ನನ್ನನ್ನು ಒಳಗೊಂಡು ಇಂದು ಜಗತ್ತನ್ನೇ ಕಾಡುತ್ತಿರುವ ಎರಡು ಜ್ವಲಂತ ಸಮಸ್ಯೆಗಳೆಂದರೆ; ಹಿಂದುತ್ವ ರಾಜಕಾರಣ ಮತ್ತು ಸಾಂಸ್ಥಿಕ ಭ್ರಷ್ಟಾಚಾರಗಳು. ಬಹುತ್ವ ಭಾರತದಲ್ಲಿ ಧರ್ಮದ ಆಧಾರದ ಮೇಲೆ ಮನುಷ್ಯ ಮನುಷ್ಯನನ್ನು ದ್ವೇಷಿಸುವುದು ಸರಿ ಅಲ್ಲಾ. ಇಂದು ಜಾತಿ ಪದ್ಧತಿ ಮನೆಯಲ್ಲಿಯೂ ನಿರ್ಮಾಣವಾಗಿರುವುದು ವಿಷಾದನೀಯ ಎಂದು ಕರ್ನಾಟಕ ವಿದ್ಯಾವರ್ಧಕ ಸಂಘವು ರಾಜ್ಯೋತ್ಸವದ ತಿಂಗಳ ಪೂರ್ಣ ಕಾರ್ಯಕ್ರಮದಲ್ಲಿ ನ.18ರಂದು ಆಯೋಜಿಸಿದ್ದ ಧರೆಗೆ ದೊಡ್ಡವರು ಸನ್ಮಾನ ಸ್ವೀಕರಿಸಿದ ಬೆಂಗಳೂರಿನ ಸಾಹಿತಿ ಡಾ. ಮೂಡ್ನಾಕೂಡು ಚಿನ್ನಸ್ವಾಮಿ ಅಭಿಪ್ರಾಯಪಟ್ಟರು.
ದಲಿತರ ನೋವುಗಳು ಮೇಲ್ಜಾತಿಯವರಿಗೆ ಅರ್ಥವಾಗದು. ಇಂದಿಗೂ ದಿನಂಪ್ರತಿ ಪತ್ರಿಕೆಗಳಲ್ಲಿ ದಲಿತರ ಮೇಲಿನ ದೌರ್ಜನ್ಯದ ವರದಿಗಳು ಬರುತ್ತಲೇ ಇದೆ. ಇಂದಿಗೂ ಸಹ ಜಾತಿ ಪದ್ಧತಿ ಕಡಿಮೆಯಾಗಿಲ್ಲ. ತಂದೆ ಮಗಳನ್ನೇ ಕೊಲೆ ಮಾಡುವುದು, ಶಾಲೆಗಳಲ್ಲಿ ದಲಿತರಿಂದ ತಯಾರಿಸಿದ ಮಧ್ಯಾಹ್ನದ ಊಟವನ್ನು ಮಕ್ಕಳು ತಿರಸ್ಕರಿಸಿ ಮನೆಗೆ ಹೋಗುವುದು ಪದ್ಧತಿ ಕೆಲವೆಡೆ ಇದೆ. ಹೀಗಾದರೆ ನಾವು ನಾಗರೀಕರಾಗುವುದು ಯಾವಾಗ?. ಪ್ರಜಾಪ್ರಭುತ್ವ ಇಂದು ಸೋತಿದೆ. ಸಂವಿಧಾನದ ಮೂಲ ಆಶಯಗಳಾದ ಸಮಾನತೆ, ಸಹೋದರತೆಗೆ ಪ್ರಸ್ತುತ ದಿನಮಾನದಲ್ಲಿ ಬೆಲೆ ಇಲ್ಲದಾಗಿದೆ.
ಜಾತಿ ಪದ್ಧತಿ ಸಂಪೂರ್ಣ ನಿರ್ನಾಮವಾಗದ ವಿನಃ ಪ್ರಜಾಪ್ರಭುತ್ವ ವ್ಯವಸ್ಥೆ ಸದೃಢವಾಗಲು ಸಾಧ್ಯವಿಲ್ಲ, ಭ್ರಷ್ಟಾಚಾರ ಮೊದಲು ವ್ಯಕ್ತಿಗೆ ಸೀಮಿತವಾಗಿತ್ತು. ಆದರೆ ಇಂದು ಸಾಂಸ್ಥಿಕ ವ್ಯವಸ್ಥೆಗೂ ಹರಡಿಕೊಂಡಿರುವುದು ವಿಷಾದನೀಯ. ಬ್ರಿಟಿಷ ಆಡಳಿತದಲ್ಲಿ ಏನೆಲ್ಲಾ ಸುಧಾರಣೆ ಆದರೂ ಅವರನ್ನು ದೂಷಿಸುವುದು ಎಷ್ಟರ ಮಟ್ಟಿಗೆ ಸರಿ?. ಭಾರತದಲ್ಲಿ ಶಿಕ್ಷಣ ವ್ಯವಸ್ಥೆಯಲ್ಲಿ ಪರಿಣಾಮಕಾರಿ ಸುಧಾರಣೆಯಾಗದ ಹೊರತು ದೇಶದ ಸಮಸ್ಯೆಗಳಿಗೆ ಪರಿಹಾರವಿಲ್ಲ ಎಂದು ಹೇಳಿದರು.
ಪ್ರೊ. ಧನವಂತ ಹಾಜವಗೋಳ ಮಾತನಾಡುತ್ತಾ, ಧರೆಗೆ ದೊಡ್ಡವರಾದ ಡಾ. ಮೂಡ್ನಾಕೂಡು ಚಿನ್ನಸ್ವಾಮಿ ಅವರ ಬದುಕು-ಬರಹ ಪರಿಚಯಿಸಿ, ಡಾ. ಚಿನ್ನಸ್ವಾಮಿ ಮಾನವೀಯತೆ ನೆಲೆಗಟ್ಟಿನಲ್ಲಿ ವ್ಯಕ್ತಿತ್ವ ರೂಪಿಸಿಕೊಂಡವರು. ಬುದ್ಧ, ಬಸವ ಹಾಗೂ ಅಂಬೇಡ್ಕರ ಅವರ ಚಿಂತನೆಗಳಿಂದ ಪ್ರಭಾವಿತರಾದ ಅವರು ಭಾರತದಲ್ಲಿ ಬುದ್ಧನ ಬಗ್ಗೆ ಅಧಿಕೃತವಾಗಿ ಮಾತನಾಡಬಲ್ಲ ಕೆಲವೇ ಜನರಲ್ಲಿ ಇವರೂ ಒಬ್ಬರು. ದಲಿತರ ನೋವುಗಳನ್ನು ಬಲ್ಲ ಅವರ ಅನೇಕ ಕವಿತೆಗಳು ಜಗತ್ತಿನ ಸುಮಾರು ಇಪ್ಪತ್ತು ದೇಶಗಳಲ್ಲಿ ಅನುವಾದಗೊಂಡಿವೆ. ಚಲನಚಿತ್ರ ವೀಕ್ಷಣೆ ಹಾಗೂ ರಂಗಕಲೆ ಅವರ ಹವ್ಯಾಸಗಳಾಗಿವೆ ಎಂದರು.
ಮರಾಠಾ ವಿದ್ಯಾಪ್ರಸಾರಕ ಮಂಡಳದ ವಿದ್ಯಾಸಂಸ್ಥೆಗಳ ಹಾಗೂ ಕೆ.ಯು.ಡಿ. ಎನ್.ಎಸ್.ಎಸ್.ಘಟಕದ ವಿದ್ಯಾರ್ಥಿಗಳೊಂದಿಗೆ ಸಂವಾದ ಏರ್ಪಡಿಸಲಾಗಿತ್ತು. ಹರ್ಲಾಪೂರದ ಸಿ.ವಾಯ್.ಸಿ.ಡಿ. ಕಲಾವಿದರು ಕನ್ನಡ ಗೀತೆಗಳನ್ನು ಪ್ರಸ್ತುತಪಡಿಸಿದರು.
ಇದನ್ನೂ ಓದಿ ಧಾರವಾಡ | ತಮಗೆ ಸಿಕ್ಕ ಪ್ರಶಸ್ತಿ ಮೂಲದ ಹಣವನ್ನು ಪ್ರಕೃತಿ ವಿಕೋಪ ಪರಿಹಾರ ನಿಧಿಗೆ ನೀಡಿದ ವೀರಪ್ಪ ಅರಕೇರಿ
ವಿಶ್ವೇಶ್ವರಿ ಹಿರೇಮಠ ಸ್ವಾಗತಿಸಿದರು. ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಜಿನದತ್ತ ಹಡಗಲಿ ನಿರೂಪಿಸಿದರು. ಕೊನೆಯಲ್ಲಿ ವೀರಣ್ಣ ಒಡ್ಡೀನ ವಂದಿಸಿದರು. ಕಾರ್ಯಕ್ರಮದಲ್ಲಿ ಡಾ. ಸಂಜೀವ ಕುಲಕರ್ಣಿ, ಶಂಕರ ಕುಂಬಿ, ಶಿವಾನಂದ ಭಾವಿಕಟ್ಟಿ, ಗುರು ಹಿರೇಮಠ, ಪ್ರೊ. ಸುನೀತಾ ಮಾನೆ, ಶಿವಾಜಿ ಸೂರ್ಯವಂಶಿ, ಡಾ. ಶಾಮಸುಂದರ ಬಿದರಕುಂದಿ, ಡಾ. ವೀಣಾ ಬಿರಾದಾರ, ಕೆ.ಜಿ. ದೇವರಮನಿ ಸೇರಿದಂತೆ ಮುಂತಾದವರಿದ್ದರು.





