಮಸ್ಯೆಯನ್ನು ಪರಿಹಾರ ಮಾಡುತ್ತೇವೆ.
ಇದನ್ನೂ ಓದಿ ಧಾರವಾಡ | ಗಾದೆಗಳು ಜೀವನದ ಪಾಠ ಕಲಿಸುತ್ತವೆ: ಗಂಗಾ ಚವಣ್ಣವರ
ರೈತ ಸೇನಾ ರಾಜ್ಯಾಧ್ಯಕ್ಷ ಶಂಕರ ಅಂಬಲಿ ಮಾತನಾಡಿ, ನಿಮ್ಮ ಮೇಲೆ ನಂಬಿಕೆ ಇಟ್ಟು ಕಾಲವಕಾಶ ನೀಡುತ್ತೇವೆ. ಭರವಸೆ ಭರವಸೆಯಾದರೆ ಮತ್ತೆ ಹೋರಾಟ ಮಾಡುತ್ತೇವೆ ಎಂದರು. ರೈತ ಮುಖಂಡ ಲೋಕನಾಥ ಹೆಬಸೂರು, ರಘುನಾಥ ನಡುವಿನಮನಿ, ರಾಮದುರ್ಗ ರೈತ ಹೋರಾಟಗಾರ ಶಂಕರಗೌಡ ಪಾಟೀಲ, ಆನಂದ ಹವಳಕೋಡ, ದೇವೆಂದ್ರಪ್ಪ ಹಳ್ಳದ, ಜೀವನ ಪವಾರ ಇದ್ದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ, ಡಿಎಚ್‍ಓ ಡಾ.ಎಸ್.ಎಂ.ಹೊನಕೇರಿ, ತಹಶೀಲ್ದಾರ ಸುಧೀರ ಸಾಹುಕಾರ, ಸಿ.ಪಿ.ಆಯ್ ರವಿ ಕಪ್ಪತ್ತನವರ, ಡಾ. ರೂಪಾ ಹಾಜರಿದ್ದರು.





