ಗಳಗನಾಥರು ಆಧುನಿಕ ಕನ್ನಡ ಸಾಹಿತ್ಯದ ಮೊದಲ ಕಾದಂಬರಿಕಾರರು. ತಮ್ಮ ಕಾದಂಬರಿಗಳ ಮೂಲಕ ನಾಡಿನಾದ್ಯಂತ ಸಾಹಿತ್ಯ ಪ್ರಸಾರ ಮಾಡಿದರು. ಕನ್ನಡದ ಬರವಣಿಗೆಯ ಮೂಲಕ ಭಾಷಾ ಜಾಗೃತಿ ಮೂಡಿಸಿದರು ಎಂದು ನಿವೃತ್ತ ಉಪನ್ಯಸಕ ಸಿ. ಆರ್. ಜೋಶಿ ಹೇಳಿದರು.
ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಕನ್ನಡ ಕಾದಂಬರಿ ಪಿತಾಮಹ ಗಳಗನಾಥರ ಹಾಗೂ ನಾ. ಶ್ರೀ. ರಾಜಪುರೋಹಿತ ಸ್ಮರಣಾರ್ಥ ಆಯೋಜಿಸಲ್ಪಟ್ಟ ದತ್ತಿ ಕಾರ್ಯಕ್ರಮದಲ್ಲಿ ಗಳಗನಾಥ ಹಾಗೂ ನಾ. ಶ್ರೀ. ರಾಜಪುರೋಹಿತ ಬದುಕು-ಬರಹ ವಿಷಯ ಕುರಿತು ಉಪನ್ಯಾಸ ನೀಡಿ, ಮಾತನಾಡುತ್ತಾ, ಮರಾಠಿ ಪ್ರಭಾವವಿದ್ದ ಆ ಕಾಲದಲ್ಲಿ ಕನ್ನಡಿಗರು ಮರಾಠಿ ಪತ್ರಿಕೆಯನ್ನು ಅನಿವಾರ‍್ಯವಾಗಿ ಓದಬೇಕಿತ್ತು. ಲೋಕಮಾನ್ಯ ಟಿಳಕ ಹಾಗೂ ಹರಿನಾರಾಯಣ ಆಪ್ಟೆಯವರ ಚಿಂತನೆಗಳಿಂದ ಪ್ರಭಾವಿತರಾದ ಗಳಗನಾಥರು ಮರಾಠಿಯಿಂದ ಆಪ್ಟೆಯವರ ಕಾದಂಬರಿ ಯಥಾವತ್ತಾಗೆ ಕನ್ನಡಕ್ಕೆ ಅನುವಾದ ಮಾಡಿ ಕನ್ನಡಿಗರಲ್ಲಿ ಓದುವ ಆಸಕ್ತಿ ಮೂಡಿಸಿದರು. ಕ.ವಿ.ವ ಸಂಘ ಕನ್ನಡ ಗ್ರಂಥಕರ್ತರಿಗೆ ಬಹುಮಾನ ನೀಡುವ ಪರಂಪರೆ ಪ್ರಾರಂಭಿಸಿದ್ದರಿಂದ ಪ್ರಭುದ್ಧ ಪದ್ಮನಯನ ಎಂಬ ತಮ್ಮ ಮೊದಲ ಕಾದಂಬರಿಯನ್ನು ಬರೆದು ೨೫ ರೂಪಾಯಿ ಬಹುಮಾನ ಪಡೆದರು.
ಗಳಗನಾಥರು ಒಟ್ಟು 24 ಕಾದಂಬರಿಗಳನ್ನು ಬರೆದು ಓದುಗರಲ್ಲಿ ಆಸಕ್ತಿ ಮೂಡಿಸಿದರು. ಶಿಕ್ಷಕರಾಗಿದ್ದ ಅವರು ‘ಸದ್ಭೋದ ಚಂದ್ರಿಕೆ’ ಪತ್ರಿಕೆಯನ್ನು ಪಾರಂಭಿಸಿದರು. ಆ ಕಾಲದಲ್ಲಿ ಆ ಪತ್ರಿಕೆಗೆ ೭ ಸಾವಿರ ಓದುಗರು ಚಂದಾದಾರರಾಗಿದ್ದರು. ಬಡತನದಲ್ಲಿ ಬೆಂದ ಅವರು ಆರ್ಥಿಕ ಸಾಲದ ಹೊರೆಯಿಂದ ಕಾದಂಬರಿಗಳನ್ನು ಬರೆಯಲಾರಂಭಿಸಿದರು. ಸಾಲದ ಹೊರೆ ಹೆಚ್ಚಾಗಿ ಈ ಸಾಲ ತೀರಿಸಲು ಸಂಚಾರಿ ಪುಸ್ತಕ ಮಾರಾಟಗಾರರಾಗಿ ಹಳ್ಳಿಯಿಂದ ಹಳ್ಳಿಗೆ, ಓಣಿಯಿಂದ ಓಣಿಗೆ ಸಂಚರಿಸಿ ಕಾದಂಬರಿ ಮಾರಾಟ ಮಾಡಿದರು. ಕೆಲವೊಮ್ಮೆ ಅವಮಾನವನ್ನೂ ಅನುಭವಿಸಿದರು.
ನಾ. ಶ್ರೀ ರಾಜಪುರೋಹಿತ ಮರಾಠಿ ಪ್ರಭಾವದ ನಡುವೆ ಕನ್ನಡ ಉಳಿಸಲು ಕನ್ನಡ ಸಾಹಿತ್ಯ ಇತಿಹಾಸ ಸಂಶೋಧನಾ ಕಾರ್ಯ ಪ್ರಾರಂಭಿಸಿದರು. ಅವರು ನಾಡು ನುಡಿಗೆ ಕೀರ್ತಿ ತಂದ ಒಬ್ಬ ಶ್ರೇಷ್ಠ ಸಂಶೋಧಕರು. ಶಿಕ್ಷಕ ವೃತ್ತಿ ಕಳೆದುಕೊಂಡ ಅವರು, ಆಲೂರ ವೆಂಕಟರಾಯರು ಪ್ರಾರಂಭಿಸಿದ ರಾಷ್ಟಿçÃಯ ಶಾಲೆಯಲ್ಲಿ ಕೆಲಕಾಲ ಶಿಕ್ಷಕರಾಗಿ ದುಡಿದರು. ಮುಂದೆ ಕರ್ನಾಟಕ ಇತಿಹಾಸ ಸಂಶೋಧನಾ ಮಂಡಳಿಯನ್ನು ಸ್ಥಾಪಿಸಿದರು. ಇಡೀ ಕರ್ನಾಟಕದಲ್ಲಿ ಸಂಚರಿಸಿ ಶಾಸನ, ವೀರಗಲ್ಲು, ಮಾಸ್ತಿಗಲ್ಲುಗಳ ವ್ಯಾಪಕ ಸಂಶೋಧನೆ ಮಾಡಿ ಇತಿಹಾಸ ಕಟ್ಟಿಕೊಟ್ಟರು. ವಿಜಯನಗರ ಪತನಕ್ಕೆ ಕಾರಣವಾದ ಯುದ್ದ ನಡೆದ ಸ್ಥಳ ತಾಳಿಕೋಟಿ ಅಲ್ಲ, ಅದು ರಕ್ಕಸತಂಗಡಗಿ ಎಂಬುದನ್ನು ಅವಶೇಷ ಹಾಗೂ ಕುರುಹುಗಳಿಂದ ವಸ್ತುನಿಷ್ಠವಾಗಿ ಸಂಶೋಧಿಸಿದರು ಎಂದರು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ವಿದ್ಯಾವರ್ಧಕ ಸಂಘದ ಗೌರವ ಉಪಾಧ್ಯಕ್ಷ ಶ್ರೀನಿವಾಸ ವಾಡಪ್ಪಿ ಮಾತನಾಡಿ, ಇಂದಿನ ವಿದ್ಯಾರ್ಥಿಗಳು ಈ ಇಬ್ಬರೂ ಪ್ರಾತಃಸ್ಮರಣಿಯರ ಬದುಕು-ಬರಹ ಓದಬೇಕು. ಗಳಗನಾಥರು ಹೊಸಗನ್ನಡ ಗದ್ಯದ ಆದ್ಯರು ಎಂದು ಹೇಳಿದರು.
ವೇದಿಕೆಯಲ್ಲಿ ಹಾವೇರಿಯ ಗಳಗನಾಥ ಹಾಗೂ ನಾ. ಶ್ರೀ. ರಾಜಪುರೋಹಿತ ಟ್ರಸ್ಟ್ದ ಸದಸ್ಯರಾದ ವೆಂಕಟೇಶ ಗಳಗನಾಥ ಹಾಗೂ ಹನಮಂತಗೌಡ ಗೊಲ್ಲರ ಉಪಸ್ಥಿತರಿದ್ದರು. ಕವಿವ ಸಂಘಕ್ಕೆ ಗಳಗನಾಥ ಹಾಗೂ ರಾಜಪುರೋಹಿತ ಅವರ ಭಾವಚಿತ್ರಗಳನ್ನು ಸಮರ್ಪಿಸಿದರು.
ಇದನ್ನೂ ಓದಿ ಧಾರವಾಡ | ವಿವೇಕಾನಂದರ ವಿಚಾರಗಳು ಸಮಾಜಕ್ಕೆ ದಾರಿದೀಪ: ಮಲ್ಲಯ್ಯಸ್ವಾಮಿ ತೋಟಗಂಟಿ
ವೀರಣ್ಣ ಒಡ್ಡೀನ ಸ್ವಾಗತಿಸಿದರು. ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವಾನಂದ ಭಾವಿಕಟ್ಟಿ ನಿರೂಪಿಸಿದರು. ಡಾ. ಧನವಂತ ಹಾಜವಗೋಳ ವಂದಿಸಿದರು. ಕಾರ್ಯಕ್ರಮದಲ್ಲಿ ಎಂ. ಎಂ. ಚಿಕ್ಕಮಠ, ಸುರೇಶ ಭಂಡಾರಿ, ಶ್ರೀಕಾಂತ ಬನಸೋಳೆ, ಶ್ರೀ ಹಡಪದ, ಎಂ. ಬಿ. ಹೆಗ್ಗೇರಿ ಹಾಗೂ ಗಳಗನಾಥರ ಮತ್ತು ನಾ. ಶ್ರೀ. ರಾಜಪುರೋಹಿತರ ಅಭಿಮಾನಿಗಳು ಉಪಸ್ಥಿತರಿದ್ದರು.





