ಅಸಮಾನತೆಯನ್ನೇ ಜೀವಾಳವೆನ್ನುವಂತೆ ವರ್ತಿಸುವ ಪಕ್ಷಗಳು, ಸಂಘಟನೆಗಳು ಇರುವಾಗ ಸಮಾನತೆಯನ್ನು ಎಲ್ಲಿ ಕಾಣಲು ಸಾದ್ಯ ಹೇಳಿ? ಮೇ ಸಾಹಿತ್ಯ ಮೇಳವು ಎಲ್ಲರನ್ನೂ ಒಳಗೊಂಡು ಸಾಗುವಂತದ್ದು. ಎಲ್ಲರಿಗೂ ಇಲ್ಲಿ ಅವಕಾಶವಿದೆ. ಇವರು ನಮ್ಮವರಲ್ಲ ವಿರೋಧಿಗಳೆಂದು ಯಾರನ್ನೂ ದೂರುವುದು ಬೇಡ. ಬಂದವರೆಲ್ಲ ಬರಲಿ ಅವರು ನಿಧಾನವಾಗಿ ಬದಲಾಗುತ್ತಾರೆ ಎಂದು ಬಸವರಾಜ ಸೂಳಿಬಾವಿ ಹೇಳಿದರು.
ಧಾರವಾಡ ನಗರದ ಸಮಾಜ ಪರಿವರ್ತನಾ ಕೇಂದ್ರ ಸಭಾಭವನದಲ್ಲಿ ಜೂನ್ 23ರಂದು ಏರ್ಪಡಿಸಿದ್ದ ಮೇ ಸಾಹಿತ್ಯ ಮೇಳ ಅವಲೋಕನಾ ಸಭೆ ಕುರಿತು ಮಾತನಾಡಿದರು.
“ನಾವು ಸಂಘಟನಾತ್ಮಕವಾಗಿ ಬೆಳೆಯುವುದು ಬೇಡ, ಸಾಹಿತ್ಯ ಹೆಸರಿನಲ್ಲಿ ಸಮಾಜವನ್ನು ಮತ್ತಷ್ಟು ಗಟ್ಟಿಗೊಳಿಸುವ ಕಾರ್ಯ ಮಾಡೋಣ. ಚಳವಳಿಯ ರೂಪವಾಗಿಯೇ ಸಾಗೋಣ. ನಾವೆಲ್ಲ ಪ್ರಾದೇಶಿಕ ಮತ್ತು ಸಾಮಾಜಿಕ ನ್ಯಾಯದೊಂದಿಗೆ ಸಾಗಬೇಕಿದೆ. ಭಿನ್ನಮತವನ್ನು ಒಳಗೊಂಡರೆ ಮಾತ್ರ ಸಂವಾದ ಸಾಧ್ಯವಾಗುತ್ತದೆ. ಬಹುತ್ವ ಗಟ್ಟಿಗೊಳಿಸುವುದೇ ಮೇ ಸಾಹಿತ್ಯ ಮೇಳದ ಮುಖ್ಯ ಉದ್ದೇಶ. ಬಹುತ್ವವನ್ನು ನಮ್ಮ ಚಳವಳಿಯ ಭಾಗವಾಗಿಟ್ಟುಕೊಂಡು ಮುಂದುವರೆಯೋಣ” ಎಂದು ಕರೆಕೊಟ್ಟರು.
ಸಾಹಿತಿ ಎಚ್ ಸ್ ಅನುಪಮಾ ಮಾತನಾಡಿ, “ಮೇ ಸಾಹಿತ್ಯ ಮೇಳ ಧಾರವಾಡದಿಂದ ಪ್ರಾರಂಭವಾಗಿ ನಡೆದುಬಂದಿದೆ. ಹೀಗೆ ಹೊಸ ಮುಖಗಳು ಮೇ ಮೇಳದೆಡೆಗೆ ಬರಬೇಕಿದೆ. ನಾವೆಲ್ಲ ಸಲಹೆಗಳನ್ನೇ ಕೊಡುತ್ತಾ ಹೋಗುವ ಬದಲಾಗಿ ಕಿಂಚಿತ್ತಾದರೂ ಮೇ ಸಾಹಿತ್ಯ ಮೇಳದಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ಮೇಳದಲ್ಲಿ ಕಥೆ, ಕವಿತೆ ಕಟ್ಟುವ ಕುರಿತು ಮಾತ್ರ ಹೇಳುವುದಕ್ಕಿಂತ, ಚಳುವಳಿಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ರೂಪಿಸಬೇಕಿದೆ” ಎಂದು ಹೇಳಿದರು.
“ಮೇ ಸಾಹಿತ್ಯ ಮೇಳ ಸಂಘಟನೆಗಳ ಜಾಲವಾಗಿದೆ. ಗೊತ್ತಿಲ್ಲದವರನ್ನು ಒಂದೆಡೆ ಸೇರಿಸುವುದೇ ಇದರ ಉದ್ದೇಶ. ಇದಕ್ಕೆ ಸಂಘಟನೆ ರೂಪ ದೊರೆತರೆ ಬಹಳ ವರ್ಷಗಳ ಕಾಲ ಆ ಸಂಘಟನೆಯ ವಿಚಾರಗಳು ಹಾಗೆಯೇ ಇರುವುದಿಲ್ಲ. ಆಂದೋಲನವಾಗಿ ಮುನ್ನಡೆದಾಗ ಒಬ್ಬರು, ಮತ್ತೊಬ್ಬರಿಂದ ಚಳವಳಿ ಸಾಗುತ್ತ ಹೋಗುತ್ತದೆ. ಯಾರು ಶೋಷಿತರ ಪರವಾಗಿ ಮಾತನಾಡುತ್ತಾರೋ ಅವರೆಲ್ಲ ಎಡಪಂಥೀಯರು. ಹೀಗಾಗಿ ಯಾರೇ ನಮ್ಮನ್ನು ಪ್ರಶ್ನಿಸಿದರೂ ನಾವು ಎಡವಾದಿಗಳೇ ಎಂದು ಹೇಳಲು ಹಿಂಜರಿಯಬಾರದು” ಎಂದರು.
“ಮೇ ಸಾಹಿತ್ಯ ಮೇಳದ ಮುನ್ನೋಟದ ಬಗ್ಗೆ ಮುಂದಿನ ಐದು ವರ್ಷ ಸರ್ಕಾರ ಚರ್ಚಿಸಬೇಕಿದೆ. ಮುಂದಿನ ಆರು ತಿಂಗಳಲ್ಲಿ ನಮ್ಮ ಸಾಹಿತ್ಯ ಮೇಳ ಹೇಗಿರಬೇಕೆಂದು ಇಡೀ ರಾಜ್ಯವೆ ಚರ್ಚೆ ಮಾಡಬೇಕಿದೆ. ಮುಂದಿನ ಮೇಳಕ್ಕೆ ಇಂದಿನಿಂದಲೇ ತಯಾರಿಕೆ ಆಗಬೇಕಿದೆ. ಭೌತಿಕವಾಗಿ ಎಲ್ಲರ ಪಾಲ್ಗೊಳ್ಳುವಿಕೆ ಹೆಚ್ಚಾಗಬೇಕಿದೆ. ಪ್ರತಿ ಬಾರಿಗಿಂತ ಈ ಸಲದ ಸಾಹಿತ್ಯ ಮೇಳ ಹೆಚ್ಚು ಆಸಕ್ತಿದಾಯಕವಾಗಿತ್ತು. ಮೇ ಸಾಹಿತ್ಯ ಮೇಳ ಅನೇಕ ಕೊಡುಗೆ ಕೊಟ್ಟಿದೆ. ಅದನ್ನು ಕನ್ನಡ ಸಾರಸತ್ವ ಲೋಕ ಎಷ್ಟರ ಮಟ್ಟಿಗೆ ಸ್ವೀಕರಿಸಿದೆ ಎಂಬುದು ಪ್ರಶ್ನೆಯಾಗಿದೆ” ಎಂದರು.
ಸಂಗಮೇಶ್ ಮಾತನಾಡಿ, “ಮೇ ಸಾಹಿತ್ಯ ಮೇಳದಲ್ಲಿ ಪ್ರೇಕ್ಷಕರ ಪಾಲ್ಗೊಳ್ಳುವಿಕೆ ಹೆಚ್ಚಾಗಿದೆ. ಕವಿಗೋಷ್ಟಿ ಮಾಡುವ ರೀತಿಯಲ್ಲೇ ಸಂವಾದ ಕಾರ್ಯಕ್ರಮಗಳನ್ನೂ ನಡೆಸಬೇಕಿದೆ. ಉತ್ತರ ಭಾರತದೊಂದಿಗೆ ನಮ್ಮ ಸಾಹಿತ್ಯ ಮೇಳದ ಸಂಪರ್ಕ ಹೆಚ್ಚಾಗುತ್ತಿರುವುದು ಸಂತಸದ ವಿಷಯ” ಎಂದರು.
ಸಾಹಿತಿ ಬಸವರಾಜ ಹೂಗಾರ ಮಾತನಾಡಿ, “ಹೊರಗಿನವರನ್ನು ದೂರುವುದನ್ನು ಬಿಟ್ಟು ನಮ್ಮ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಅವಕಾಶವಾದವನ್ನು ಹೊರತುಪಡಿಸಿ ಬಹುಮುಖ್ಯ ಸಮ್ಮೇಳನ ಮಾಡಬಹುದೆಂದು ತೋರಿಸಿದ್ದು ಮೇ ಸಾಹಿತ್ಯ ಮೇಳವಾಗಿದೆ” ಎಂದು ತಿಳಿಸಿದರು.
ಶರಣಪ್ಪ ಅಚಲಾಪುರ ಕೊಪ್ಪಳ ಮಾತನಾಡಿ, “ಮೇ ಸಾಹಿತ್ಯ ಮೇಳದ ಮೂಲಕ ಯುವಜನರನ್ನು ಪ್ರಗತಿಪರತೆಯ ಕಡೆಗೆ ಎಳೆತರಬೇಕಿದೆ. ಅವರಿಗೆ ತರಬೇತಿ ನೀಡುವುದು, ಅನ್ಯ ಮಾರ್ಗಗಳನ್ನು ಯುವಜನರನ್ನು ತುಳಿಯದೆ ಸಮಾಜದ ಸ್ವಾಸ್ತ್ಯಕ್ಕಾಗಿ ದುಡಿಯುವ ಮನಸ್ಸುಗಳ ಕಟ್ಟಬೇಕಿದೆ. ನಾವು ಮೇ ಸಾಹಿತ್ಯ ಮೇಳದಿಂದ ಜನಪರವಾದಿಗಳೆಂದು ಒತ್ತಿ ಹೇಳಬೇಕಿದೆ” ಎಂದರು.
ಪತ್ರಕರ್ತ ಅನಿಲ್ ಹೊಸಮನಿ ಮಾತನಾಡಿ, “ಎಲ್ಲ ಸಾಹಿತ್ಯ ಮೇಳಗಳಂತೆ ಮೇ ಸಾಹಿತ್ಯ ಮೇಳವೂ ಇತುತ್ತದೆ ಅಂದುಕೊಂಡಿದ್ದೆವು. ಆದರೆ ಈ ಸಾಹಿತ್ಯ ಮೇಳ ವಿಶೇಷವಾಗಿತ್ತು. ಬಹುತೇಕ ಸಾಹಿತ್ಯ ಸಮ್ಮೇಳಗಳಲ್ಲಿ ಸಾಹಿತಿಗಳು ಕೇವಲ ಪ್ರಶಂಸೆ ಪ್ರಶಸ್ತಿ, ಹೆಸರಿಗಾಗೇ ಪರಿತಪಿಸುವುದನ್ನು ಕಂಡಿದ್ದೇನೆ. ಆದರೆ ಮೇ ಮೇಳ ಸಾಹಿತ್ಯ ಅದಕ್ಕೆ ಹೊರತಾಗಿದೆ” ಎಂದರು.
ಸಾಹಿತಿ ಮಾಲತಿ ಪಟ್ಟಣಶೆಟ್ಟಿ ಮಾತನಾಡಿ, “ರಾಜಕೀಯ, ಸಾಮಾಜಿಕ, ಶೋಷಿತ ವರ್ಗಕ್ಕೆ ಸಂಬಂಧವಾಗಿ ವಿಚಾರಗೋಷ್ಟಿಗಳನ್ನು ನೇಮಿಸಬೇಕಿದೆ. ಎಲ್ಲ ಗೋಷ್ಟಿಗಳಲ್ಲಿ ಯುವಕರು ಮತ್ತು ಮಹಿಳೆಯರ ಪಾತ್ರ ಹೆಚ್ಚಾಗಬೇಕಿದೆ. ಮೇ ಸಾಹಿತ್ಯ ಮೇಳ ಕರ್ನಾಟಕದಲ್ಲಿ ತನ್ನ ಹೆಜ್ಜೆ ಗುರುತಿನ ಚಾಪು ಮೂಡಿಸಿದೆ. ಮೇ ಸಾಹಿತ್ಯ ಮೇಳದಲ್ಲಿ ಎಲ್ಲರೂ ಸ್ವತಂತ್ರವಾಗಿರಲು ಸಾಧ್ಯವಾಗಿದೆ. ಈ ಮೇಳದಲ್ಲಿ ಯಾರೂ ಸಹಿತ ವ್ಯಯಕ್ತಿಕವಾಗಿಯೇ ಹೆಚ್ಚು ಬೆಳೆಯಬೇಕೆಂಬ ಮನದಾಸೆ ಇರುವ ಮನಸ್ಸುಗಳು ಸಿಗುವುದು ಕಡಿಮೆ. ಸಹಜ ಚಿಂತನೆಯ ಪ್ರಶ್ನೆಗಳಿಗೆ ಅವಕಾಶ ಮಾಡಿಕೊಡುವ ಈ ಸಾಹಿತ್ಯ ಮೇಳ, ಸಮಾನ ಮನಸ್ಕರನ್ನು ಒಗ್ಗಟ್ಟಾಗಿಸುವಲ್ಲಿ ಯಶಸ್ವಿಯಾಗಿದೆ” ಎಂದರು.
ಚನ್ನು ಕಟ್ಟಿಮನಿ ಮಾತನಾಡಿ, “ಮೇ ಸಾಹಿತ್ಯ ಮೇಳದಲ್ಲಿ ಸಮಾನತೆ ಮತ್ತು ಭದ್ರತೆ ಹೆಚ್ಚು ಪ್ರಾಮುಖ್ಯತೆಯನ್ನು ವಹಿಸಿತ್ತು. ಹೀಗಾಗಿ ಹೊಸತನ್ನು ಕಾಣುವ ಉದ್ದೇಶದಿಂದ ಹಾಗೂ ಮೇ ಸಾಹಿತ್ಯ ಮೇಳ ಎಲ್ಲರನ್ನೂ ಒಳಗೊಳ್ಳುವ ಕಾರಣ ನಾವೆಲ್ಲ ಮೇ ಸಾಹಿತ್ಯ ಜೊತೆಗೆ ಇರುತ್ತೇವೆ” ಎಂದು ಭರವಸೆಯನ್ನಿತ್ತರು.
“ಯಾರು ಸಂವಿಧಾನದ ಆಶಯಗಳ ವಿರುದ್ಧ ನಡೆಯುವರೊ ಅಂತಹವರಿಗೆ ಬುದ್ಧಿ ಕಲಿಸುವುದೇ ಮೇ ಸಾಹಿತ್ಯ ಮೇಳವೆಂದು ಸಭೆಯಲ್ಲಿದ್ದವರು ಹೇಳಿದರು.
ಬಿಜಾಪುರದ ಗುರುನಗೌಡ ಪಾಟೀಲ್ ಮಾತನಾಡಿ, “ಮನುಷ್ಯರನ್ನು ಮನುಷ್ಯರನ್ನಾಗಿ ನೋಡಲೋಸುಗ ಈ ಮೇ ಮೇಳದ ಕಲ್ಪನೆ ಬಂದಿತು. ಬಸವಣ್ಣ ಹಿಡಿದುಕೊಂಡವರು ಇಂತಹ ಪ್ರಗತಿಪರತೆಯ ಕಡೆಗೆ ಬರದೇ ಇರುವುದು ದುರಂತದ ಸಂಗತಿ. ಬಸವಣ್ಣನವರ ವಿಚಾರಗಳನ್ನು ಮತ್ತಷ್ಟು ಗಟ್ಟಿಗೊಳಿಸುವ ಕಾರ್ಯ ಮೇ ಮೇಳ ಮಾಡುತ್ತಿದೆ” ಎಂದರು.
ಎಂ ಕೆ ಸಾಹೇಬ್ ಮಾತನಾಡಿ, “ಮೇ ಸಾಹಿತ್ಯ ಮೇಳವನ್ನು ಡಿಜಿಟಿಲೀಕರಣ ಮಾಡಬೇಕಿದೆ. ಈ ಮೇಳದ ವಿಚಾರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಕೆಲಸವಾಗಬೇಕು. ಇತಿಹಾಸವನ್ನು ಗಮನದಲ್ಲಿರಿಸಿಕೊಂಡು ವೇದಿಕೆಯ ಮೂಲಕ ಸುಳ್ಳುಗಳ ವಿರುದ್ಧ ಮಾತನಾಡಬೇಕಿದೆ. ಸತ್ಯವನ್ನು ಬಿತ್ತರಿಸುವ ಕಾರ್ಯವಾಗಬೇಕಿದೆ” ಎಂದರು.
ಕೆ ಎಚ್ ಪಾಟೀಲ್ ಮಾತನಾಡಿ, “ಕಳೆದ ಹತ್ತು ವರ್ಷಗಳಲ್ಲಿ ಸಂವಿಧಾನಕ್ಕೆ ಧಕ್ಕೆ ತರುವ ಕೆಲಸಗಳು ನಡೆದಿವೆ. ಅದರ ವಿರುದ್ಧ ನಾವು ನಿರಂತರವಾಗಿ ಹೋರಾಟ, ಗೋಷ್ಟಿ, ಚರ್ಚೆಗಳನ್ನು ಏರ್ಪಡಿಸುತ್ತ ಬಂದಿದ್ದೇವೆ. ನಾವು ಕೇವಲ ಸಭೆಗಳನ್ನು ಕರೆದು ಸಭೆ ಮುಗಿಸಿ ಎಲ್ಲ ಮರೆತು ಹೋಗುವ ಬದಲು ಇನ್ನೂ ಸಮಾಜಕ್ಕೆ ನಾವು ಏನೇನು ಮಾಡಬಹುದೆಂದು ಪದೇ ಪದೆ ಚರ್ಚಿಸಿ ಕಾರ್ಯೋನ್ಮುಖರಾಗಬೇಕು. ಅನ್ಯ ಜನರನ್ನೂ ನಾವು ಒಳಗೊಳ್ಳಬೇಕಿದೆ” ಎಂದು ಹೇಳಿದರು.
“ಮೇ ಸಾಹಿತ್ಯ ಮೇಳದಲ್ಲಿ ಅಂಬೇಡ್ಕರ್, ಮಾರ್ಕ್ಸ್, ಲೋಹಿಯಾ ವಾದಿಗಳೂ ಇದ್ದಾರೆ. ದೇಶದ ಘನತೆಯನ್ನು, ಪ್ರಜಾಪ್ರಭುತ್ವವನ್ನು ರಕ್ಷಿಸುವಲ್ಲಿ ಮೇ ಸಾಹಿತ್ಯ ಮೇಳ ತುಂಬಾ ಪರಿಣಾಮಕಾರಿಯಾಗಿದೆ. ಆದ್ಧರಿಂದ ಈ ಸಮ್ಮೇಳನ ಹೀಗೆಯೇ ಮುಂದುವರೆಯಬೇಕು. ಈ ಸಾಹಿತ್ಯ ಮೇಳದಲ್ಲಿ ಭಾಷಣಗಳಿಗಿಂತ ಹೆಚ್ಚು ಸಂವಾದಕ್ಕೆ ಒತ್ತುಕೊಡಬೇಕಿದೆ. ಹೀಗಾದರೆ ಇದರ ಮಹತ್ವ ಇನ್ನೂ ಹೆಚ್ಚಾಗುತ್ತದೆ. ಕೋಮುವಾದಿಗಳನ್ನು ಸೋಲಿಸುವ ನಮ್ಮಮುಖ್ಯ ಗುರಿಯನ್ನು ಮರೆಯಬಾರದು” ಎಂದರು.
ಸರಸ್ವತಿ ದಾವಣಗೆರೆ ಮಾತನಾಡಿ, “ಜಾತಿ ಸಮುದಾಯಗಳ ಮಧ್ಯೆ ಬದುಕು ಸಾಗಿಸಿ ಒಂಟಿಯೆಂದು ಎನಿಸಿದ್ದ ನನಗೆ ಮೇ ಸಾಹಿತ್ಯ ಮೇಳ ಒಂದಿಷ್ಟು ಶಕ್ತಿ ತುಂಬಿದೆ. ಮತ್ತು ಬಹುತೇಕರು ಪ್ರಗತಿಪರ ಚಿಂತನೆಯ ಹೆಸರಿನಲ್ಲಿ ನಾಟಕೀಯ ಬದುಕು ಸಾಗಿಸುತ್ತಿದ್ದಾರೆ. ನಾವು ಹೊಸತನ್ನು ಕಲಿಯಲು ಮೇ ಮೇಳ ಬಹಳ ಸಹಕಾರಿಯಾಗಿದೆ” ಎಂದರು.
ಶರಣು ಸಂಗನಾಳ ಮಾತನಾಡಿ, “ಯಾರ್‍ಯಾರ ವಿಚಾರಗಳು ಹೇಗಿರುತ್ತವೆಂದು ತಿಳಿಯಲು ಮೇ ಮೇಳ ಅತ್ಯಂತ ಪರಿಣಾಮಕಾರಿಯಾಗಿದೆ. ನಾನು ಮೇ ಮೇಳದ ವಿಚಾರಗೋಷ್ಟಿಗಳಿಂದ ಬಹಳ ವಿಚಾರಗಳನ್ನು ಅರಿತುಕೊಂಡಿದ್ದೇನೆ. ಚರಿತ್ರೆ ಮತ್ತು ಸಾಹಿತ್ಯ ಎರಡೂ ಒಟ್ಟೊಟ್ಟಿಗೆ ಸಾಗಿದಾಗ ನಾವು ಯಶಸ್ಸನ್ನು ಸಾಧಿಸಲು ಸಾಧ್ಯವಾಗುತ್ತದೆ. ನಾವು ಪಕ್ಷಗಳ ಮಧ್ಯೆ ಅಂತರ ಕಾಯ್ದುಕೊಳ್ಳುವುದು ಅನಿವಾರ್ಯವಾಗಿದೆ. ಚಳವಳಿಗಳ ರೂಪಿಸುವ ಮೂಲಕ ಈ ಸಮ್ಮೇಳನ ಮಾಡಬೇಕಿದೆ. ಯುವಕರನ್ನು ತಲುಪುವಲ್ಲಿ ನಾವು ಸೋಲುತ್ತಿದ್ದೇವೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಗದಗ | ಅಂದಯ್ಯ ಅರವಟಗಿಮಠರಿಗೆ ಶಾಂತಾದೇವಿ ಕಣವಿ ಕಥಾ ಬಹುಮಾನ
ಎಚ್ ಎಸ್ ಅನುಪಮಾ, ಮುತ್ತು ಬಿಳಿಯಲಿ, ಚಂದ್ರಪ್ರಭಾ ಬನಹಟ್ಟಿ, ಸಿದ್ಧಾರ್ಥ ಸಿಂಧೆ, ಚನ್ನಬಸಪ್ಪ, ರಾಮಚಂದ್ರ, ರತ್ನಾಕರ ಸೇರಿದಂತೆ ಇತರರು ಇದ್ದರು.





