ಅನುವಾದ ಮಾಡುವವರಿಗೆ ಓದುವ ಹವ್ಯಾಸವಿರಬೇಕು. ಅನೇಕ ಯುವಕರು ಇಂದು ಅನುವಾದ ಕೃಷಿ ಮಾಡುತ್ತಿದ್ದು ಅನುವಾದದ ಭವಿಷ್ಯ ಉಜ್ವಲವಾಗುವಂತಿದೆ ಎಂದು ಕರ್ನಾಟಕ ವಿದ್ಯಾವರ್ಧಕ ಸಂಘವು 70ನೇ ರಾಜ್ಯೋತ್ಸವದ ಅಂಗವಾಗಿ ನಾಡಹಬ್ಬ-2025 ನಿಮಿತ್ತ ಆಯೋಜಿಸಿರುವ ‘ಧರೆಗೆ ದೊಡ್ಡವರು’ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿದ ಬುಕರ್ ಪ್ರಶಸ್ತಿ ವಿಜೇತೆ ದೀಪಾ ಭಾಸ್ತಿ ಮಾತನಾಡಿದರು.
ನಾನು ಪೂರ್ಣಾವಧಿ ಲೇಖಕಿ. ಆದರೆ ಅರೆಕಾಲಿಕ ಅನುವಾದಕಿ. ನಮ್ಮ ರಾಜ್ಯದಲ್ಲಿ ಅನೇಕ ಕನ್ನಡಗಳಿದ್ದು ಎಲ್ಲಾ ಕನ್ನಡಗಳನ್ನು ಗೌರವಿಸುವಂತಾಗಬೇಕೆ ವಿನಹ ನಿರ್ಲಕ್ಷಿಸಬಾರದು. ದಕ್ಷಿಣ ಕರ್ನಾಟಕ ಅನೇಕ ಸಾಹಿತ್ಯ ಕೃತಿಗಳು ಅನುವಾದವಾದಂತೆ ಉತ್ತರ ಕರ್ನಾಟಕದ ಕೃತಿಗಳು ಅನುವಾದಗೊಳ್ಳಬೇಕಾಗಿದೆ. ಉತ್ತರ ಕರ್ನಾಟಕದ ಅನೇಕ ಸಾಹಿತ್ಯ ಕೃತಿಗಳನ್ನು ನಾನು ಓದಿದ್ದೇನೆ. ಅವು ಉತ್ಕೃಷ್ಟವಾದವುಗಳಾಗಿವೆ. ಆದರೆ ನನಗೆ ಉತ್ತರ ಕರ್ನಾಟಕ ಭಾಷೆ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಅವುಗಳನ್ನು ಅನುವಾದ ಮಾಡಲು ಸಾಧ್ಯವಾಗಿಲ್ಲ. ಸರಿಯಾಗಿ ಅರ್ಥಮಾಡಿಕೊಳ್ಳುವವರು ಅನುವಾದಕ್ಕೆ ಮುಂದು ಬಂದರೆ ಉತ್ತರ ಕರ್ನಾಟಕದ ಗಟ್ಟಿ ಭಾಷೆ ಅನ್ಯರಿಗೂ ತಿಳಿಯುವಂತಾಗುತ್ತದೆ.
ಕನ್ನಡ ಭಾಷೆ ಸತ್ವಯುತವಾದ ಭಾಷೆ ಅದಕ್ಕೆ ತನ್ನದೇ ಆದ ಪರಂಪರೆ ಇದೆ. ಭಾಷೆ ಉಳಿಯಬೇಕಾದರೆ ಅದರ ಬಳಕೆಯಾಗಿ ಬೆಳೆಯಲು ಸಾಧ್ಯ. ಆಧುನಿಕತೆಗೆ ತಕ್ಕಂತೆ ಹೊಸ ತಂತ್ರಜ್ಞಾನ ಬಳಸಿಕೊಂಡಲ್ಲಿ ಕನ್ನಡ ಭಾಷೆ ಸಮೃದ್ಧವಾಗಿ ಬೆಳೆಯಲು ಸಾಧ್ಯ. ತಂತ್ರಜ್ಞಾನದ ಬಳಕೆಯಾಗದಿದ್ದರೆ ಭಾಷೆ ಸಮೃದ್ಧವಾಗಲಾರದು. ಕ.ವಿ.ವ. ಸಂಘವು ನನ್ನನ್ನು ಸನ್ಮಾನಿಸಿ, ಗೌರವಿಸುತ್ತಿರುವುದು ಅಭಿಮಾನದ ಸಂಗತಿ ಎಂದು ತಮ್ಮ ಹರ್ಷ ವ್ಯಕ್ತಪಡಿಸಿದರು.
‘ದಿ. ಹಿಂದೂ’ ಪತ್ರಿಕೆಯ ಬೆಳಗಾವಿ ವರದಿಗಾರ ಹೃಷಿಕೇಶ ಬಹದ್ದೂರ್ ದೇಸಾಯಿ ದೀಪಾ ಭಾಸ್ತಿ ಅವರ ಬದುಕು-ಬರಹ ಕುರಿತು ಮಾತನಾಡಿ, ದೀಪಾ ಭಾಸ್ತಿ ಅವರು ಅಂತಾರಾಷ್ಟ್ರೀಯ ಬುಕರ್ ಪ್ರಶಸ್ತಿ ಪಡೆದ ಮೊದಲ ಭಾರತೀಯ ಅನುವಾದಕರು. ಪಾಶ್ಚಾತ್ಯವಲ್ಲದ ಮೊದಲ ಅನುವಾದಕಿ. ನಾನು ಮತ್ತು ದೀಪಾ ಭಾಸ್ತಿ ಪತ್ರಿಕಾ ವರದಿಗಾರರಾಗಿ ಕೆಲಸ ಮಾಡಿದ ಅನುಭವವಿದ್ದವರು. ಭಾನು ಮುಷ್ತಾಕ್ ಅವರ ‘ಹೃದಯದ ಹಣತೆ’ ಕಥಾ ಸಂಕಲನ ಅನುವಾದಿಸಿ ಅಂತಾರಾಷ್ಟ್ರೀಯ ಖ್ಯಾತಿಗೆ ಭಾಜನರಾದವರು. ಕನ್ನಡದ ಹಲವು ಲೇಖಕರ ಕೃತಿಯನ್ನು ಸಹ ಅವರು ಇಂಗ್ಲೀಷಗೆ ಅನುವಾದಿಸಿದ್ದಾರೆ. ಮಕ್ಕಳ ಸಾಹಿತ್ಯ ರಚನಾ ಕೃಷಿಯನ್ನು ಮಾಡಿದ್ದಾರೆ. ಸುಮಾರು 40ಕ್ಕೂ ಹೆಚ್ಚು ಲೇಖನಗಳನ್ನು ಅಂಕಣಗಳನ್ನು ವಿದೇಶಿ ಪತ್ರಿಕೆಗೆ ಬರೆದ ಕೀರ್ತಿ ಅವರದಾಗಿದೆ ಎಂದು ಹೇಳಿದರು.
ಇದನ್ನೂ ಓದಿ ಧಾರವಾಡ | ಅಂಗನವಾಡಿಗೆ ಡಿಸಿ, ಸಿಇಓ ದಿಢೀರ್ ಭೇಟಿ; ಇಲಾಖೆ ಯೋಜನೆಗಳ ಪರಿಶೀಲನೆ
ಸತೀಶ ತುರಮರಿ ಸ್ವಾಗತಿಸಿದರು. ಡಾ. ಜಿನದತ್ತ ಹಡಗಲಿ ಸನ್ಮಾನ ಫಲಕ ಓದಿದರು. ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿ, ನಿರೂಪಿಸಿ, ವಂದಿಸಿದರು. ಕಾರ್ಯಕ್ರಮದಲ್ಲಿ ಶಂಕರ ಕುಂಬಿ, ಶಿವಾನಂದ ಭಾವಿಕಟ್ಟಿ, ವೀರಣ್ಣ ಒಡ್ಡೀನ, ಗುರು ಹಿರೇಮಠ, ವಿಶ್ವೇಶ್ವರಿ ಬ. ಹಿರೇಮಠ, ಡಾ. ಧನವಂತ ಹಾಜವಗೋಳ, ಎಂ.ಎಂ. ಚಿಕ್ಕಮಠ, ಶ್ರೀನಿವಾಸ ವಾಡಪ್ಪಿ, ಕೃಷ್ಣಮೂರ್ತಿ ಬೆಳಗೇರಿ, ಡಾ. ಎಸ್.ಎಂ. ಶಿವಪ್ರಸಾದ ಸೇರಿದಂತೆ ಮುಂತಾದವರಿದ್ದರು.





