ಕುಂದಗೋಳ ಪಟ್ಟಣದಲ್ಲಿರುವ ದ್ವಿಚಕ್ರ ವಾಹನ ಶೋರೂಂಗಳು ಸಾಲದ (ಫೈನಾನ್ಸ್) ಮೂಲಕ ವಾಹನ ಖರೀದಿಸುವ ಗ್ರಾಹಕರಿಂದ ಹೆಚ್ಚುವರಿ ಶುಲ್ಕ ವಸೂಲಿ ಮಾಡುವ ಮೂಲಕ ಕೋಟ್ಯಂತರ ರೂಪಾಯಿ ವಂಚನೆ ಎಸಗುತ್ತಿವೆ ಎಂದು ಆರೋಪಿಸಿ, ಜಯ ಕರ್ನಾಟಕ ಸಂಘಟನೆಯ ತಾಲೂಕು ಘಟಕದ ನೇತೃತ್ವದಲ್ಲಿ ಸೋಮವಾರ ಪ್ರತಿಭಟನೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಒತ್ತಾಯಿಸಿ ತಹಶೀಲ್ದಾರ್ ರಾಜು ಮಾವಕರ ಅವರಿಗೆ ಮನವಿ ಸಲ್ಲಿಸಿದರು.
ಪಟ್ಟಣದ ವೆಂಕಟೇಶ ಮೋಟಾರ್ಸ್ ಹಾಗೂ ಪವಾರ ಮೋಟಾರ್ಸ್ ಶೋರೂಂಗಳ ಎದುರು ಸಂಘಟನೆಯ ಕಾರ್ಯಕರ್ತರು ಜಮಾಯಿಸಿ ಶೋರೂಂ ಮಾಲೀಕರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ತಹಶೀಲ್ದಾರ್ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.
ಕುಂದಗೋಳದ ಶೋರೂಂಗಳ ದರಕ್ಕೂ ಬೇರೆಡೆಗೂ ಅಜಗಜಾಂತರ ವ್ಯತ್ಯಾಸವಿದ್ದು, ವಿಶೇಷವಾಗಿ ಸಾಲದ ಮೂಲಕ ವಾಹನ ಖರೀದಿಸುವ ಗ್ರಾಹಕರೇ ಇವರ ಗುರಿಯಾಗಿದ್ದಾರೆ. ಪ್ರತಿ ಗ್ರಾಹಕರಿಂದ 4,000 ದಿಂದ 7,000 ರೂ. ವರೆಗೆ ಹೆಚ್ಚುವರಿ ಹಣ ದೋಚಲಾಗುತ್ತಿದೆ. ಆರ್‌ಟಿಒ ಹೈಪೋಥಿಕೇಶನ್, ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್‌ನಂತಹ ಶುಲ್ಕಗಳನ್ನು ಗ್ರಾಹಕರು ಪಾವತಿಸಬೇಕಿಲ್ಲದಿದ್ದರೂ, ಅವರಿಂದ ಅಕ್ರಮವಾಗಿ ವಸೂಲಿ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಈ ಅಕ್ರಮದ ಬಗ್ಗೆ ಪ್ರಶ್ನಿಸಿದರೆ, ಇದಕ್ಕೂ ನಿಮಗೂ ಸಂಬಂಧವಿಲ್ಲ, ಕೇಳಲು ನೀವ್ಯಾರು? ಎಂದು ಮಾಲೀಕರು ಉದ್ಧಟತನ ಪ್ರದರ್ಶಿಸುತ್ತಾರೆ. ಶೋರೂಂ ಬಾಡಿಗೆ, ಸಿಬ್ಬಂದಿ ಸಂಬಳದ ನೆಪ ಹೇಳಿ ಗ್ರಾಹಕರನ್ನು ಸುಲಿಯುತ್ತಿದ್ದಾರೆ ಎಂದು ಮನವಿಯಲ್ಲಿ ದೂರಿದ್ದಾರೆ. ತಪ್ಪಿತಸ್ಥರ ವಿರುದ್ಧ ಗ್ರಾಹಕರ ಸಂರಕ್ಷಣಾ ಕಾಯ್ದೆ-2019ರ ಅಡಿಯಲ್ಲಿ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ವಂಚಿತ ಗ್ರಾಹಕರೊಂದಿಗೆ ಶೋರೂಂಗಳ ಎದುರು ಉಗ್ರ ಹೋರಾಟ ನಡೆಸುವುದಾಗಿ ಪ್ರತಿಭಟನಾಕಾರರು ಎಚ್ಚರಿಸಿದರು.
ಮನವಿ ಸ್ವೀಕರಿಸಿದ ತಹಶೀಲ್ದಾರ್ ರಾಜು ಮಾವಕರ ಮಾತನಾಡಿ, ಗ್ರಾಹಕರಿಗೆ ಈ ರೀತಿ ವಂಚನೆ ಮಾಡುವುದು ತಪ್ಪು. ದೂರಿನ ಬಗ್ಗೆ ಕೂಡಲೇ ಸಂಬಂಧಪಟ್ಟ ಶೋರೂಂ ಮಾಲೀಕರನ್ನು ಕರೆಯಿಸಿ ವಿಚಾರಣೆ ನಡೆಸಿ, ಪರಿಶೀಲನೆ ನಡೆಸುವುದಾಗಿ ಭರವಸೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಧಾರವಾಡ | ನ.03 ರಂದು ಹುಬ್ಬಳ್ಳಿಯಲ್ಲಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸುವರ್ಣಮಹೋತ್ಸವ ಕಾರ್ಯಕ್ರಮ
ಈ ಸಂದರ್ಭದಲ್ಲಿ ಜಯ ಕರ್ನಾಟಕ ಸಂಘಟನೆ ತಾಲೂಕು ಅಧ್ಯಕ್ಷ ಪ್ರವೀಣ ಮುದೆಣ್ಣವರ, ಗೌರವಾಧ್ಯಕ್ಷ ಪಾಂಡುರಂಗ ಕುಂಕೂರ, ಶಿವು ಹೊಸಮನಿ, ರವಿ ಶಿರಸಂಗಿ, ಅಶೋಕ ಘೊರ್ಪಡೆ, ದಿನೇಶ ಕಿರೇಸೂರ, ರಾಜು ಮೇಟಿ, ತಯಬ್ ಮಕಾಂದಾರ, ಹುಸೇನಸಾಬ ಹಂಚನಾಳ, ಮಂಜುನಾಥ ತಹಶಿಲ್ದಾರ, ಚಿದಾನಂದ ಕುನ್ನೂರ, ಶಿವಾನಂದ ಅರಳಿಕಟ್ಟಿ, ದಾದಾಪೀರ ಠಪಾಲ, ಶೇಖಪ್ಪ ಹೈಬತ್ತಿ, ಸಿದ್ದು ಪಾಳೆದ, ಸಂತೋಷ ಪವಾರ್, ಸದ್ದಾಂ ನಧಾಫ ಹಲವರು ಇದ್ದರು.





