ಸಾಹಿತಿಗಳಾದ ಧಾರವಾಡದ ಪ್ರೊ.ಮಾಲತಿ ಪಟ್ಟಣಶೆಟ್ಟಿ ಮತ್ತು ಹಾವೇರಿಯ ಸತೀಶ ಕುಲಕರ್ಣಿ ಅವರು ದ.ರಾ.ಬೇಂದ್ರೆ ರಾಷ್ಟ್ರೀಯ ಟ್ರಸ್ಟ್‌ನ ‘ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿ’ಗೆ ಆಯ್ಕೆಯಾಗಿದ್ದು, ತಲಾ ₹50 ಸಾವಿರ ನಗದು, ಸ್ಮರಣಿಕೆಯನ್ನು ಪ್ರಶಸ್ತಿಯು ಒಳಗೊಂಡಿದೆ.
ಪ್ರೊ. ಮಾಲತಿ ಪಟ್ಟಣಶೆಟ್ಟಿ ಓರ್ವ ಕನ್ನಡದ ಲೇಖಕಿ, ಪ್ರಾಧ್ಯಾಪಕಿ ಹಾಗೂ ಸಾಹಿತ್ಯ ಸಂಘಟಕಿ. ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ, ವಿಶೇಷವಾಗಿ ಧಾರವಾಡದ ಜನತಾ ಶಿಕ್ಷಣ ಸಮಿತಿಯಲ್ಲಿ ಸೇವೆ ಸಲ್ಲಿಸಿದ ಇವರು ಆಂಗ್ಲ ಸಾಹಿತ್ಯದಲ್ಲಿ ಎಂ.ಎ. ಪದವಿ ಪಡೆದು, ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ, ಪ್ರಾಧ್ಯಾಪಕಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ ಇವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ಡಿ.ಎಸ್. ಕರ್ಕಿ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳು ಮತ್ತು ಇದೀಗ ‘ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ.
‘ಕಟ್ಟತ್ತೇವ ನಾವು ಕಟ್ಟತ್ತೇವ’ ಎಂಬ ಪ್ರಸಿದ್ಧ ಕ್ರಾಂತಿಗೀತೆಯ ಮೂಲಕ ಪರಿಚಿತರಾಗಿರುವ ಸತೀಶ ಕುಲಕರ್ಣಿ ಅವರು ಧಾರವಾಡದಲ್ಲಿ ಜನಿಸಿ, ಬಂಡಾಯ ಸಾಹಿತ್ಯದ ಗಟ್ಟಿ ಧ್ವನಿಯಾಗಿದ್ದು, ಹಾವೇರಿ ಜಿಲ್ಲೆಯ ಸಾಹಿತ್ಯಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ. ದಲಿತ-ಬಂಡಾಯ ಕವಿ, ನಾಟಕಕಾರ, ನಟ ಮತ್ತು ನಿರ್ದೇಶಕರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಸಾಹಿತ್ಯ ಮತ್ತು ರಂಗಭೂಮಿಗೆ ಸೇವೆ ಸಲ್ಲಿಸಿರುವ ಅವರು 2023ರ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳಿಗೆ ಪಾತ್ರರಾಗಿದ್ದು, ಇದೀಗ ‘ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ.
ಇದನ್ನೂ ಓದಿ ಹುಬ್ಬಳ್ಳಿ | ಕನಸಿನ ಮನೆ ಪಡೆದವರ ಮನದಾಳದ ಮಾತುಗಳು…
ಜ. 31ರಂದು ನಡೆಯುವ ಬೇಂದ್ರೆ ಜನ್ಮದಿನೋತ್ಸವ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





