ಹುಬ್ಬಳ್ಳಿಯ ಇನಾಂವೀರಾಪುರದಲ್ಲಿ ನಡೆದ ಮರ್ಯಾದೆಗೇಡು ಹತ್ಯೆ ಪ್ರಕರಣವು ರಾಜ್ಯದಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಅಂತರ್ಜಾತಿ ವಿವಾಹವಾಗಿದ್ದ ಮಹಿಳೆಯನ್ನು ನಿರ್ದಯವಾಗಿ ಹತ್ಯೆ ಮಾಡಿರುವುದು ಮಾನವೀಯತೆಗೂ, ಸಂವಿಧಾನಾತ್ಮಕ ಮೌಲ್ಯಗಳಿಗೂ ವಿರುದ್ಧವಾದ ಕೃತ್ಯವಾಗಿದೆ ಎಂದು ವಿವಿಧ ಜನಪರ ಸಂಘಟನೆಗಳ ವತಿಯಿಂದ ಜಿಲ್ಲಾಧಿಕಾರಿ ಕಚೇರಿಯ ಮುಂದೆ ಪ್ರತಿಭಟಿಸಿದರು.
ಈ ವೇಳೆ ಪ್ರತಿಭಟನಾಕಾರರು ಮಾತನಾಡಿ, ರೀತಿಯ ಘಟನೆಗಳು ಮರುಕಳಿಸದಂತೆ ಸರ್ಕಾರ ಕಠಿಣ ನಿಗಾ ವಹಿಸಬೇಕು. ಅಂತರ್ಜಾತಿ ವಿವಾಹವನ್ನು ಸಂವಿಧಾನವು ಮಾನ್ಯತೆ ನೀಡಿದ್ದು, ಅದನ್ನು ಪ್ರೋತ್ಸಾಹಿಸುವ ಬದಲು ಇಂತಹ ಕ್ರೌರ್ಯ ನಡೆಯುತ್ತಿರುವುದು ಅತ್ಯಂತ ವಿಷಾದಕರ ಸಂಗತಿಯಾಗಿದೆ. ಮೃತ ಮಹಿಳೆಗೆ ನ್ಯಾಯ ಒದಗಿಸುವ ಜೊತೆಗೆ, ಅಂತರ್ಜಾತಿ ವಿವಾಹಿತ ದಂಪತಿಗಳಿಗೆ ಸಮರ್ಪಕ ಭದ್ರತೆ ಒದಗಿಸಬೇಕು. ಪ್ರಕರಣದ ತನಿಖೆಯನ್ನು ತ್ವರಿತಗೊಳಿಸಿ, ತಪ್ಪಿತಸ್ಥರಿಗೆ ಗರಿಷ್ಠ ಶಿಕ್ಷೆ ವಿಧಿಸಬೇಕು. ಜೊತೆಗೆ ಸಮಾಜದಲ್ಲಿ ಜಾತಿ ಆಧಾರಿತ ದ್ವೇಷ ನಿರ್ಮೂಲನೆಗಾಗಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕೆಂದು ಮನವಿ ಮಾಡಿದರು.
ಇದನ್ನೂ ಓದಿ ಬೆಂಬಿಡದೆ ಕಾಡುತ್ತಿರುವ ʼಜಾತಿʼ ಪಿಡುಗು; ʼಮರ್ಯಾದಾ ಹತ್ಯೆʼಗಳಿಗೆ ಕೊನೆ ಎಂದು?
ಈ ವೇಳೆ ಮಹಿಳಾ ಪರ ಹಾಗೂ ವಿವಿಧ ದಲಿತ-ಜನಪರ ಸಂಘಟನೆಗಳ ಮುಖಂಡರು ಹಾಗೂ ಪದಾಧಿಕಾರಿಗಳು ಭಾಗಿಯಾಗಿದ್ದರು.





