ಭಾರತವು ಹಲವು ಧರ್ಮ, ಮತ, ಪಂಥ ಹಾಗೂ ಜಾತಿ ವ್ಯವಸ್ಥೆಯಿಂದ ಕೂಡಿದ್ದರೂ, ‘ವೈವಿಧ್ಯತೆಯಲ್ಲಿ ಏಕತೆ’ ಕಾಣುವ ವಿಶ್ವದ ವಿಶಿಷ್ಟ ದೇಶವಾಗಿದೆ. ಎನ್.ಎಸ್.ಎಸ್. ಸೇವಾ ಚಟುವಟಿಕೆಗಳು ವಿದ್ಯಾರ್ಥಿಗಳಲ್ಲಿ ನಾಯಕತ್ವ, ಶಿಸ್ತಿನ ಮನೋಭಾವ ಹಾಗೂ ಸಾಮಾಜಿಕ ಜವಾಬ್ದಾರಿ ಬೆಳೆಸುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಐಕ್ಯೂಎಸ್‌ಸಿ ಸಂಯೋಜಕ ಡಾ. ಎನ್.ಬಿ. ನಾಲತವಾಡ, ಸರ್ದಾರ್ 150ರ ಅಂಗವಾಗಿ, ರಾಷ್ಟ್ರೀಯ ಏಕೀಕರಣವನ್ನು ಉತ್ತೇಜಿಸುವ ಸಲುವಾಗಿ ಅಂಜುಮನ್ ಕಾಲೇಜಿನಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಈ ವೇಳೆ ಅವರು ಎನ್.ಎಸ್.ಎಸ್. ಗೀತೆಯ ರಚನಾಕಾರರು ಹಾಗೂ ಕಾಲೇಜಿನ ಮೊದಲ ಪ್ರಾಂಶುಪಾಲರಾದ ಡಾ. ಎಂ.ಬಿ. ದಿಲ್ಲಶಾದ್ ಅವರನ್ನು ಸ್ಮರಿಸಿ, ಅವರ ಪ್ರಸಿದ್ಧ ಗೀತೆಯಾದ “ನಾವೆಲ್ಲರೂ ಒಂದಾಗಿ ಬಾಳೋಣ ಬನ್ನಿ” ಹಾಡನ್ನು ಹಾಡುವುದರ ಮೂಲಕ ವಿದ್ಯಾರ್ಥಿಗಳಲ್ಲಿ ರಾಷ್ಟ್ರೀಯ ಏಕತೆಯ ಭಾವನೆ ಮೂಡಿಸುವ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಇತಿಹಾಸ ವಿಭಾಗದ ಮುಖ್ಯಸ್ಥೆ ಡಾ. ತಾಜುನಿಸ್ಸಾ ಸೈಯದ್ ಮಾತನಾಡಿ, ರಾಷ್ಟ್ರೀಯ ಏಕತೆಯನ್ನು ಉಳಿಸಿ, ಬೆಳೆಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದ್ದು, ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಪಾತ್ರ ಅತ್ಯಂತ ಪ್ರಮುಖವಾಗಿದೆ ಎಂದರು. ಎನ್.ಎಸ್.ಎಸ್ ಘಟಕ 2 ಸಂಯೋಜನಾ ಅಧಿಕಾರಿ ಪ್ರೊ. ನಾಗರಾಜ ಕನಕನಿ ಮಾತನಾಡಿ, ಎನ್.ಎಸ್.ಎಸ್ ಕೇವಲ ಸ್ವಚ್ಛತಾ ಕಾರ್ಯವಲ್ಲದೆ, ವಿದ್ಯಾರ್ಥಿಗಳ ಉನ್ನತ ವ್ಯಕ್ತಿತ್ವ ನಿರ್ಮಾಣದ ವೇದಿಕೆ ಎಂದರು.
ಇದನ್ನೂ ಓದಿ ಧಾರವಾಡ | ಕ.ವಿ.ವ ಸಂಘವು ಕನ್ನಡದ ಕಂಪನ್ನು ಗಡಿಯಾಚೆಗೂ ವಿಸ್ತರಿಸಿದೆ: ನ್ಯಾ. ಪ್ರಕಾಶ ಭಾವಿಕಟ್ಟಿ
ಇತಿಹಾಸ ವಿಭಾಗದ ಸಹಪ್ರಾಧ್ಯಾಪಕ ಡಾ. ಎಚ್. ಮೇಟಿ ನಿರೂಪಿಸಿದರು. ಅಂತಿಮವಾಗಿ ಪ್ರೊ. ಎನ್. ಕನಕನಿ ವಂದಿಸಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ರಾಷ್ಟ್ರೀಯ ಭಾವೈಕ್ಯತೆ ಮೇಲೆ ಕಿರು ನಾಟಕವನ್ನು ವ್ಯಕ್ತಪಡಿಸಿದರು. ಸುರೇಶ ಬಿಸರೆಕೋಟಿ, ಶೃರತಿ ಯಾವಗಲಮಠ್, ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.





