ಪ್ರಸ್ತುತದಲ್ಲಿ ಸಂಪೂರ್ಣವಾಗಿ ಬಂಡವಾಳಶಾಹಿಗೆ, ಅನ್ಯ ಆಕ್ರಮಣಕ್ಕೆ, ಸಾಂಸ್ಕೃತಿಕ ಅಕ್ರಮಣಕ್ಕೆ ಒಳಗಾಗಿರುವ ಮತ್ತು ಆತ್ಮಾಭಿಮಾನದಂತಹ ಶಬ್ದಗಳು ಅಪರಿಚಿತವಾಗಿರುವ ನಮಗೆ ಕಿತ್ತೂರು ಚನ್ನಮ್ಮ ನಮ್ಮನ್ನು ನೋಡಿಕೊಳ್ಳುವ ಕನ್ನಡಿಯಾಗುತ್ತಾಳೆ ಎಂದು ಧಾರವಾಡ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಅ. 23ರಂದು ನಗರದ ಆಲೂರು ವೆಂಕಟರಾವ ಸಾಂಸ್ಕೃತಿಕ ಭವನದಲ್ಲಿ ಏರ್ಪಡಿಸಿದ್ದ ಕಿತ್ತೂರು ರಾಣಿ ಚನ್ನಮ್ಮ ಜಯಂತಿ ಕಾರ್ಯಕ್ರಮದಲ್ಲಿ ದಾಂಡೇಲಿ ಸರ್ಕಾರಿ ಪದವಿ ಮಹಾವಿದ್ಯಾಲಯದ ಕನ್ನಡದ ಪ್ರಾಧ್ಯಾಪಕಿ ಹಾಗೂ ಬೆಳಗಾವಿ ಡಾ. ಬೆಟಗೇರಿ ಕೃಷ್ಣಶರ್ಮ ಟ್ರಸ್ಟ್’ನ ಅಧ್ಯಕ್ಷೆ ಡಾ. ವಿನಯಾ ಒಕ್ಕುಂದ, ಕಿತ್ತೂರು ಚನ್ನಮ್ಮ ಕುರಿತು ವಿಶೇಷ ಉಪನ್ಯಾಸದಲ್ಲಿ ಮಾತನಾಡಿದರು.
ವರ್ತಮಾನವನ್ನು ಅರ್ಥ ಮಾಡಿಕೊಳ್ಳಲು ಚರಿತ್ರೆಯನ್ನು ನೋಡಬೇಕಿದೆಯೇ ಹೊರತು ಚರಿತ್ರೆಗಾಗಿ ಮಾತ್ರವಲ್ಲ. ಚರಿತ್ರೆ ಓದುವಾಗ ಇದು ಹೀಗೇನೆ ಎಂದು ನಿರ್ಧಿಷ್ಟಪಡಿಸುವುದು ಕಷ್ಟ. ಮಹಿಳೆಗೆ ಸಂಬಂಧಪಟ್ಟ ಚರಿತ್ರೆ ಆಗಿದ್ದರೆ ಈ ಬಿಕ್ಕಟ್ಟು ಮೂರು ಪಟ್ಟು ಹೆಚ್ಚಾಗುತ್ತದೆ. ಮೊಟ್ಟ ಮೊದಲ ಸ್ವಾತಂತ್ರ್ಯದ ಕನಸು ಕೊಟ್ಟ ಕಿತ್ತೂರು ಚನ್ನಮ್ಮ ಉತ್ತರದ ಪಠ್ಯವನ್ನು ಪ್ರವೇಶ ಮಾಡಿಲ್ಲವೇಕೆ? ಕರ್ನಾಟಕದ ಪಠ್ಯಪುಸ್ತಕಗಳಲ್ಲಿ ರಾಣಿಯರಿಗೆ ಕೊಟ್ಟಿರುವ ಮಹತ್ವ ಎಷ್ಟು? ಎಂಬುದರ ಕುರಿತು ಚಿಂತಿಸಬೇಕಿದೆ. ಪಠ್ಯಗಳಲ್ಲಿ ಚನ್ನಮ್ಮನ ಬಗ್ಗೆ ತಪ್ಪುಗಳನ್ನು ಬೋಧಿಸಿಕೊಂಡು ಬರಲಾಗಿದೆ. ಬ್ರಿಟಿಷ್ ಅಧಿಕಾರಿಗಳಿಗೆ ಚನ್ನಮ್ಮ ಬರೆಸಿದ ಪತ್ರಗಳು ಅದ್ಭುತವಾದ ರಾಜಕೀಯ ನಿಲುವುಗಳನ್ನು ಹೊಂದಿವೆ. 30ಕ್ಕಿಂತ ಹೆಚ್ಚು ಬ್ರಿಟೀಷ್ ಸೈನ್ಯದ ಮಕ್ಕಳನ್ನು ರಕ್ಷಿಸಿ ವೈರಿಗಳ ಮಕ್ಕಳು ವೈರಿಗಳಲ್ಲ ಎಂದು ಚನ್ನಮ್ಮ ಸಾರುತ್ತಾಳೆ ಎಂದು ತಿಳಿಸಿದರು.
ಉಪವಿಭಾಗಾಧಿಕಾರಿ ಶಾಲಂ ಹುಸೇನ್ ಅವರು ಕಿತ್ತೂರ ರಾಣಿ ಚನ್ನಮ್ಮ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ, ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಹಿರಿಯ ನ್ಯಾಯವಾದಿ ಚಂದ್ರಶೇಖರ ಎಸ್. ನೇಗಿನಾಳ ಮತ್ತು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಗೆ ಸದಸ್ಯ ಶಂಭು ಸಾಲಿಮನಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಆರತಿ ದೇವಶಿಖಾಮಣಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.





