ಧಾರವಾಡ ಜಿಲ್ಲೆ ಕಲಘಟಗಿ ತಾಲೂಕಿನ ಮಾಚಾಪುರದಲ್ಲಿ ರಸ್ತೆಗಳು ಹಾಗೂ ಮನೆಗಳ ಮೇಲೆ ಆಲಿಕಲ್ಲುಗಳು ರಾಶಿ ರಾಶಿಯಾಗಿ ಬಿದ್ದಿದ್ದು, ನೋಡುಗರಿಗೆ ಕಾಶ್ಮೀರದ ಹಿಮಪಾತದ ಅನುಭವ ನೀಡಿತು. ರಸ್ತೆಯ ತುಂಬಾ ಆಲಿಕಲ್ಲು ತುಂಬಿಕೊಂಡಿದ್ದರಿಂದ ವಾಹನ ಸಂಚಾರಕ್ಕೆ ಭಾರಿ ಅಡಚಣೆ ಉಂಟಾಯಿತು.
ರಾಜ್ಯದ ಹಲವು ಜಿಲ್ಲೆಗಳಲ್ಲಿ ಗುಡುಗು, ಸಿಡಿಲು, ಆಲಿಕಲಗಲು ಸಮೇತವಾಗಿ ಭಾರಿ ಮಳೆಯಾಗಿದ್ದು, ಆ ಹಿನ್ನೆಲೆಯಲ್ಲಿ ಕಲಘಟಗಿ ತಾಲೂಕಿನಾದ್ಯಂತ ಮಂಗಳವಾರ ಮಧ್ಯಾಹ್ನ ನಿರಂತರವಾಗಿ ಸುರಿದ ಭಾರಿ ಗಾಳಿ ಮಳೆ ಮತ್ತು ಆಲಿಕಲ್ಲು ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ.
ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಮಂಗಳವಾರದ ವಾರದ ಸಂತೆಗೆ ತಾಲೂಕಿನಾದ್ಯಂತ ನೂರಾರು ಜನ ಆಗಮಿಸಿದ್ದರು. ಹಬ್ಬದ ದಿನಸಿ ಹಾಗೂ ತರಕಾರಿ ಖರೀದಿಯ ಸಂಭ್ರಮದಲ್ಲಿದ್ದ ಗ್ರಾಹಕರು ಮತ್ತು ವ್ಯಾಪಾರಸ್ಥರಿಗೆ ಮಧ್ಯಾಹ್ನ 3:30ಕ್ಕೆ ಶುರುವಾದ ಮಳೆ ತಣ್ಣೀರು ಎರಚಿತು. ಸಂತೆ ಅರ್ಧಕ್ಕೆ ಮೊಟಕುಗೊಂಡಿದ್ದರಿಂದ ವ್ಯಾಪಾರಸ್ಥರು ಸಂಕಷ್ಟಕ್ಕೀಡಾದರು.
ಈ ಅಕಾಲಿಕ ಆಲಿಕಲ್ಲು ಮಳೆಯಿಂದಾಗಿ ಉತ್ತಮ ಇಳುವರಿಯ ನಿರೀಕ್ಷೆಯಲ್ಲಿದ್ದ ಮಾವು ಬೆಳೆಗಾರರಿಗೆ ನಿರಾಸೆ ಮೂಡಿಸಿದೆ. ತಾಲೂಕಿನಾದ್ಯಂತ ಸುರಿದ ಈ ಅಪರೂಪದ ಆಲಿಕಲ್ಲು ಮಳೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿವೆ. ವಾಟ್ಸಾಪ್ ಸ್ಟೇಟಸ್ ಹಾಗೂ ಫೇಸ್‌ಬುಕ್‌ನಲ್ಲಿ ಎಲ್ಲೆಡೆ ಬಿಳಿ ಆಲಿಕಲ್ಲುಗಳ ರಾಶಿಯ ದೃಶ್ಯಗಳೇ ರಾರಾಜಿಸುತ್ತಿದ್ದು, ಕಲಘಟಗಿ ಈಗ ಕಾಶ್ಮೀರ ಎಂದು ಹೇಳುತ್ತಿದ್ದಾರೆ.





