ಧಾರವಾಡ ರಂಗಾಯಣ ನಿರ್ದೇಶಕ, ಹಿರಿಯ ರಂಗಭೂಮಿ ಕಲಾವಿದ ಮತ್ತು ಹಾಸ್ಯ ಚಿತ್ರನಟ ರಾಜು ತಾಳಿಕೋಟಿ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.
ಉಡುಪಿಯಲ್ಲಿ ಚಲನಚಿತ್ರದ ಚಿತ್ರೀಕರಣ ಮುಗಿದ ನಂತರ ರೂಮ್ ನಲ್ಲಿ ವಿಶ್ರಾಂತಿ ತೆಗೆದುಕೊಳ್ಳುವಾಗ ಹೃದಯಘಾತವಾಗಿದೆ. ನಂತರ ಮಣಿಪಾಲ್ ಆಸ್ಪತ್ರೆಗೆ ಕರೆದೋಯ್ಯಲಾಗಿದೆ. ವೈದ್ಯರು ಪರೀಕ್ಷಿಸಿ ನೋಡಲು ರಾಜು ತಾಳಿಕೋಟಿ ಇನ್ನಿಲ್ಲ ಎಂದು ದೃಢಪಡಿಸಿದ್ದಾರೆ.
ಕಲಿಯುಗದ ಕುಡುಕ, ಕುಡುಕರ ಸಾಮ್ರಾಜ್ಯ ಎಂಬ ಹಾಸ್ಯ ನಾಟಕಗಳ ಮೂಲಕ ಖ್ಯಾತಿ ಹೊಂದಿದ್ದ ರಾಜು ತಾಳಿಕೋಟಿ, ಮೂಲತಃ ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಚಿಕ್ಕಸಿಂದಗಿ ಗ್ರಾಮದವರು. ಹಲವು ಹಾಸ್ಯ ನಾಟಕ ಮತ್ತು ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇವರ ಮೂಲ ಹೆಸರು ರಾಜೇಸಾಬ ಮಕ್ತುಮಸಾಬ್ ತಾಳಿಕೋಟಿ. ಪ್ರಸ್ತುತ ವಿಜಯಪುರ ಜಿಲ್ಲೆಯ ತಾಳಿಕೋಟಿಯಲ್ಲಿ ವಾಸವಾಗಿದ್ದರು. ಇವರು ಖಾಸ್ಗತೇಶ್ವರ ನಾಟಕ ಮಂಡಳಿ ಮೂಲಕ ರಂಗಭೂಮಿಗೆ ಪ್ರವೇಶ ಮಾಡುತ್ತಾರೆ. ಬಿಗ್ ಬಾಸ್-7 ರ ಸ್ಪರ್ಧಿ ಕೂಡ ಆಗಿದ್ದರು. ಇತ್ತೀಚಿಗೆ ಹಲವು ಚರ್ಚೆ ಮತ್ತು ವಿರೋಧಗಳ ನಡುವೆಯೂ ಧಾರವಾಡ ರಂಗಾಯಣ ನಿರ್ದೇಶಕರಾಗಿ ಆಯ್ಕೆ ಆಗಿದ್ದರು.
ಈ ಸುದ್ದಿ ಓದಿದ್ದೀರಾ? ಧಾರವಾಡ | ಆರ್‌ಎಸ್‌ಎಸ್ ಪಥಸಂಚಲನ; ಮಾರ್ಗ ಬದಲಾವಣೆಯಿಂದ ಪ್ರಯಾಣಿಕರು ಪರದಾಟ
ನಾಟಕ ರಂಗದಿಂದ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ರಾಜು ತಾಳಿಕೋಟಿ ಬಣ್ಣದ ಲೋಕಕ್ಕೆ ಬರುವ ಮೊದಲೇ ಹಾಸ್ಯ ನಾಟಕಗಳ ಕ್ಯಾಸೇಟಗಳ ಮೂಲಕ ಜನಪ್ರಿಯರಾಗಿದ್ದರು. ನಾಟಕಗಳಲ್ಲಿ ಅವರು ನಿರ್ವಹಿಸುತ್ತಿದ್ದ ಹಾಸ್ಯ ಪಾತ್ರಗಳು ಮತ್ತು ಸಣ್ಣ ಪುಟ್ಟ ಪಾತ್ರಗಳೂ ಸಹ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದ್ದವು. ಯಾವುದೇ ಸಂಭಾಷಣೆಯಲ್ಲಾಗಲಿ ಉತ್ತರ ಕರ್ನಾಟಕದ ಭಾಷಾ ಶೈಲಿಯನ್ನು ಬಿಟ್ಟುಕೊಡುತ್ತಿರಲಿಲ್ಲ. ರಂಗಾಯಣದ ಮೂಲಕ ಮರೆಯಾಗುತ್ತಿರುವ ನಾಟಕ ಸಂಸ್ಕೃತಿಯನ್ನು ಇನ್ನಷ್ಟು ಮುನ್ನಲೆಗೆ ತರುವ, ಪ್ರೇಕ್ಷಕರಲ್ಲಿ ನಾಟಕದ ಅಭಿರುಚಿ ಹೆಚ್ಚಿಸುವ ಉದ್ದೇಶದಿಂದ ಹಲವು ನಾಟಕ ಪ್ರದರ್ಶನಗಳನ್ನು ಹಮ್ಮಿಕೊಳ್ಳುವ ಕನಸನ್ನು ಹೊತ್ತಿದ್ದರು.





