ವಿದ್ಯಾರ್ಥಿಗಳಲ್ಲಿ ಸಂವಹನ ಕಲೆ ಇರದಿದ್ದರೆ ಪರಿಪೂರ್ಣತೆ ಬರುವುದಿಲ್ಲ ಮತ್ತು ಯಾವುದೆ ಉದ್ಯೋಗ ಹಾಗೂ ಪದವಿ ಪ್ರಾಪ್ತವಾಗುದಿಲ್ಲ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳು ಸ್ಪರ್ಧಾ ಮನೋಭಾವನೆಯನ್ನು ಬೆಳಸಿಕೊಳ್ಳಬೇಕು. ನಿರ್ಧಿಷ್ಟ ಗುರಿಯೊಂದಿಗೆ ಜೀವನದಲ್ಲಿ ಸಫಲತೆ ಸಾಧಿಸಬಹುದು ಎಂದು ಖ್ಯಾತ ಮೋಡಿಲಿಪಿ ತಜ್ಞ ಪ್ರೊ. ಎಂ. ವಾಯ್. ಸಾವಂತ ಅಭಿಪ್ರಾಯಪಟ್ಟರು.
ಕ.ವಿ.ವ ಸಂಘದಲ್ಲಿ ಆಯೋಜಿಸಿದ್ದ “ಧರೆಗೆ ದೊಡ್ಡವರು” ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಮಾತನಾಡುತ್ತಾ, ವಿದ್ಯಾರ್ಥಿಗಳಿಗೆ ಜೀವನದಲ್ಲಿ ಯಶಸ್ಸು ಸುಮ್ಮನೇ ಸಿಗುವುದಿಲ್ಲ. ಅದಕ್ಕೆ ಕಠಿಣ ಪರಿಶ್ರಮ ಬದ್ಧತೆ, ಸಮಯ ಪ್ರಜ್ಞೆ ಹಾಗೂ ನಿರಂತರತೆ ಬಹಳ ಮುಖ್ಯ. ವಿದ್ಯಾರ್ಥಿಗಳಿಗೆ ಆಕಾಶದೆತ್ತರದ ಗುರಿ ಇರಲಿ. ಜೀವನದಲ್ಲಿ ವಿಫಲರಾದರೆ ಧೃತಿಗೆಡಬಾರದು. ತಾಳ್ಮೆ ಅಗತ್ಯ. ವಿಫಲತೆ ಕೊನೆಗೊಂದು ದಿನ ನಿಮ್ಮನ್ನು ಸಫಲರನ್ನಾಗಿ ಮಾಡುತ್ತದೆ. ಆತ್ಮಬಲ, ಛಲ ಗಳಿದ್ದರೆ ಸಾಕು ನೀವು ಜಗತ್ತನ್ನೆ ಜಯಿಸಬಹುದು. ವಿದ್ಯಾರ್ಥಿಗಳಲ್ಲಿ ಹಿಮ ಬಂಡೆಯಂತಹ ಶಕ್ತಿ ಸಾಮರ್ಥ್ಯವಿದೆ. ನಿಮ್ಮ ಶಕ್ತಿ ಸಾಮರ್ಥ್ಯದ ಬಗ್ಗೆ ಮೊದಲು ನಿಮಗೆ ನಂಬಿಕೆ ಇರಬೇಕಷ್ಟೆ.
ನಿರ್ಧಿಷ್ಟ ಗುರಿ ಇದ್ದದ್ದರಿಂದ ಅಬ್ರಾಹಂ ಲಿಂಕನ್ ಜೀವನದಲ್ಲಿ ಅನೇಕ ಬಾರಿ ವಿಫಲರಾಗಿ ಕೊನೆಗೊಂದು ದಿವಸ ಅಮೇರಿಕಾದ ರಾಷ್ಟಾಧ್ಯಕ್ಷರಾಗಲು ಕಾರಣರಾದರು. ವಿದ್ಯಾರ್ಥಿಗಳು ‘ಸ್ಮಾರ್ಟ’ ಆಗಿ ಕಾರ್ಯ ನಿರ್ವಹಿಸಬೇಕು. ಜ್ಞಾನ, ಸಾಮರ್ಥ್ಯ ಹಾಗೂ ಕೌಶಲ್ಯಗಳು ನಿಮ್ಮನ್ನು ಎತ್ತರಕ್ಕೆ ಬೆಳಸುತ್ತಿವೆ. ಒಳ್ಳೆಯ ನಡಾವಳಿಕೆ, ಕೃತಜ್ಞತಾಭಾವ ಇದ್ದರೆ ಎಂತಹ ಮಹಾತ್ಸಾಧನೆಯನ್ನಾದರೂ ಮಾಡಬಹುದು. ಪ್ರೇರಣಾತ್ಮಕ ಪುಸ್ತಕಗಳ ಅಧ್ಯಯನದ ಮೂಲಕ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು. ಜೀವನದಲ್ಲಿ ನನಗೆ ಯಾವುದೂ ಅಸಾಧ್ಯವಿಲ್ಲ. ಎಲ್ಲವೂ ಸಾಧ್ಯ ಎಂಬ ದೃಢ ವಿಶ್ವಾಸ ಅಗತ್ಯ. ಪ್ರಯತ್ನವಿಲ್ಲದೇ ಎಂದೂ ಫಲ ಸಿಗದು ಎಂಬುದನ್ನು ತಿಳಿಯಬೇಕೆಂದು ಹೇಳಿದರು.
ಸಂಪನ್ಮೂಲ ವ್ಯಕ್ತಿಗಳಾದ ಡಾ. ಬಾಳಪ್ಪ ಚಿನಗುಡಿ ಮಾತನಾಡಿ, ಡಾ. ಎಂ.ವಾಯ್. ಸಾವಂತ ಇತಿಹಾಸದ ಓರ್ವ ಪ್ರಾಧ್ಯಾಪಕರಾಗಿ, ವಿಭಾಗದ ಮುಖ್ಯಸ್ಥರಾಗಿ ಕಿಟೆಲ್ ಕಾಲೇಜಿನಲ್ಲಿ 36 ವರ್ಷ ಸೇವೆ ಸಲ್ಲಿಸಿದವರು. ಅವರು ಒಬ್ಬ ಶ್ರೇಷ್ಠ ಮೋಡಿ ಲಿಪಿ ತಜ್ಞರು. ಬಹುಭಾಷಾ ಪಂಡಿತರು. ಪುಣೆಗೆ ಹೋಗಿ ಮೋಡಿ ಲಿಪಿಯನ್ನು ಅಧ್ಯಯನ ಮಾಡಿ ಬಂದವರು. ಮೋಡಿ ಲಿಪಿ ಇದು ಭಾಷೆಯಲ್ಲ. ಇದನ್ನು ವಕೃಲಿಪಿ ಎಂತಲೂ ಕರೆಯುತ್ತಾರೆ. ಪೇಶ್ವೆಗಳ ಆಡಳಿತಕ್ಕೊಳಪಟ್ಟ ಸಂಸ್ಥಾನಗಳಲ್ಲಿ ಗ್ರಾಮ ಹಾಗೂ ಕಂದಾಯ ವಿಭಾಗದ ಎಲ್ಲಾ ದಾಖಲೆ ಅಂದು ಮೋಡಿ ಲಿಪಿಯಲ್ಲಿಯೇ ಇದ್ದವು. ಇದು ಮರಾಠಿ, ಪರ್ಶಿಯನ್ ಹಾಗೂ ಅರಬ್ಬಿ ಲಿಪಿ ಒಳಗೊಂಡ ಲಿಪಿ. 13ನೇ ಶತಮಾನದಿಂದ 20ನೇ ಶತಮಾನದೊಳಗೆ ಈ ಲಿಪಿ ಬಳಕೆಯಲ್ಲಿತ್ತು. ರಹಸ್ಯ ಮಾಹಿತಿ ಕೆಲ ಘಟನೆಗಳನ್ನೂ ಈ ಲಿಪಿಯಲ್ಲಿ ದಾಖಲಿಸಲಾಗುತ್ತಿತ್ತು ಎಂದು ಹೇಳಿದರು.
ಇದನ್ನೂ ಓದಿ ಧಾರವಾಡ | ಗ್ರಾಮೀಣ ಕಲಾವಿದರ ಪ್ರೋತ್ಸಾಹಿಸುವ ಸರ್ಕಾರದ ಯೋಜನೆ ಔಚಿತ್ಯಪೂರ್ಣ: ಚಂದ್ರಕಾಂತ ಬೆಲ್ಲದ
ವೇದಿಕೆಯ ಮೇಲೆ ಕ.ವಿ.ವ. ಸಂಘದ ಅಧ್ಯಕ್ಷರಾದ ಚಂದ್ರಕಾಂತ ಬೆಲ್ಲದ, ಡಾ. ಶರಣಪ್ಪ ಆಡಕಾರ, ದಾಕ್ಷಾಯಿಣಿ ಓಲೇಕಾರ, ವೀರಣ್ಣ ಒಡ್ಡೀನ, ಡಾ. ಜಿನದತ್ತ ಹಡಗಲಿ, ಡಾ. ಧನವಂತ ಹಾಜವಗೋಳ, ಶಿವಾನಂದ ಭಾವಿಕಟ್ಟಿ ಇದ್ದರು. ಶಂಕರ ಕುಂಬಿ ಸ್ವಾಗತಿಸಿದರು. ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಿಟೆಲ್ ಕಾಲೇಜಿನ ಸುಮಾರು 300 ವಿದ್ಯಾರ್ಥಿಗಳೊಂದಿಗೆ ಸಂವಾದ ಜರುಗಿತು.





