ವಾರ್ತಾ ಇಲಾಖೆಯ ಸಹಾಯಕ ಮಡಿವಾಳರ ಉರ್ಫ್ ಹಿರೇಮಠ ಎಂಬುವವರು ಓರ್ವ ಪತ್ರಕರ್ತನೊಬ್ಬನ ಮೇಲೆ ಹಲ್ಲೆ ನಡೆಸಿರುವ ಘಟನೆ ಧಾರವಾಡದಲ್ಲಿ ನಡೆದಿದೆ.
ಫೆ. 21ರ ಮಧ್ಯಾಹ್ನ ಪತ್ರಿಕೆಯ ಕೆಲಸದ ನಿಮಿತ್ತ ‘ಮೀಡಿಯಾ ಲಿಸ್ಟ್’ ಪಡೆಯಲು ಪತ್ರಕರ್ತ ಚಂದ್ರಶೇಖರ ಹಿರೇಮಠ ಎಂಬುವವರು ಧಾರವಾಡ ವಾರ್ತಾ ಇಲಾಖೆ ಕಚೇರಿಗೆ ತೆರಳಿದ್ದರು. ಈ ಸಂದರ್ಭದಲ್ಲಿ ಅಲ್ಲಿನ ವಾರ್ತಾ ಸಹಾಯಕ ಸುರೇಶ ಮಡಿವಾಳರ ಉರ್ಫ್ ಹಿರೇಮಠ ಎಂಬುವವರು ಅವಾಚ್ಯ ಶಬ್ದಗಳಿಂದ ನಿಂದಿಸಿ, ಪತ್ರಕರ್ತನ ಮೊಬೈಲ್ ಫೋನ್ ಅನ್ನು ಕಿತ್ತೆಸೆದು, ಏಕಾಏಕಿ ಚಂದ್ರಶೇಖರ ಮೇಲೆ ಎರಗಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಮುಂದುವರೆದು ಸುರೇಶ್ ಹಿರೇಮಠ, ಚಂದ್ರಶೇಖರ ಅವರ ಕೊರಳಲ್ಲಿದ್ದ 5 ತೊಲೆ ಬಂಗಾರದ ಚೈನ್ ಅನ್ನು ಕಿತ್ತುಕೊಂಡು, ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಕಚೇರಿಯ ಆವರಣದಲ್ಲೇ ಪತ್ರಕರ್ತನ ಮೇಲೆ ಮೃಗನಂತೆ ವರ್ತಿಸಿದ ಅಧಿಕಾರಿಯ ನಡೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಖಂಡನೆ ವ್ಯಕ್ತವಾಗಿದ್ದು, ಪತ್ರಕರ್ತರಿಗೆ ರಕ್ಷಣೆ ಮತ್ತು ಸಹಕಾರ ನೀಡಬೇಕಾದ ಜವಾಬ್ದಾರಿಯುತ ಸ್ಥಾನದಲ್ಲಿರುವ ಅಧಿಕಾರಿಗಳೇ ಈ ರೀತಿ ವರ್ತಿಸಿರುವುದು ಪತ್ರಿಕಾ ರಂಗಕ್ಕೆ ಅವಮಾನ ಮಾಡಿದಂತಾಗಿದೆ. ಈ ಘಟನೆಯು ನಾಗರಿಕ ಸಮಾಜವು ತಲೆತಗ್ಗಿಸುವಂತಿದ್ದು, ಅಧಿಕಾರಿಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ.
ಕಳೆದ ಎರಡು ವರ್ಷಗಳ ಹಿಂದೆ ಸರ್ಕಾರಿ ಕಾರ್ಯಕ್ರಮವೊಂದಕ್ಕೆ ಸ್ಥಳೀಯ ಪತ್ರಕರ್ತರಿಬ್ಬರು ಪ್ರವೇಶ್ ಚೀಟಿಗಾಗಿ ಮನವಿ ಮಾಡಿಕೊಂಡಾಗ; ಅವಾಚ್ಯ ಶಬ್ಧ ಬಳಸಿ, ಬೈದು ಕಳಿಸಿದ್ದರು ಎಂದು ಹೆಸರೇಳದ ಪತ್ರಕರ್ತರೊಬ್ಬರು ಹೇಳಿದರು.
ಘಟನೆಯ ನಂತರ ಪತ್ರಕರ್ತ ಚಂದ್ರಶೇಖರ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದು, ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಮುಂದಾಗಿದ್ದಾರೆ. ಜಿಲ್ಲಾ ಪತ್ರಕರ್ತರ ಸಂಘವು ಈ ದೌರ್ಜನ್ಯವನ್ನು ತೀವ್ರವಾಗಿ ಖಂಡಿಸಿದ್ದು, ತಪ್ಪಿತಸ್ಥ ಅಧಿಕಾರಿಯನ್ನು ತಕ್ಷಣವೇ ಸೇವೆಯಿಂದ ಅಮಾನತುಗೊಳಿಸಬೇಕೆಂದು ಆಗ್ರಹಿಸಿದೆ.





