ರೈತರು ಹೊಲಗಳಿಗೆ ಹೋಗುವ ರಸ್ತೆಗಳ ದುರಸ್ತಿ ಹಾಗೂ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಗ್ರಾಮ ಘಟಕದ ವತಿಯಿಂದ ಸಂಶಿ ಗ್ರಾಪಂ’ಗೆ ರೈತರು ಮನವಿ ಸಲ್ಲಿಸಿದರು.
ಈ ವೇಳೆ ರೈತ ಸಂಘದ ಅಧ್ಯಕ್ಷ ಸನ್ಮಾನಪ್ಪ ಕಮ್ಮಾರ ಮಾತನಾಡಿ, ಗ್ರಾಮದಲ್ಲಿ ಹೊಲಗಳಿಗೆ ಹೋಗುವ ದಾರಿ ತೀರ ಹದಿಗೆಟ್ಟಿದ್ದು, ಕೃಷಿ ಚಟುವಟಿಕೆಗಳನ್ನು ಮಾಡಿಕೊಳ್ಳಲು ಸಹ ಬಾರದಂತಾಗಿದೆ. ಕಾವಲಿ ದಾರಿ, ಹಳ್ಳದ ಪಕ್ಕದ ದಾರಿ, ನಿಂಗನಗೌಡ ದಾರಿ, ಹಳ್ಳಿ ದಾರಿ, ಹುಲಗುರ ದಾರಿ, ಕುಂದಗೋಳ ದಾರಿಯನ್ನು ಸರಿ ಮಾಡಿಕೊಡಬೇಕು. ಸಂಶಿ-ಅತ್ತಿಗೇರಿ ಮೇಲ್ಸೇತುವೆ ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ ಮತ್ತು ಗ್ರಾಮದಲ್ಲಿರುವ ಎಪಿಎಂಸಿ ಪ್ರಾಂಗಣವನ್ನು ಸ್ವಚ್ಛಗೊಳಿಸಿ ರೈತರಿಗೆ ಒಕ್ಕಲಿ ಮಾಡಿಕೊಳ್ಳಲು ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಇದೇ ವೇಳೆ ಗ್ರಾಪಂ ಅಧ್ಯಕ್ಷ ಗಿರೀಶಗೌಡ ಪಾಟೀಲ ಮಾತನಾಡಿ, ಹೊಲಕ್ಕೆ ಹೋಗುವ ಕಾಲುದಾರಿಗಳ ಬಗ್ಗೆ ಈಗಾಗಲೇ ಮೇಲಾಧಿಕಾರಿಗಳಿಗೆ ಗ್ರಾಪಂ’ನಿಂದ ವರದಿ ಸಲ್ಲಿಸಲಾಗಿದೆ. ಬೇಸಿಗೆಯಲ್ಲಿ ರಸ್ತೆಯ ಸುತ್ತಮುತ್ತಲಿನ ಕಂಟಿಗಳನ್ನು ತೆರವುಗೊಳಿಸುತ್ತೇವೆಂದು ತಿಳಿಸಿದ್ದರೂ ಮತ್ತೊಮ್ಮೆ ಮೇಲಾಧಿಕಾರಿಗಳಿಗೆ ತಿಳಿಸಿ ರೈತರಿಗೆ ಅನುಕೂಲ ಮಾಡಿಕೊಡುತ್ತೇವೆ ಎಂದರು.
ಈ ಸಂದರ್ಭದಲ್ಲಿ ಬಸವರಾಜ ದೊಡ್ಡನಾಯ್ಕರ, ತಾಲೂಕು ರೈತ ಸಂಘದ ಅಧ್ಯಕ್ಷ ಗುರುಪಾದಪ್ಪ ಬಂಕದ, ನಿಂಗಪ್ಪ ಪೂಜಾರ, ಮಂಜುನಾಥ ಹಾದಿಮನಿ, ಹಾಲಪ್ಪ ತಡಾಳ, ಬಸಪ್ಪ ಕೊಡ್ಲಿವಾಡ, ನಾಗಪ್ಪ ಪೂಜಾರ, ಸದಸ್ಯ ಫಕೀರೇಶ ಪಶುಪತಿಹಾಳ, ಶಂಕ್ರಮ್ಮ ಸುತಾರ, ಮಾದೇವಕ್ಕ, ಮಂಜುನಾಥ್ ಇತರರಿದ್ದರು.





