ಕಳೆದ 3 ತಿಂಗಳುಗಳಿಂದ ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿಯಿಂದ ಉದ್ಯೋಗಕ್ಕಾಗಿ ಆಗ್ರಹಿಸಿ ಪ್ರತಿಭಟನೆಗಳು ನಡೆದಿವೆ. ಆ ಹಿನ್ನೆಲೆಯಲ್ಲಿ ಕಳೆದ ಡಿಸೆಂಬರ್ 1ರಂದು ಧಾರವಾಡದಲ್ಲಿ ಉದ್ಯೋಗಾಕಾಂಕ್ಷಿಗಳ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಪೋಲಿಸ್ ಮಧ್ಯಪ್ರವೇಶಿಸಿ ಹೋರಾಟಗಾರರನ್ನು ಬಂಧಿಸಿತ್ತು, ಇದರಿಂದ ಆಕ್ರೋಶಗೊಂಡ ಉದ್ಯೋಗಾಕಾಂಕ್ಷಿಗಳು ಉದ್ಯೋಗ ಒದಗಿಸುವಲ್ಲಿ ರಾಜ್ಯ, ಕೇಂದ್ರ ಸರ್ಕಾರಗಳ ವಿಳಂಬ ನೀತಿ ಖಂಡಿಸಿ ಮುಂಬರುವ ಡಿಸೆಂಬರ್ 10ರಂದು ಬೃಹತ್ ಪ್ರತಿಭಟನಾ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ನಗರದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು.
ಈ ವೇಳೆ ಸಂಘಟನಾಕರಾರು ಮಾತನಾಡುತ್ತ, ಕಳೆದ ಅಕ್ಟೋಬರ್ 17ರಂದು ನಗರದಲ್ಲಿ ಉದ್ಯೋಗಾಕಾಂಕ್ಷಿಗಳ ರಾಜ್ಯಮಟ್ಟದ ಸಮಾವೇಶವನ್ನು ಹಮ್ಮಿಕೊಂದಿದ್ದರು. ಸುಪ್ರೀಂ ಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ, ಹಿರಿಯ ಸಾಮಾಜಿಕ ಹೋರಾಟಗಾರ ಎಸ್ ಆರ್ ಹಿರೇಮಠ್ ಈ ಸಮಾವೇಶದಲ್ಲಿ ಭಾಗವಹಿಸಿದ್ದರು. ಶೀಘ್ರ ನೇಮಕಾತಿ ಸೇರಿದಂತೆ ಉದ್ಯೋಗಾಕಾಂಕ್ಷಿಗಳ ವಿವಿಧ ಬೇಡಿಕೆಗಳ ಬಗ್ಗೆ ಚರ್ಚಿಸಿ ನಿರ್ಣಯವನ್ನು ಕೈಗೊಳ್ಳಲಾಗಿತ್ತು. ನಂತರ ಜಸ್ಟಿಸ್ ಸಂತೋಷ್ ಹೆಗಡೆ, ಎಸ್ ಆರ್ ಹಿರೇಮಠ ನೇತೃತ್ವದ ನಿಯೋಗದಲ್ಲಿ ಮಾನ್ಯ ಮುಖ್ಯಮಂತ್ರಿಗಳನ್ನು ಭೇಟಿಯಾಗಲು ಅವಕಾಶವನ್ನು ಕೇಳಲಾಗಿತ್ತು. ಸರ್ಕಾರದಿಂದ ಸ್ಪಂದನೆ ಸಿಗದಿದ್ದಾಗ ರಾಜ್ಯಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಹೋರಾಟ ಸಮಿತಿಯ ರಾಜ್ಯ ಸಂಚಾಲಕ ಸಿದ್ದಲಿಂಗ ಬಾಗೇವಾಡಿ ಮನವಿ ಪತ್ರವನ್ನು ಸಲ್ಲಿಸಿ ನಿಗದಿತ ಕಾಲ ಮಿತಿಯೊಳಗೆ ಉದ್ಯೋಗ ಆಕಾಂಕ್ಷಿಗಳ ಬೇಡಿಕೆಗಳಿಗೆ ಸ್ಪಂದಿಸಲು ಆಗ್ರಹಿಸಿದ್ದರು.
ನಂತರ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಪೊಲೀಸರ ಕ್ರಮವನ್ನು ಖಂಡಿಸಿ ಹಾಗೂ ಹೋರಾಟವನ್ನು ಬೆಂಬಲಿಸಿ ರೈತ ಸಂಘಟನೆಗಳು ಹಾಗೂ ಜನಪರ ಸಂಘಟನೆಗಳು ಹೋರಾಟದಲ್ಲಿ ಭಾಗವಹಿಸಿದ್ದು ಹೋರಾಟಕ್ಕೆ ಇನ್ನಷ್ಟು ಬಲ ತುಂಬಿದೆ. ಈಗ ಈ ಹೋರಾಟಕ್ಕೆ ಧಾರವಾಡ ಸೇರಿದಂತೆ ರಾಜ್ಯದಾದ್ಯಂತ ಎಲ್ಲಾ ಸ್ತರದ ಜನಗಳ ಬೆಂಬಲ ಸಿಕ್ಕಿರುವುದು ಮಾಧ್ಯಮಗಳ ಮೂಲಕ ಜಗಜ್ಜಾಗಿರವಾಗಿದೆ. ಇಷ್ಟಾದರೂ ಸರ್ಕಾರವು ಯಾವುದೇ ಪ್ರತಿಕ್ರಿಯೆಗಳನ್ನು ನೀಡಿಲ್ಲ.
ಈ ಹಿನ್ನೆಲೆಯಲ್ಲಿ ಉದ್ಯೋಗ ಅಕಾಂಕ್ಷಿಗಳಿಗೆ ಉನ್ನತ ಹಂತದ ಹೋರಾಟಕ್ಕೆ ಮುನ್ನಡೆಯುವುದಲ್ಲದೆ ಬೇರೆ ದಾರಿಯಿಲ್ಲ. ಆದ್ದರಿಂದ, ಉದ್ಯೋಗ ಒದಗಿಸುವಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ವಿಳಂಬ ನೀತಿಯನ್ನು ಖಂಡಿಸಿ ಡಿಸೆಂಬರ್ 10ರಂದು ಧಾರವಾಡದಲ್ಲಿ ಉದ್ಯೋಗಾಕಾಂಕ್ಷಿಗಳ ಬೃಹತ್ ಪ್ರತಿಭಟನಾ ಧರಣಿ ಹಮ್ಮಿಕೊಳ್ಳಲಾಗಿದೆ. ಈ ಪ್ರತಿಭಟನಾ ಧರಣಿಗೆ ರೈತ ಸಂಘಟನೆಗಳ, ಕಾರ್ಮಿಕ ಸಂಘಟನೆಗಳ, ವಿದ್ಯಾರ್ಥಿ ಯುವಜನ ಮಹಿಳಾ ಸಂಘಟನೆಗಳ, ಹಲವಾರು ಜನಪರ ಸಂಘಟನೆಗಳ ನಾಯಕರುಗಳು ಹಾಗೂ ಸಾಮಾಜಿಕ ಹೋರಾಟಗಾರರು ಬೆಂಬಲ ಸೂಚಿಸಿ ಮಾತನಾಡಲಿದ್ದಾರೆ. ಈ ಬೃಹತ್ ಪ್ರತಿಭಟನಾ ಧರಣಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗಾಕಾಂಕ್ಷಿಗಳು ಭಾಗವಹಿಸಬೇಕೆಂದು ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿ ವತಿಯಿಂದ ಮನವಿ ಮಾಡಿದರು.
ಇದನ್ನೂ ಓದಿ ಧಾರವಾಡ | ಸರ್ಕಾರಿ ಹುದ್ದೆಗಳ ನೇಮಕಾತಿಗೆ ಅಗ್ರಹಿಸಿ ಪ್ರತಿಭಟನೆ; ಉದ್ಯೋಗಾಕಾಂಕ್ಷಿ ಹೋರಾಟಗಾರರ ಬಂಧನ
ಹಕ್ಕೊತ್ತಾಯಗಳು:
1. ನೇಮಕಾತಿಯನ್ನು ಕೆಲವೇ ಹುದ್ದೆಗಳಿಗೆ ಸೀಮಿತಗೊಳಿಸದೆ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಲ್ಲಿ ಖಾಲಿ ಇರುವ ಎಲ್ಲಾ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು. 2. ಪೋಲಿಸ್ ಕಾನ್ಸ್‌ಟೇಬಲ್ ನೇಮಕಾತಿಯಲ್ಲಿ ವಯೋಮಿತಿಯನ್ನು ಎಸ್.ಸಿ, ಎಸ್.ಟಿ ಹಾಗೂ ಒಬಿಸಿಗೆ 33 ಹಾಗೂ ಸಾಮಾನ್ಯ ವರ್ಗಕ್ಕೆ 30 ವರ್ಷಗಳಿಗೆ ಹೆಚ್ಚಿಸಿ ಯಾವುದೇ ನೆಪಗಳನ್ನು ಕೊಡದೇ ಶೀಘ್ರವೇ ನೇಮಕಾತಿ ಅಧಿಸೂಚನೆ ಹೊರಡಿಸಬೇಕು. 3. ರಾಜ್ಯದಲ್ಲಿ ಕಳೆದ ನಾಲೈದು ವರ್ಷಗಳಿಂದ ಸರಿಯಾದ ನೇಮಕಾತಿಗಳು ನಡೆಯದ ಹಿನ್ನೆಲೆಯಲ್ಲಿ ಎಲ್ಲ ನೇಮಕಾತಿಗಳಿಗೆ ಅರ್ಹ ವಯೋಮಿತಿಯನ್ನು 5 ವರ್ಷಗಳಿಗೆ ಸಡಿಲಿಕೆ ಮಾಡಬೇಕು. 4. ಒಳ ಮೀಸಲಾತಿ ಗೊಂದಲಗಳನ್ನು ಕೂಡಲೇ ಪರಿಹರಿಸಿ ಅಧಿಸೂಚನೆಗಳನ್ನು ಹೊರಡಿಸಬೇಕು. 5. ಎಲ್ಲಾ ನೇಮಕಾತಿಗಳಲ್ಲಿ ದುಬಾರಿ ಅರ್ಜಿ ಶುಲ್ಕವನ್ನು ಕೈಬಿಡಬೇಕು ಹಾಗೂ ಪರೀಕ್ಷಾರ್ಥಿಗಳಿಗೆ ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು. 6. KPSC, KEA, KSP, ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ನೇಮಕಾತಿ ಪ್ರಾಧಿಕಾರಗಳು ಪ್ರತಿ ವರ್ಷ ಖಾಲಿ ಇರುವ ಹುದ್ದೆಗಳ ಸಂಖ್ಯೆ ಹಾಗೂ ವಾರ್ಷಿಕ ಕ್ಯಾಲೆಂಡರನ್ನು ಪ್ರಕಟಿಸಿ ನಿಗದಿತ ವೇಳಾಪಟ್ಟಿಯಂತೆ ನೇಮಕಾತಿ ಮಾಡಿಕೊಳ್ಳಬೇಕು. 7. ಎಲ್ಲಾ ನೇಮಕಾತಿ ಪ್ರಕ್ರಿಯೆಗಳಲ್ಲಿ ಸಂಪೂರ್ಣ ಪಾರದರ್ಶಕತೆ ಇರಬೇಕು. ಎಲ್ಲಾ ರೀತಿಯ ಪರೀಕ್ಷಾ ಅಕ್ರಮಗಳನ್ನು ತಡೆಗಟ್ಟಬೇಕು. 8. ಧಾರವಾಡದಲ್ಲಿ ಉದ್ಯೋಗಾಕಾಂಕ್ಷಿಗಳು ಹೆಚ್ಚಿರುವ ಜಯನಗರ, ಸಪ್ತಾಪುರ, ಶ್ರೀನಗರ, ಕಲ್ಯಾಣನಗರ ಭಾಗದಲ್ಲಿ ಅವರಿಗೆ ಅನುಕೂಲವಾಗುವಂತೆ ಇಂದಿರಾ ಕ್ಯಾಂಟೀನ್ ತೆರೆಯಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿ ರಾಜ್ಯ ಸಹ ಸಂಚಾಲಕ ಭವಾನಿ ಶಂಕರ್ ಎಸ್ ಗೌಡ, ಉದ್ಯೋಗ ಆಕಾಂಕ್ಷಿಗಳ ಹೋರಾಟ ಸಮಿತಿಯ ಜಿಲ್ಲಾ ಸಂಚಾಲಕ ವೀರೇಶ್ ನರೇಗಲ್, ಪ್ರೀತಿ ಸಿಂಗಾಡಿ, ನೀತುಶ್ರೀ, ಯಲ್ಲಪ್ಪ ದೊರೆ ಇದ್ದರು.





