ಭಾವನೆಗಳನ್ನು ದೃಶ್ಯ ರೂಪದಲ್ಲಿ ವ್ಯಕ್ತಪಡಿಸುವ ಪ್ರಬಲ ಮಾಧ್ಯಮವೇ ಚಿತ್ರಕಲೆ. ಚಿತ್ರಕಲೆಯ ಒಂದೊಂದು ಬಣ್ಣಗಳು ವಿಭಿನ್ನ ಸಂಕೇತಗಳನ್ನು ಸೂಚಿಸುತ್ತವೆ ಎಂದು ದೃಶ್ಯ ಕಲಾ ಇತಿಹಾಸಕಾರ ಕೆ.ವ್ಹಿ. ಸುಬ್ರಹ್ಮಣ್ಯಂ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಚಿತ್ರಕಲಾ ಪ್ರದರ್ಶನ ಸಭಾಭವನದಲ್ಲಿ ಆಯೋಜಿಸಿದ್ದ ಕಲಾವಿದ ವಿಶ್ವನಾಥ ಗುಗ್ಗರಿ ಅವರ ಚಿತ್ರಕಲಾ ಪ್ರದರ್ಶನದ ಪ್ರಾತ್ಯಕ್ಷಿಕೆ ಉದ್ಘಾಟಿಸಿ ಮಾತನಾಡುತ್ತಿದ್ದರು.
ಇಂದು ನೈಜ ಚಿತ್ರಕಲೆಗೆ ಅಧಿಕ ಬೇಡಿಕೆ ಇದೆ. ಚಿತ್ರಕಲೆಯು ಮನುಷ್ಯನನ್ನು ಸಂಸ್ಕಾರಗೊಳಿಸುತ್ತಿದ್ದು, ಕವಿ ರವೀಂದ್ರನಾಥ ಠಾಕೂರ ತಮ್ಮ ಶಾಂತಿನಿಕೇತನದಲ್ಲಿ ಮಕ್ಕಳ ಮನೋವಿಕಾಸಕ್ಕೆ ಚಿತ್ರಕಲೆ, ಸಂಗೀತದಂತಹ ಚಟುವಟಿಕೆಗೆ ಆದ್ಯತೆ ನೀಡಿದ್ದರು. ದೇಶದ ಹೆಸರಾಂತ ಚಿಂತಕರು, ತತ್ವಜ್ಞಾನಿಗಳು ಚಿತ್ರಕಲೆಯಿಂದ ಪ್ರಭಾವಿತರಾಗಿದ್ದರು ಎಂದು ಹೇಳಿದರು.
ಮುಖ್ಯ ಅತಿಥಿ ಡಿ.ಎಂ. ಬಡಿಗೇರ ಮಾತನಾಡಿ, ಚಿತ್ರಕಲಾ ರಸಋಷಿ ಎಂದು ಕರೆಯಲ್ಪಟ್ಟ ಎಂ.ಎ. ಚಟ್ಟಿ ಅವರ ಕಲಾಚಿತ್ರಗಳು ನಮ್ಮ ಮೇಲೆ ಪ್ರಭಾವ ಬೀರಿದ್ದು, ಅವರ ಚಿಕ್ಕ ಚಿಕ್ಕ ಕಲಾಕೃತಿಗಳು ಮನಸ್ಸಿಗೆ ಮುದ ನೀಡುವಂತವುಗಳಾಗಿದ್ದವು. ವಿಶ್ವನಾಥ ಗುಗ್ಗರಿ ತಮ್ಮ ಮನೋಜ್ಞ ಚಿತ್ರಗಳ ಮೂಲಕ ಹೊಸ ಲೋಕ ಸೃಷ್ಟಿಸಿದಂತಿವೆ ಎಂದರು.
ಹಿರಿಯ ಕಲಾವಿದ ವಿಶ್ವನಾಥ ಗುಗ್ಗರಿ ಮಾತನಾಡಿ, ಧಾರವಾಡದಂತಹ ಸಾಂಸ್ಕೃತಿಕ ನಗರಿಯಲ್ಲಿ ಚಿತ್ರಕಲಾವಿದರ ಕಲಾಪ್ರದರ್ಶನಕ್ಕೆ ಸುಸಜ್ಜಿತ ಆರ್ಟ್ ಗ್ಯಾಲರಿಯನ್ನು ಕ.ವಿ.ವ. ಸಂಘ ಸ್ಥಾಪಿಸಿ, ಕಲಾವಿದರಿಗೆ ಅನುಕೂಲ ಮಾಡಿದ್ದನ್ನು ಶ್ಲಾಘಿಸಿದರು. ಅಧ್ಯಕ್ಷತೆ ವಹಿಸಿದ್ದ ಕ.ವಿ.ವ. ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಮಾತನಾಡಿ, ವಿಶ್ವನಾಥ ಗುಗ್ಗರಿ ಕಲಾಕೃತಿಗಲು ನೋಡುವವರ ಮನಸ್ಸನ್ನು ಅರಳಿಸುವಂತಿವೆ. ಚಿತ್ರಕಲೆ ಲಲಿತ ಕಲೆಗಳಲ್ಲೇ ವಿಶಿಷ್ಟವಾದುದು. ಅದು ನಮ್ಮ ಸಂಸ್ಕೃತಿಯ ಪ್ರತೀಕ. ಮಕ್ಕಳ ಕನಸುಗಳಿಗೆ ಬಣ್ಣ ತುಂಬುವ ಈ ಕಲೆ ಅದ್ಭುತವಾದದ್ದು ಎಂದು ಹೇಳಿದರು.
ಎಫ್.ವ್ಹಿ. ಚಿಕ್ಕಮಠ ಸ್ವಾಗತಿಸಿ, ಪರಿಚಯಿಸಿದರು. ವೀರಣ್ಣ ಒಡ್ಡೀನ ನಿರೂಪಿಸಿದರು. ಶಿವಾನಂದ ಭಾವಿಕಟ್ಟಿ ವಂದಿಸಿದರು. ಕಾರ್ಯಕ್ರಮದಲ್ಲಿ ಶಂಕರ ಕುಂಬಿ, ಡಾ. ಜಿನದತ್ತ ಹಡಗಲಿ, ಡಾ. ಆನಂದ ಪಾಟೀಲ, ಎಸ್.ಕೆ. ಪತ್ತಾರ, ದ್ವಾರಪಾಲಕ, ಶಿ.ಮ. ರಾಚಯ್ಯನವರ, ಬಿ. ಮಾರುತಿ ಸೇರಿದಂತೆ ಚಿತ್ರಕಲಾ ವಿದ್ಯಾರ್ಥಿಗಳು, ಆಸಕ್ತರು ಇದ್ದರು.





