ಇಂದು ಕನ್ನಡ ಪುಸ್ತಕಗಳ ರಾಶಿ ರಾಶಿ ಇವೆ. ಸುಸಜ್ಜಿತ ಗ್ರಂಥಾಲಯಗಳಿವೆ; ಓದುವವರಿಲ್ಲದೇ ಪುಸ್ತಕಗಳು ಕೊಳೆಯುವ ಸ್ಥಿತಿ ಬಂದೊದಗಿದ್ದು ವಿಪರ್ಯಾಸವಾಗಿದೆ ಎಂದು ಕವಿವ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಹೇಳಿದರು.
ಕರ್ನಾಟಕ ವಿದ್ಯಾವರ್ಧಕ ಸಂಘವು ಆಯೋಜಿಸಿದ್ದ 18ನೇ ದಿನದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಾ, ಕನ್ನಡದ ಮೊಟ್ಟ ಮೊದಲ ಸಾಹಿತ್ಯಕ ಪತ್ರಿಕೆಯಾಗಿ 1896ರಲ್ಲಿ ಪ್ರಾರಂಭಗೊಂಡ ವಾಗ್ಭೂಷಣ ಪತ್ರಿಕೆ ಸಂಘ ನಡೆದು ಬಂದ ದಾರಿಯನ್ನು ಮತ್ತು ಅಂದಿನ ಕನ್ನಡ ಮತ್ತು ಕನ್ನಡಿಗರ ಸ್ಥಿತಿಯನ್ನು ದಾಖಲಿಸಿದೆ. ಇಂಥ ಪತ್ರಿಕೆ ಕಾಲಾಂತರದಲ್ಲಿ ನಿಂತು ಹೋಗಿದ್ದನ್ನು ಮತ್ತೆ ಪ್ರಾರಂಭಿಸಿದ್ದು ಸಂಘದ ಒಂದು ವಿನೂತನ ಸಾಧನೆಯಾಗಿದೆ. ಹಿಂದಿನ ವಾಗ್ಭೂಷಣ ಪತ್ರಿಕೆಗಳನ್ನು ಅವಲೋಕಿಸಿದರೆ ಬಹುದೊಡ್ಡ ಈ ನೆಲದ ಸಾಹಿತ್ಯಿಕ ನಿಧಿಯೇ ಅಡಗಿದೆ. ಕವಿವ ಸಂಘವು ಪ್ರಾರಂಭದಲ್ಲಿಯೇ ತನ್ನ ಲೆಕ್ಕ ಪತ್ರಗಳನ್ನು ಮತ್ತು ಖರ್ಚು ವೆಚ್ಚವನ್ನು ಅತ್ಯಂತ ಪಾರದರ್ಶಕವಾಗಿ ಇಟ್ಟುಕೊಂಡು ಬಂದಿರುವುದನ್ನು 1918 ರ ವಾಗ್ಭೂಷಣ ಪತ್ರಿಕೆಯಲ್ಲಿ ದಾಖಲಿಸಿದಂತೆ ಅಂದಿನಿಂದ ಇಂದಿಗೂ ಸಂಘವು ಹಣಕಾಸಿನ ವ್ಯವಹಾರದಲ್ಲಿ ಪಾರದರ್ಶಕವಾಗಿ ಇಟ್ಟುಕೊಂಡು ಹಿಂದಿನ ಹಿರಿಯರು ಹಾಕಿಕೊಟ್ಟ ಮಾರ್ಗದಲ್ಲಿಯೇ ನಡೆಯುತ್ತಿರುವುದು ಸಂಘದ ನಿಜವಾದ ಶಕ್ತಿ ಮತ್ತು ಘನತೆಯಾಗಿದೆ.
ಕನ್ನಡ ಪುಸ್ತಕವು ಓದಲು ದೊರೆಯದೇ ಇರುವ ಕಾಲದಲ್ಲಿ ಸಂಘವು ಕನ್ನಡ ಪುಸ್ತಕಗಳನ್ನು ಬರೆಯಿಸಲು ಪ್ರೋತ್ಸಾಹದ ಬಹುಮಾನವನ್ನು ನೀಡುತ್ತಾ ಕನ್ನಡ ಸಾಹಿತ್ಯ ಓದುಗರ ಸಂಖ್ಯೆ ಹೆಚ್ಚಿಸಿದ ಕೀರ್ತಿ ಸಂಘಕ್ಕಿದೆ. ಮಹಿಳೆಯರು ಸಾಹಿತ್ಯ ರಚನೆಯಲ್ಲಿ ಮುಂದುಬರದೇ ಇದ್ದ ಕಾಲದಲ್ಲಿ ಸಂಘವು ಮಾತೋಶ್ರೀ ರತ್ನಮ್ಮ ಹೆಗ್ಗಡೆ ದತ್ತಿ ಮೂಲಕ ಬಹುಮಾನ ನೀಡುವ ಪರಂಪರೆ ಮುಂದುವರೆಸಿ, ಇಂದು ನೂರಾರು ಮಹಿಳಾ ಶ್ರೇಷ್ಠ ಲೇಖಕಿಯರು ಸೃಷ್ಟಿಸುವಲ್ಲಿ ಯಶಕಂಡಿದೆ. ಕವಿವ ಸಂಘದ ಘಟನಾವಳಿಯಲ್ಲಿ ಕವಿವ ಸಂಘವು, ಯಾವುದೇರಾಜಕೀಯ ಪಕ್ಷಕ್ಕೂ ಸೇರದ ಸಂಘ ಸದಾ ಸಾಹಿತ್ಯ, ಸಂಸ್ಕೃತಿ ವರ್ಧನೆಗಾಗಿ ತೊಡಗಿಸಿಕೊಳ್ಳುವುದು ಎಂದು ಸಂಘವು ತನ್ನ ಮೊದಲ ವರ್ಷದ ಉಪನಿಬಂಧನೆಗಳಲ್ಲಿ ದಾಖಲಿಸಿದ್ದು ಇದೆ. ಅದರಂತೆಯೇ ಇಂದಿಗೂ ಸಂಘವು ಯಾವುದೇ ರಾಜಕೀಯಕ್ಕೆ ವಾಲದೇ ಸದಾ ಕನ್ನಡ-ಕನ್ನಡಿಗ-ಕರ್ನಾಟಕ ಮಂತ್ರವಾಗಿಸಿಕೊಂಡು ತೊಡಗಿಸಿಕೊಂಡಿದೆ ಎಂದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಎಂ.ಎಂ. ಚಿಕ್ಕಮಠ ಮಾತನಾಡಿ, ಕವಿವ ಸಂಘ ರಾಜ್ಯೋತ್ಸವದ ನಿಮಿತ್ತ ಆಯೋಜಿಸಿದ ಧರೆಗೆದೊಡ್ಡವರು ಹಾಗೂ ಸಾಧಕರ ಸನ್ಮಾನಗಳು ಯೋಗ್ಯ ವ್ಯಕ್ತಿಗಳಿಗೆ ಸಂದ ಗೌರವಗಳಾಗಿವೆ. ಅವರೆಲ್ಲಾ ವಿವಿಧ ಕ್ಷೇತ್ರದ ಮಹಾನ್ ಸಾಧಕರೇ, ಈ ಎರಡೂ ಕಾರ್ಯಕ್ರಮಗಳು ಅತೀ ಹೆಚ್ಚು ಜನಮನ್ನಣೆ ಪಡೆದ ಕಾರ್ಯಕ್ರಮಗಳು. ಕವಿವ ಸಂಘವು ವಿದ್ಯೆಯ ಬೆಳವಣಿಗೆಗೆ ಏನೆಲ್ಲ ಶ್ರಮಿಸುತ್ತಿರುವುದು ಸಾಧನೆಯಾಗಿದೆ. ಆಡಳಿತ ಮಂಡಳಿಯ ಎಲ್ಲರೂ ಕ್ರಿಯಾಶೀಲರಾಗಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ ಧಾರವಾಡ | ಜಿಐಎಸ್ ತಂತ್ರಜ್ಞಾನವು ಕೃಷಿ, ನಗರಾಭಿವೃದ್ಧಿ ಕ್ಷೇತ್ರಗಳಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ: ಡಾ. ಮೋಹನ್
ಪ್ರಾರಂಭದಲ್ಲಿ ಗಾಯತ್ರಿ ಸರದೇಶಪಾಂಡೆ ಹಾಗೂ ಗುರುನಾಥ ಅವರಿಂದ ಕುಮಾರವ್ಯಾಸ ಭಾರತದ ಕಥಾ ಗಮಕ ಪ್ರಸಂಗಗಳ ಬಗ್ಗೆ ವ್ಯಾಖ್ಯಾನ ಮಾಡಲಾಯಿತು. ಆರೋಹಿ ಸದಾಶಿವ ಐಹೊಳೆ ತಂಡದಿಂದ ಭರತನಾಟ್ಯ ಪ್ರದರ್ಶನಗೊಂಡಿತು. ವೀರಣ್ಣ ಒಡ್ಡೀನ ಸ್ವಾಗತಿಸಿದರು.ಡಾ. ಜಿನದತ್ತ ಹಡಗಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶೈಲಜಾ ಅಮರಶೆಟ್ಟಿ ನಿರೂಪಿಸಿ, ವಂದಿಸಿದರು. ಲಾಲಸಾಬ ಬೂದಿಹಾಳ, ಶಂಕರ ಘಟ್ನಟ್ಟಿ, ಸಿ.ಎಸ್. ಪಾಟೀಲಕುಲಕರ್ಣಿ ಸೇರಿದಂತೆ ಕಲಾವಿದರು ಇದ್ದರು.





