ವಿದ್ಯಾರ್ಥಿಗಳು ಕೇವಲ ಪಠ್ಯಪುಸ್ತಕಕ್ಕೆ ಸೀಮಿತವಾಗದೇ ಶಾಲಾ ಚಟುವಟಿಕೆಯಲ್ಲಿ ಪಾಲ್ಗೊಂಡು ನಾಯಕತ್ವದ ಗುಣ ಬೆಳೆಸಿಕೊಳ್ಳಬೇಕು. ಜ್ಞಾನಾರ್ಜನೆ; ಆದರ್ಶ ವಿದ್ಯಾರ್ಥಿಯ ಸೊತ್ತು. ವಿದ್ಯಾರ್ಥಿಗಳು ಜೀವನದಲ್ಲಿ ಕೀಳು ಅಭಿರುಚಿಗಳನ್ನು ತ್ಯಜಿಸಿ ಒಳ್ಳೆಯ ಹವ್ಯಾಸ ಬೆಳೆಸಿಕೊಳ್ಳಬೇಕು. ಈ ದೇಶದ ಉಜ್ವಲ ಭವಿಷ್ಯ ನಿಮ್ಮನ್ನೆ ಅವಲಂಭಿಸಿದೆ ಎಂದು ನಿವೃತ್ತ ಮುಖ್ಯಾಧ್ಯಾಪಕ ವೀರಣ್ಣ ಒಡ್ಡೀನ ಹೇಳಿದರು.
ಮಾಳಾಪೂರದ ಗುಬ್ಬಚ್ಚಿಗೂಡು ಶಿಕ್ಷಣ ಸಂಸ್ಥೆಯಲ್ಲಿ ಮಕ್ಕಳ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಾ, ವರ್ತಮಾನ ಕಾಲದ ವಿದ್ಯಾರ್ಥಿಗಳಾದ ತಾವು ಮುಂದೆ ಭವಿಷ್ಯತ್ ಕಾಲದ ನಾಯಕರಾಗುವವರು. ದೇಶದ ನಿಜವಾದ ಸಂಪತ್ತು ನೀವೇ. ನಿಮ್ಮ ಬಾಲ್ಯ ಸಂತಸದಾಯಕವಾಗಿರಬೇಕು. ಮಕ್ಕಳು ಈ ನಾಡಿನ ಭಾಗ್ಯೋದಯದ ಶಿಲ್ಪಿಗಳು. ವಿದ್ಯಾರ್ಥಿ ಜೀವನ ಒಂದು ತಪಸ್ಸು ಎಂದು ತಿಳಿದು ಸಮಯ ಪ್ರಜ್ಞೆಯೊಂದಿಗೆ ಅಧ್ಯಯನ ಮಾಡಬೇಕು. ಶಾಲೆ ನನ್ನದು, ಗುರುಗಳು ನನ್ನವರು ಎಂಬ ಅಭಿಮಾನ ನಿಮ್ಮಲ್ಲಿರಬೇಕು.ಕಲಿಸಿದ ಗುರುಗಳನ್ನು, ಪಾಲಕರನ್ನು, ಹಿರಿಯರನ್ನು ಗೌರವದಿಂದ ಕಾಣಬೇಕೆಂದು ಹೇಳಿದರು.
ಸನ್ಮಾನ ಸ್ವೀಕರಿಸಿದ ಸುನಿತಾ ಗುಡ್ಡಿನ ಮಾತನಾಡಿ, ರಾಷ್ಟ್ರ ನಾಯಕರ ಜೀವನ ಶೈಲಿಯೇ ವಿದ್ಯಾರ್ಥಿಗಳಿಗೆ ಮಾದರಿ. ಅವರ ಜೀವನದ ಮೌಲ್ಯಗಳು ನಿಮ್ಮ ವ್ಯಕ್ತಿತ್ವ ವಿಕಾಸದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ವಿದ್ಯೆ ನೀಡಿದ ಸಂಸ್ಥೆಯ ಋಣವನ್ನು ವಿದ್ಯಾರ್ಥಿಗಳು ತೀರಿಸಬೇಕು ಎಂದು ತಿಳಿಸಿದರು.
ಇದನ್ನೂ ಓದಿ ಧಾರವಾಡ | ಆರ್ಥಿಕವಾಗಿ ಕಷ್ಟದಲ್ಲಿರುವ ವಿದ್ಯಾವರ್ಧಕ ಸಂಘಕ್ಕೆ ಸರಕಾರ ಸೌಲಭ್ಯ ಒದಗಿಸಲಿ: ದಾನಪ್ಪ ಕಬ್ಬೇರ
ಗುಬ್ಬಚ್ಚಿ ಗೂಡು ಶಾಲೆಯ ಅಧ್ಯಕ್ಷ ಶಂಕರ ಹಲಗತ್ತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಮಕ್ಕಳಿಂದ ವೈವಿಧ್ಯಮಯವಾದ ಕಾರ್ಯಕ್ರಮಗಳು ಜರುಗಿದವು. ವಿಜ್ಞಾನ ನಾಟಕದಲ್ಲಿ ಸಾಧನೆ ಮಾಡಿದ ಅಪ್ರೋಜ ಜಾಲಗಾರ, ಚಂದನಾ ದಿವಟಗಿ, ಶಿಲ್ಪಾ ನಲವಡಿ, ಶಿವಾನಂದ ದೊಡಮನಿ, ತೇಜಸ್ವಿನಿ ಅವರನ್ನು ಸನ್ಮಾನಿಸಿದರು. ಮುಖ್ಯ ಶಿಕ್ಷಕಿ ಲಕ್ಷ್ಮೀ ಜಾಧವ ಸ್ವಾಗತಿಸಿದರು. ದಿಲ್‌ಷಾದ ಕಳಮಡ್ಡಿ ನಿರ್ವಹಿಸಿದರು. ಸಿಕಂದರ ದಂಡಿನ ವಂದಿಸಿದರು. ಕಾರ್ಯಕ್ರಮದಲ್ಲಿ ಭಾರತಿ ಸಾಬಳೆ, ಲಕ್ಶ್ಮಣ ತಿಕ್ಕುಂಡಿ, ವಿದ್ಯಾರ್ಥಿಗಳು, ಶಿಕ್ಷಕರು, ಮಕ್ಕಳ ಪಾಲಕರು ಇದ್ದರು.





