ನಗರದಲ್ಲಿ ಆಧಾರ್ ಸೇವಾ ಕೇಂದ್ರ ಕಾರ್ಯನಿರ್ವಹಿಸುತ್ತಿದ್ದ ಸೌಲಭ್ಯ ಮುಂದುವರೆಸುವಂತೆ ಒತ್ತಾಯಿಸಿ ಧಾರವಾಡ ಧ್ವನಿ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ನಗರದ ಕಿತ್ತೂರ ಚೆನ್ನಮ್ಮ ಪಾರ್ಕ್ ಬಳಿಯ ಮಂಡಿ ಪ್ಲಾಜಾದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ನಡೆಸಿ ಮನವಿ ಸಲ್ಲಿಸಿದರು. ಮಂಡಿ ಪ್ಲಾಜಾ ಕಟ್ಟಡದಲ್ಲಿ ಆಧಾರ್ ಸೇವಾ ಕೇಂದ್ರವು ಕಾರ್ಯನಿರ್ವಹಿಸುತ್ತಿತ್ತು. ಆದರೆ, ಆಧಾರ್ ಸೇವಾ ಕೇಂದ್ರವು ಕಳೆದ 2025ರ ನವಂಬರ್ 28 ರಿಂದ ದಿಢೀರ್ ಆಗಿ ಸ್ಥಗಿತಗೊಂಡು, ಇದೀಗ ಹುಬ್ಬಳ್ಳಿಯ ಕೇಶ್ವಾಪೂರಕ್ಕೆ ಸ್ಥಳಾಂತರಗೊಂಡಿದೆ. ಇದರಿಂದ ಧಾರವಾಡ ನಗರ, ಗ್ರಾಮೀಣ ಭಾಗ ಮಾತ್ರವಲ್ಲದೇ ಪಕ್ಕದ ತಾಲೂಕುಗಳ ಜನರು ಪರದಾಡುವಂತಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.
ನಗರದಲ್ಲಿ ಅಂಚೆ ಕಚೇರಿ, ಕೆಲವು ಖಾಸಗಿ ಆನ್‌ಲೈನ್ ಕೇಂದ್ರಗಳಲ್ಲಿ ಅಧಾರ ಕಾರ್ಡ್ ಸಂಬಂಧಿತ ಸೇವೆಗಳು ಸಿಗುತ್ತಿವೆ. ಆದರೆ, ದೊಡ್ಡ ಪ್ರಮಾಣದಲ್ಲಿ ಆಗಮಿಸುವ ಜನರಿಗೆ ಸಕಾಲದಲ್ಲಿ ಸೇವೆ ಲಭ್ಯವಾಗುತ್ತಿಲ್ಲ. ಅಲ್ಲದೇ ಸೇವೆಗೆ ಅಧಿಕ ದರ ನಿಗದಿಪಡಿಸಿರುವುದರಿಂದ ಜನಸಾಮಾನ್ಯರ ಸುಲಿಗೆಗೆ ಅವಕಾಶ ಸಿಕ್ಕಂತಾಗಿದೆ. ಆದ್ದರಿಂದ ಆಧಾರ್ ಕೇಂದ್ರ ಆರಂಭಿಸುವ ಅಗತ್ಯವಿದೆ. ವಿಳಂಬ ಮಾಡದೇ ಅಗತ್ಯ ಕ್ರಮ ಕೈಕೊಳ್ಳುವ ದಿಸೆಯಲ್ಲಿ ಕಾರ್ಯಪ್ರವೃತ್ತರಾಗಬೇಕು. ಈ ಕುರಿತು ಸಂಬಂಧಿಸಿದವರೊಂದಿಗೆ ಚರ್ಚಿಸಿ, ಯಾವುದೇ ಗೊಂದಲಗಳಿಗೆ ಅವಕಾಶ ನೀಡದೇ ಮನವಿಗೆ ಸ್ಪಂದಿಸಬೇಕು. ಒಂದು ವೇಳೆ ಶೀಘ್ರದಲ್ಲೇ ಇಲ್ಲಿವರೆಗೆ ಸೇವೆ ನೀಡುತ್ತಿದ್ದ ಪ್ರಮಾಣದ ಸೇವಾ ಕೇಂದ್ರ ಆರಂಭಿಸದಿದ್ದರೆ ಹೋರಾಟ ಹಮ್ಮಿಕೊಳ್ಳುವುದು ಅನಿವಾರ್ಯವಾಗಲಿದೆ ಎಂದು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ ಮನವಿಯಲ್ಲಿ ಎಚ್ಚರಿಸಲಾಗಿದೆ.
ಇದನ್ನೂ ಓದಿ: ಧಾರವಾಡ | ಮರ್ಯಾದೆಗೇಡು ಹತ್ಯೆ ನಿಷೇಧ ಕಾನೂನು ಜಾರಿಗೆ ಜನಪರ ಸಂಘಟನೆಗಳ ಒತ್ತಾಯ
ಈ ಸಂದರ್ಭದಲ್ಲಿ ಧಾರವಾಡ ಧ್ವನಿ ಅಧ್ಯಕ್ಷ ಈಶ್ವರ ಶಿವಳ್ಳಿ, ಬಸವರಾಜ ಜಾಧವ, ಗೌರಮ್ಮ ಬರೋಗಿ, ಶಿವಾನಂದ ಕವಳಿ, ಮಂಜು ನಡೆಟ್ಟಿ, ಸಂತೋಷ ಪಟ್ಟಣಶೆಟ್ಟಿ, ಭೀಮಪ್ಪ ಕಾಸಾಯಿ, ಶರಣಗೌಡ ಗಿರಡ್ಡಿ, ವೆಂಕಟೇಶ ರಾಯ್ಕರ, ಬಸವರಾಜ ಪೊಮೋಜಿ, ಇಮ್ರಾನ್ ಪಾಳಿಕೋಟಿ, ಪರಮೇಶ್ವರ ಉಳಿವಣ್ಣವರ, ರಾಜೇಶ ಮನಗುಂಡಿ, ಶೇಖಪ್ಪ ಕಟ್ಟಿಮನಿ ಇತರರಿದ್ದರು.





