ಮಹಿಳೆಯರು ಮತ್ತು ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯ ಖಂಡಿಸಿ AIMSS ಸಂಘಟನೆ ವತಿಯಿಂದ ಧಾರವಾಡದ ವಿವೇಕಾನಂದ ವೃತ್ತದಲ್ಲಿ ಮಹಾನ್ ವ್ಯಕ್ತಿಗಳ ಸೂಕ್ತಿ ಮತ್ತು ಛಾಯಾಚಿತ್ರ ಪ್ರದರ್ಶನ, ಪುಸ್ತಕ ಬಿಡುಗಡೆ ಹಾಗೂ ಸಹಿ ಸಂಗ್ರಹ ಆಂದೋಲನ ನಡೆಯಿತು.
ಇಡೀ ದೇಶವನ್ನೇ ತಲ್ಲಣಗೊಳಿಸಿದ ನಿರ್ಭಯಾ ಘಟನೆ ಇಂದಿಗೂ ಜನರ ಮನಸಿನಲ್ಲಿ ಅಚ್ಚಳಿಯದಂತೆ ಉಳಿದಿದೆ. ಪ್ರತಿನಿತ್ಯ ಅತ್ಯಾಚಾರ, ದೌರ್ಜನ್ಯದ ಕ್ರತ್ಯಗಳು ನಡೆಯುತ್ತಿವೆ. ನಾವು ನಾಗರಿಕ ಸಮಾಜದಲ್ಲಿದ್ದೇವೆಯೇ? ಎನ್ನುವ ಪ್ರಶ್ನೆ ಪ್ರತಿಯೊಬ್ಬರನ್ನು ಕಾಡುತ್ತಿದ್ದು, ನಾಲ್ಕು ತಿಂಗಳ ಕಾಲ ರಾಜ್ಯವ್ಯಾಪಿ ನಡೆಯುತ್ತಿರುವ ಸಹಿ ಸಂಗ್ರಹ ಆಂದೋಲನದ ಭಾಗವಾಗಿ ಧಾರವಾಡ ಜಿಲ್ಲಾ ಸಮಿತಿಯು ನಗರದ ಸುಭಾಷ್ ರಸ್ತೆ ಬಳಿಯ ವಿವೇಕಾನಂದ ವೃತ್ತದಲ್ಲಿ ಇಡೀ ದಿನ ಮಹಾನ್ ವ್ಯಕ್ತಿಗಳ ಸೂಕ್ತಿ ಮತ್ತು ಛಾಯಾಚಿತ್ರ ಪ್ರದರ್ಶನ, ವಿಶೇಷ ಬುಲೆಟಿನ್ ಬಿಡುಗಡೆ ಹಾಗೂ ಸಹಿ ಸಂಗ್ರಹ ಕಾರ್ಯಕ್ರಮ ಹಮ್ಮಿಕೊಂಡಿತ್ತು.
ಈ ವೇಳೆ ಜಿಲ್ಲಾಧ್ಯಕ್ಷೆ ಮಧುಲತಾ ಗೌಡರ್ ಮಾತನಾಡಿ, “ಸಮಾಜದಲ್ಲಿ ಸೂಕ್ಷ್ಮ ಸಂವೇದನೆ ಕಣ್ಮರೆಯಾಗುತ್ತಿದೆ. ನೈತಿಕ-ಮಾನವೀಯ ಮೌಲ್ಯಗಳ ಕುಸಿತ ಆಘಾತವನ್ನುಂಟು ಮಾಡುತ್ತಿದೆ. ಸಾಂಸ್ಕೃತಿಕ ಬಿಕ್ಕಟ್ಟಿನ ಮೊದಲ ಬಲಿಪಶು ಮಹಿಳೆ. ಕೊಳೆತಿರುವ ಕುಸಂಸ್ಕೃತ ವ್ಯವಸ್ಥೆ ಹೆಣ್ಣುಮಕ್ಕಳನ್ನು ಅತ್ಯಾಚಾರ, ಆಸಿಡ್ ದಾಳಿ ಸೇರಿದಂತೆ ವಿವಿಧ ದೌರ್ಜನ್ಯಗಳಿಗೆ ತುತ್ತಾಗಿಸಿದೆ. ಹಲವಾರು ಪದ ಪುಂಜಗಳಿಂದ ಪೂಜಿಸಲ್ಪಡುವ ಈ ದೇಶದಲ್ಲಿ ಮಹಿಳೆಯ ಸ್ಥಿತಿ ಅತ್ಯಂತ ಹೀನಾಯವಾಗಿದೆ. ಮಹಿಳಾ ವಿಮೋಚನೆ ಕೇವಲ ಭ್ರಮೆಯ ಮಾತಾಗಿದೆ. ವಿಜ್ಞಾನ, ಕ್ರೀಡೆ, ಕಲೆ, ಸಾಹಿತ್ಯ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಮಹಿಳೆ ತನ್ನ ಛಾಪನ್ನು ಮೂಢಿಸಿದ್ದಾಳೆ. ಹೀಗಿದ್ದಾಗ್ಯೂ ಆಕೆಯನ್ನು ನೋಡುವ ದೃಷ್ಟಿಕೋನ ಮಾತ್ರ ಬದಲಾಗಿಲ್ಲ. ಅವಳ ಮೇಲಿನ ಅಗೌರವ, ಅಪರಾಧಗಳು ತಗ್ಗಿಲ್ಲ. ನೈಜ ಘನತೆ – ಗೌರವಕ್ಕಾಗಿ ಮಹಿಳೆಯರು, ಜನಸಾಮಾನ್ಯರು ಮತ್ತಷ್ಟು ಪ್ರಜ್ಞಾವಂತರಾಗಿ, ಸಂಘಟಿತರಾಗಿ ಇಂತಹ ಅಮಾನವೀಯ ವ್ಯವಸ್ಥೆಯ ವಿರುದ್ಧ ರಣಕಹಳೆ ಊದಬೇಕಿದೆ” ಎಂದು ಕರೆ ನೀಡಿದರು.
ಸಾಮಾಜಿಕ ಮಾಧ್ಯಮಗಳಲ್ಲಿನ ಅಶ್ಲೀಲತೆ, ಕ್ರೌರ್ಯ, ಲಾಭಾಧಾರಿತ ಬಂಡವಾಳಶಾಹಿ ವ್ಯವಸ್ಥೆಯ ವಿಕೃತಿಯಿಂದಾಗಿ ಮಹಿಳೆ ಹಾಡಹಗಲೇ ಶೋಷಣೆಗಳಿಗೆ ಒಳಗಾಗುತ್ತಿದ್ದಾಳೆ. ಹಳೆಯ ಊಳಿಗಮಾನ್ಯ ಮೌಲ್ಯಗಳು, ಪುರುಷ ಪ್ರಧಾನ ಮನಸ್ಥಿತಿಯ ಬದಲಾಗಿ ಹೊಸ ನೈತಿಕ, ಪ್ರಜಾತಾಂತ್ರಿಕ ಮೌಲ್ಯಗಳನ್ನು ಸಮಾಜದಲ್ಲಿ ಸ್ಥಾಪಿಸಬೇಕಿದೆ. ಮಹಾನ್ ವ್ಯಕ್ತಿಗಳ ಜೀವನ ಆದರ್ಶಗಳನ್ನು ಯುವಜನಾಂಗದ ಮುಂದಿಡಬೇಕಿದೆ. ಆ ನಿಟ್ಟಿನಲ್ಲಿ ಬಲಿಷ್ಠ ಜನಚಳುವಳಿಯ ಅವಶ್ಯಕತೆಯಿದೆ. AIMSS ಆ ದಿಕ್ಕಿನಲ್ಲಿ ಶ್ರಮಿಸುತ್ತಿದೆ. ಪ್ರತಿಯೊಬ್ಬರೂ ಈ ಪ್ರಯತ್ನಕ್ಕೆ ಕೈಜೋಡಿಸಬೇಕೆಂದು ಕೇಳಿಕೊಂಡರು.
ಇದನ್ನೂ ಓದಿ: ಧಾರವಾಡ | ಮರ್ಯಾದೆಗೇಡು ಹತ್ಯೆ ಪ್ರಕರಣ: ಗ್ರಾ.ಪಂ ಪಿಡಿಒ ನಾಗರಾಜ ಗಿರಿಯಪ್ಪ ಅಮಾನತು
ಜಿಲ್ಲಾ ಕಾರ್ಯದರ್ಶಿ ಗಂಗೂಬಾಯಿ ಕೋಕರೆ ಪ್ರಾಸ್ತಾವಿಕವಾಗಿ ಮಾತನಾಡಿ, “ನೈಜ ಸಮಾನತೆಯ ಹೊಸ ಸಮಾಜವನ್ನು ಕಟ್ಟುವ ಉದ್ದೇಶದಿಂದ ಮತ್ತು ಜನ ವಿರೋಧಿ, ಮಹಿಳಾ ವಿರೋಧಿ ಸರ್ಕಾರಗಳ ಕಣ್ಣು ತೆರೆಸುವ ಉದ್ದೇಶದಿಂದ ದೇಶದಾದ್ಯಂತ ಹಾಗೂ ರಾಜ್ಯದಾದ್ಯಂತ ಪ್ರತಿಭಟನಾ ಸಭೆ, ಸಮಾವೇಶ, ಮೆರವಣಿಗೆ, ಸಹಿಸಂಗ್ರಹ ಮೊದಲಾದ ರೂಪಗಳಲ್ಲಿ ಕಾರ್ಯಕ್ರಮಗಳನ್ನು ರೂಪಿಸಿದ್ದು, ಧಾರವಾಡ ಜಿಲ್ಲಾ ಸಮಿತಿಯು ಸಕ್ರಿಯವಾಗಿ ನಾಲ್ಕು ತಿಂಗಳ ಕಾಲ ವಿವಿಧ ರೀತಿಯ ಚಟುವಕಟಿಕೆಗಳನ್ನು ಹಮ್ಮಿಕೊಂಡಿದೆ” ಎಂದರು.
ಈ ಸಂದರ್ಭದಲ್ಲಿ ಎಐಎಮ್ಎಸ್ಎಸ್ ನ ವಿಶೇಷ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಜಿಲ್ಲಾ ಉಪಾಧ್ಯಕ್ಷೆ ದೇವಮ್ಮ ದೇವತ್ಕಲ್, ಜಿಲ್ಲಾ ಸಮಿತಿ ಸದಸ್ಯರಾದ ಅನುಸೂಯ ಶಾನವಾಡ, ಪವಿತ್ರಾ ಮಾಳಾಪುರ, ಮುರಗಮ್ಮ ಗರಗದ, ವಿಜಯಲಕ್ಷ್ಮಿ ಹಿರೇಮಠ, ಕಾಶವ್ವ ತಲ್ವಾರ್, ಮಲ್ಲಮ್ಮ ಶಿರಗುಪ್ಪಿ, ಫಕೀರವ್ವ ಅರೇರ ಉಪಸ್ಥಿತರಿದ್ದರು.





