ಹುಬ್ಬಳ್ಳಿ ತಾಲೂಕಿನ ಇನಾಂವೀರಾಪುರ ಗ್ರಾಮದಲ್ಲಿ ಮಾನ್ಯ ಎಂಬ ಯುವತಿ ಅನ್ಯ ಜಾತಿಯ ಹುಡುಗನ ಜೊತೆ ಮದುವೆಯಾಗಿದ್ದಾಳೆ ಎಂಬ ಕಾರಣಕ್ಕೆ ಪಾಲಕರು ಗರ್ಭಿಣಿ ಮಗಳ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ, ಕೊಲೆ ಮಾಡಿದ್ದೂ, ಯುವಕನ ಕುಟುಂಬದವರ ಮೇಲೂ ಹಲ್ಲೇ ನಡೆಸಿರುವ ಘಟನೆಯನ್ನು ಎಐಎಮ್ಎಸ್ಎಸ್ ಧಾರವಾಡ ಜಿಲ್ಲಾ ಸಮಿತಿಯು ತೀವ್ರವಾಗಿ ಖಂಡಿಸಿ, ತಪ್ಪಿತಸ್ಥರಿಗೆ ನಿದರ್ಶನೀಯ ಶಿಕ್ಷೆ ನೀಡಬೇಕೆಂದು ಒತ್ತಾಯಿಸಿದೆ.
ಇಂತಹ ಅಮಾನವೀಯ ಘಟನೆಗಳು ನಡೆಯುತ್ತಿರುವುದು ಇದೇ ಮೊದಲಲ್ಲ. ಸಮಾಜದಲ್ಲಿ ಹಳೆಯ ಊಳಿಗ ಮಾನ್ಯ ಮೌಲ್ಯಗಳು ಇಂದಿಗೂ ಜೀವಂತವಾಗಿವೆ. ಸಮಾಜ ಪ್ರಜಾತಾಂತ್ರಿಕರಣಗೊಂಡಿಲ್ಲದ ಕಾರಣ ಇಂತಹ ಘಟನೆಗಳು ನಡೆಯುತ್ತಿದೆ. ಪರಿಣಾಮವಾಗಿ ಮುಗ್ಧ ಜೀವಿಗಳು ಬಲಿಯಾಗುತ್ತಿದ್ದಾರೆ. ಇಂತಹ ಘಟನೆಗಳು ಮರುಕಳಿಸುವುದನ್ನು ತಪ್ಪಿಸಬೇಕಾದರೆ, ಪ್ರಜಾತಾಂತ್ರಿಕ ವ್ಯವಸ್ಥೆ ಇರುವ ಪ್ರಸಕ್ತ ಸಮಾಜದಲ್ಲಿ ಇಂದಿಗೂ ಪಳೆಯುಳಿಕೆಗಳಾಗಿ ಆಳವಾಗಿ ಬೇರೂರಿರುವ ಊಳಿಗಮಾನ್ಯ ಕಾಲದ ಹಳೆ ಮೌಲ್ಯಗಳು ಮತ್ತು ಗೊಡ್ಡು ಸಂಪ್ರದಾಯಗಳಿಗೆ ಪರ್ಯಾಯವಾಗಿರುವ ಪ್ರಜಾತಾಂತ್ರಿಕ ನೈಜ ಮೌಲ್ಯಗಳನ್ನು ಸ್ಥಾಪಿಸುವ ಅತೀವ ಅವಶ್ಯಕತೆ ಇದೆ. ಜನರ ಮನಸ್ಥಿತಿಯು ಬದಲಾಗಬೇಕಿದೆ.
ಈ ನಿಟ್ಟಿನಲ್ಲಿ ಸರ್ಕಾರಗಳು ಕೂಡಲೇ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಎಐಎಮ್ಎಸ್ಎಸ್ ಜಿಲ್ಲಾ ಸಮಿತಿಯು ಅಗ್ರಹಿಸಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.





