ಕರ್ನಾಟಕ ಕಾಲೇಜಿನ ಪ್ರವೇಶಾತಿಯಲ್ಲಿ ವಿದ್ಯಾರ್ಥಿಗಳಿಗೆ ಅನ್ಯಾಯ ಎಸಗುತ್ತಿದ್ದು, ಪ್ರವೇಶ ಶುಲ್ಕದ ಹೆಸರಿನಲ್ಲಿ ವಿದ್ಯಾರ್ಥಿಗಳಿಂದ ಹೆಚ್ಚಿನ ಹಣ ವಸೂಲಿ ಮಾಡಲಾಗುತ್ತಿದೆ ಎಂದು ಕಲ್ಯಾಣ ಕರ್ನಾಟಕ ವಿದ್ಯಾರ್ಥಿಗಳ ಸಂಘದ ರಾಜ್ಯಾಧ್ಯಕ್ಷ ಮುತ್ತಪ್ಪ ಎಸ್ ಆಕ್ರೋಶ ವ್ಯಕ್ತಪಡಿಸಿದರು.
ಧಾರವಾಡದ ಮಹಾವಿದ್ಯಾಲಯದ ಆವರಣದಲ್ಲಿ ಕಲ್ಯಾಣ ಕರ್ನಾಟಕ ವಿದ್ಯಾರ್ಥಿಗಳ ಸಂಘದಿಂದ ಪ್ರತಿಭಟನೆ ಕೈಗೊಂಡಿದ್ದರು. ಬಳಿಕ ಕಾಲೇಜಿನ ಪ್ರಾಂಶುಪಾಲರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದರು.
“ಕರ್ನಾಟಕ ಮಹಾವಿದ್ಯಾಲಯ ಹೆಚ್ಚುವರಿ ಶುಲ್ಕದ ಹೆಸರಿನಲ್ಲಿ ಹಗಲು ದರೋಡೆ ಮಾಡುತ್ತಿದ್ದು, ಎಸ್‌ಸಿ-ಎಸ್‌ಟಿ ಹಾಗೂ ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳಿಗೆ ಕೋಟಾದಡಿಯಲ್ಲಿ ತುಂಬಾ ಅವ್ಯವಹಾರವಾಗಿದೆ” ಎಂದು ಗಂಭೀರವಾಗಿ ಆರೋಪಿಸಿದರು.
“ಬಡವರ ಮಕ್ಕಳ ವಸೂಲಿ ಮಾಡುವ ಮೂಲಕ ಕೆಸಿಡಿ ಹಗಲು ದರೋಡೆ ಮಾಡುತ್ತಿದೆ. ಸಿಬ್ಬಂದಿಯೂ ಕೂಡಾ ವಿದ್ಯಾರ್ಥಿಗಳಿಗೆ ಸರಿಯಾದ ಸ್ಪಂದನೆ ನೀಡುತ್ತಿಲ್ಲ. ನಾವು ಬಂದರೂ ನಿಖರವಾದ ಪ್ರವೇಶಾತಿಗಳ ಮಾಹಿತಿ ನೀಡದೆ ಇಲ್ಲಿನ ಆಡಳಿತ ಮಂಡಳಿಯು ಕಣ್ಣಾಮುಚ್ಚಾಲೆ ಆಟ ಆಡುತ್ತಿದೆ. ಈ ಸಮಸ್ಯೆ ಬಗೆಹರಿದು ರೋಸ್ಟರ್ ಪದ್ಧತಿಯ ಅನುಸರಿಸಿ ಎಸ್‌ಸಿ-ಎಸ್‌ಟಿ ಹಾಗೂ ಕಲ್ಯಾಣ ಕರ್ನಾಟಕದ ವಿದ್ಯಾರ್ಥಿಗಳಿಗೆ ನ್ಯಾಯ ಕೊಡದಿದ್ದರೆ ತೀವ್ರವಾಗಿ ಬಹುಸಂಖ್ಯಾತ ವಿದ್ಯಾರ್ಥಿಗಳೊಂದಿಗೆ, ನಮ್ಮ ಸಂಘಟನೆಯಿಂದ ಕಾಲೇಜಿನ ಪ್ರಾಂಶುಪಾಲರ ಕಚೇರಿಯ ವಿರುದ್ಧ ದೊಡ್ಡ ಹೋರಾಟ ಹಮ್ಮಿಕೊಳ್ಳಲಾಗುವುದು” ಎಂದು ರಾಜ್ಯಾಧ್ಯಾಕ್ಷ ಮುತ್ತಪ್ಪ ಎಸ್ ಎಚ್ಚರಿಕೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಗದಗ | ನೂತನ ಡಿಸಿಯಾಗಿ ಗೋವಿಂದ ರೆಡ್ಡಿ ನೇಮಕ; ಜಿಲ್ಲೆಯ ಸಮಸ್ಯೆಗಳನ್ನು ಬಗೆಹರಿಸುವರೇ?
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಗಂಗಾಧರ್, ವಿಕ್ರಮ್, ಮಂಜು, ಮುತ್ತುರಾಜ್, ತರುಣ್ ಸೇರಿದಂತೆ ಬಹುಸಂಖ್ಯಾತ ವಿದ್ಯಾರ್ಥಿಗಳು ಇದ್ದರು.





