ಜಿಲ್ಲೆಯ ಅಣ್ಣಿಗೇರಿ ತಾಲೂಕಿನ ಬಸಾಪುರ ಗ್ರಾಮದಲ್ಲಿ ಆಶ್ರಯ ಯೋಜನೆ ಅಡಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಹಾಗೂ ನಿರಾಶ್ರಿತ ಬಡ ಹಿಂದುಳಿದ ಜನಾಂಗದವರಿಗೆ ಅನ್ಯಾಯ ಮತ್ತು ನಿವೇಶನ ಹಂಚಿಕೆಯಲ್ಲಿ ಭಾರಿ ಅವ್ಯವಹಾರ ನಡೆದಿರುವುದನ್ನು ಖಂಡಿಸಿ, ಈ ಕುರಿತು ಸೂಕ್ತ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ, ದಲಿತ ಸಂಘರ್ಷ ಸಮಿತಿ, ಸಮತಾ ಸೈನಿಕದಳ ಹಾಗೂ ಚಲವಾದಿ ಮಹಾಸಭಾ ವತಿಯಿಂದ ತಾಲೂಕು ತಹಶೀಲ್ದಾರ್ ಕಚೇರಿ ಎದುರುಗಡೆ ಪ್ರತಿಭಟನೆ ನಡೆಸಿದರು.
ಈ ವೇಳೆ ಸಮತಾ ಸೈನಿಕ್ ದಳದ ಜಿಲ್ಲಾಧ್ಯಕ್ಷ ಯೋಗೇಶ್ ಚಲವಾದಿ ಮಾತನಾಡಿ, ಬಸಾಪುರ ಗ್ರಾಮದಲ್ಲಿ 2009-10ನೇ ಸಾಲಿನಲ್ಲಿ ನೆರೆಹಾವಳಿ ಬಂದು, ಅಲ್ಲಿದ್ದ ಪರಿಶಿಷ್ಟ ಜಾತಿಯ ಕಾಲೋನಿಗೆ ಸಂಪೂರ್ಣ ನೀರು ನುಗ್ಗಿ ಪ್ರದೇಶವು ಮುಳುಗಡೆ ಆಗಿರುವುದರಿಂದ ಸರ್ಕಾರವು ಈ ಗ್ರಾಮವನ್ನು ಶಿಫ್ಫ್ಟೆಡ್ ಗ್ರಾಮ ಎಂದು ಪರಿಗಣಿಸಿ ಸುಮಾರು 35 ಎಕರೆಗಳಲ್ಲಿ ಫಲಾನುಭವಿಗಳಿಗೆ ಜಾಗ ಒದಗಿಸಿ, ಫ್ಲಾಟ್ ಗಳನ್ನು ಮಂಜೂರು ಮಾಡಿತು. ಆದರೆ ಅಲ್ಲಿದ್ದ ಪರಿಶಿಷ್ಟ ಜಾತಿಯ ಫಲಾನುಭವಿಗಳಿಗೆ ಸಮರ್ಪಕವಾಗಿ ನಿವೇಶನಗಳ ಹಂಚಿಕೆ ಆಗಿಲ್ಲ. ಮೇಲ್ನೋಟಕ್ಕೆ ಅಧಿಕಾರಿಗಳು ಸರ್ಕಾರದ ಆದೇಶದಂತೆ ಸಮರ್ಪಕವಾಗಿ ನಿವೇಶನ ಹಂಚಿಕೆ ಮಾಡಲಾಗಿದೆ ಎಂದು ತಿಳಿಸುತ್ತಾರೆ. ಆದರೆ ಖುದ್ದಾಗಿ ಸ್ಥಳಕ್ಕೆ ಭೇಟಿ ಕೊಟ್ಟಾಗ ಅರ್ಹ ಫಲಾನುಭವಿಗಳಿಗೆ ಅಲ್ಲದೆ ಇತರೆ ಜನರಿಂದ ಹಣ ಪಡೆದು ಜಾಗೆ ಕೊಟ್ಟಿರುವುದು ಕಂಡು ಬಂದಿದೆ ಎಂದು ಆರೋಪಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ್ ಚಲವಾದಿ ಮಾತನಾಡಿ, ಬಡವರ ಮತ್ತು ನಿರ್ಗತಿಕ ಕುಟುಂಬಗಳಿಗೆ ನ್ಯಾಯ ಸಿಗಬೇಕು ಎಂದು ಈ ಹೋರಾಟವನ್ನು ಹಮ್ಮಿಕೊಂಡಿದ್ದೇವೆ. ನೆರೆಹಾವಳಿ ಬಂದ ಸಂದರ್ಭದಲ್ಲಿ 340 ಮನೆ ನಿವೇಶನ ಹಂಚಿಕೆ ಮಾಡಲಾಗಿತ್ತು. ಗ್ರಾಮ ಪಂಚಾಯಿತಿ ಆಡಳಿತ ವರ್ಗದಿಂದ ಮರು ಹಂಚಿಕೆಯಲ್ಲಿ 30, 40, 50.000 ರೂವರೆಗೆ ಹಣ ಪಡೆದು 220 ಖುಲ್ಲಾ ಜಾಗೆಗಳನ್ನು ತಮಗೆ ಬೇಕಾದವರಿಗೆ ಹಂಚಿಕೆ ಮಾಡುತ್ತಾರೆ. ಇದರಲ್ಲಿ ಹಲವು ಸಮುದಾಯದವರಿಗೆ ಅನ್ಯಾಯವಾಗಿದ್ದು, ಪರಿಶಿಷ್ಟ ಜಾತಿ ಸೇರಿದಂತೆ ಹಿಂದುಳಿದ ವರ್ಗದವರು, ಅಲ್ಪಸಂಖ್ಯಾತರು ಹೀಗೆ ಯಾರಿಗೆ ಅನ್ಯಾಯ ಆಗಿದೆಯೋ ಅವರವರ ನಿವೇಶನಗಳು ಅವರಿಗೆ ಪುನಃ ಸಿಗಬೇಕು. ಇಲ್ಲವಾದಲ್ಲಿ ಮುಂದಿನ ದಿನಮಾನಗಳಲ್ಲಿ ಹೋರಾಟವು ತೀವ್ರ ಸ್ವರೂಪವನ್ನು ಪಡೆದುಕೊಳ್ಳಬಹುದು ಎಂದು ಎಚ್ಚರಿಕೆ ನೀಡಿದರು.
ಸ್ಥಳೀಯರಾದ ಸಂಜು ಪೂಜಾರ್ ಮಾತನಾಡಿ, ಎಸ್.ಸಿ ಸಮುದಾಯಕ್ಕೆ ಸಿಗಬೇಕಿದ್ದ ಮನೆ ನಿವೇಶನದ ವಿಚಾರದಲ್ಲಿ ರಾಜಕಾರಣಿಗಳು ಮತ್ತು ಅಧಿಕಾರಿಗಳು ಸೇರಿಕೊಂಡು ತಮಗೆ ಬೇಕಾದಂತೆ ಬೇಕಾಬಿಟ್ಟಿ ಜಾಗೆಗಳನ್ನು ಹಂಚಿಕೆ ಮಾಡಿದ್ದಾರೆ. ಮತ್ತು ತಮಗೆ ಬೇಕಾದವರಿಗೆ ಪಟ್ಟಾ ಬುಕ್ಕುಗಳನ್ನು ನೀಡಿದ್ದಾರೆ. ಈ ಕುರಿತು ನೇರವಾಗಿ ತಹಶೀಲ್ದಾರ್ ನವೀನ್ ಅವರ ಮೇಲೆ ದೂರು ನೀಡಿದ್ದು ಇದೆ. ಅವರನ್ನು ಕೂಡಲೇ ಅಮಾನತ್ತು ಮಾಡಬೇಕು ಎಂದು ಒತ್ತಾಯಿಸಿದ್ದೆವು. ಆದರೆ ಅವರಿಗೆ ಪ್ರಮೋಷನ್ ಸಿಕ್ಕಿತು. ಏಕೆ ಸರ್ಕಾರವು ಈ ರೀತಿ ದಲಿತ ಮತ್ತು ಹಿಂದುಳಿದವರ ಮೇಲೆ ನಿರ್ಲಕ್ಷ ವಹಿಸುತ್ತಿದೆ?. ಈಗಲಾದರೂ ಕಾನೂನಿನ ಚೌಕಟ್ಟಿನಲ್ಲಿ ಈ ಕುರಿತು ಶಿಸ್ತು ಕ್ರಮವನ್ನು ಕೈಗೊಳ್ಳಬೇಕು. ಮತ್ತು ಈ ಬಗ್ಗೆ ಹಲವು ಬಾರಿ ಮನವಿ ಕೊಟ್ಟಿದ್ದು ಉಂಟು ಜಿಲ್ಲಾಧಿಕಾರಿಗಳ ಗಮನಕ್ಕೂ ತಂದಿದ್ದಿದೆ. ಆದರೂ ಯಾವುದೇ ಪ್ರಯೋಜನ ಆಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ದಲಿತ ಸಂಘರ್ಷ ಸಮಿತಿ ಧಾರವಾಡ ಜಿಲ್ಲಾಧ್ಯಕ್ಷ ಶಂಕರ ಫಾತ್ರೆ ಮಾತನಾಡಿ, ತಾಲೂಕು ದಂಡಾಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳು ನಿವೇಶನ ಹಂಚಿಕೆಯ ಅವ್ಯವಹಾರದ ವಿಚಾರದಲ್ಲಿ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರಿಗೆ ನ್ಯಾಯಯುತವಾಗಿ ಸರಿಯಾದ ಶಿಕ್ಷೆ ಆಗುವಂತೆ ಗಮನ ಹರಿಸಬೇಕು. ಅರ್ಹ ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಆಗಬೇಕು. ಕೂಡಲೇ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಲ್ಲಿ ಅಧಿಕಾರಿಗಳು ಮತ್ತು ಸರ್ಕಾರ ಮುಂದಾಗದಿದ್ದರೆ ಉಗ್ರವಾದ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಇದನ್ನೂ ಓದಿ ಧಾರವಾಡ | ಹಲವು ವರ್ಷಗಳಿಂದ ಮುಚ್ಚಿದ್ದ ಗೋದಾಮಿನಲ್ಲಿ ಕೊನೆಗೂ ಸೋಯಾಬೀನ್ ಖರೀದಿ ಕೇಂದ್ರ ಉದ್ಘಾಟನೆ
ಈ ಸಂದರ್ಭದಲ್ಲಿ ಬಸಾಪುರ ಗ್ರಾಮಸ್ಥರು ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು, ಸಮತಾ ಸೈನಿಕ ದಳ ಸಂಘಟನೆ ಪದಾಧಿಕಾರಿಗಳು ಮತ್ತು ಚಲವಾದಿ ಮಹಾಸಭಾ ಪದಾಧಿಕಾರಿಗಳು ಇದ್ದರು.





