ಧಾರವಾಡದಲ್ಲಿ ಜಮಾಅತೇ ಇಸ್ಲಾಮಿ ಹಿಂದ್ ಸಂಘಟನೆಯ ವತಿಯಿಂದ “ನ್ಯಾಯದ ಹರಿಕಾರ, ಪೈಗಂಬರ್ ಮುಹಮ್ಮದ್” ಕುರಿತು ಸೀರತ್ ಅಭಿಯಾನವನ್ನು ಸೆಪ್ಟೆಂಬರ್ 3ರಿಂದ 14ರವರೆಗೆ ರಾಜ್ಯಾದ್ಯಂತ ಆಯೋಜಿಸಿದ್ದಾರೆ.
ಈ ಕುರಿತು ಸಂಘಟಕರು ಮಾತನಾಡಿ, ಸಮಾಜದಲ್ಲಿ ಶಾಂತಿ ಸಮಾಧಾನ ನೆಲೆನಿಲ್ಲಬೇಕಾದರೆ; ನ್ಯಾಯ ಪಾಲನೆಯು ಅನಿವಾರ್ಯವಾಗಿದೆ. ನ್ಯಾಯ ಮರಿಚಿಕೆಯಾದರೆ ಅಸಮಾಧಾನ, ಅಕ್ರಮ, ಅರಾಜಕತೆ ವರ್ಧಿಸುತ್ತದೆ. ಪ್ರವಾದಿಗಳ ಈ ಶಿಕ್ಷಣವನ್ನು ಅವರ ಅನುಯಾಯಿಗಳು ತಮ್ಮ ಆಡಳಿತಾವಧಿಯಲ್ಲೂ ಅಳವಡಿಸಿದರು. ಆ ನಿಟ್ಟಿನಲ್ಲಿ ಕರ್ನಾಟಕದ ಜಮಾಅತೇ ಇಸ್ಲಾಮಿ ಹಿಂದ್ ಈ ಅಭಿಯಾನದಿಂದ ಪ್ರವಾದಿಯವರ ನ್ಯಾಯ, ಶಾಂತಿ ಮತ್ತು ಸಹಾನುಭೂತಿಯ ಸಂದೇಶವನ್ನು ದೇಶದ ಜನತೆಗೆ ತಲುಪಿಸಲು ಉತ್ಸಾಹರಾಗಿದ್ದಾರೆ ಎಂದು ಹೇಳಿದರು.
ಪ್ರವಾದಿ ಮುಹಮ್ಮದ್(ಸ) ರ ನ್ಯಾಯ ಮತ್ತು ಮಾನವೀಯತೆಯ ಸಂದೇಶಗಳನ್ನು ಜನತೆಗೆ ತಲುಪಿಸುವುದು ಹಾಗೂ ಅವರ ಬಗ್ಗೆ ಇರುವ ತಪ್ಪು ಕಲ್ಪನೆಗಳನ್ನು ಸರಿಪಡಿಸುವ ಉದ್ದೇಶವಾಗಿದೆ. ಅಭಿಯಾನದ ಸಂದರ್ಭದಲ್ಲಿ ಶಾಂತಿ ಪ್ರಕಾಶನ ಪ್ರಕಟಿಸಿರುವ ಎರಡು ಹೊಸ ಪುಸ್ತಕಗಳನ್ನು ರಾಜ್ಯಾದ್ಯಂತ ಬಿಡುಗಡೆ ಮಾಡಲಾಗುವುದು. ಜೊತೆಗೆ, ಅಭಿಯಾನದ ಭಾಗವಾಗಿ ಸಮಾಜ ಸೇವಾ ಚಟುವಟಿಕೆಗಳು, ಸಂವಾದ, ವಿಚಾರಗೋಷ್ಠಿಗಳು, ಸಾರ್ವಜನಿಕ ಸಭೆಗಳು, ಪ್ರಬಂಧ ಸ್ಪರ್ಧೆಗಳು ಮುಂತಾದ ಹಲವು ಕಾರ್ಯಕ್ರಮಗಳು ನಡೆಯಲಿವೆ.
ಈ ವೇಳೆ ವಕೀಲ ಮುಸ್ತಾಕ್ ಅಹ್ಮದ್ ಹಾವೇರಿಪೆಟ್, ಜೆಎಲ್ಐ ಅಧ್ಯಕ್ಷರು, ಬುಡನ್‌ಖಾನ್, ನೂರಹ್ಮದ್ ಖಾಝಿ ಸೇರಿದಂತೆ ಮಹಿಳಾ ವಿಭಾಗದ ವಸಿಮಾ ಗುಡಿಯಾಲ, ನುಸರತ್ ಸೋನೇಖಾನ್, ನಾಝಿಯಾ ಮುಲ್ಲಾ ಉಪಸ್ಥಿತರಿದ್ದರು.





